• Home
  • »
  • News
  • »
  • national-international
  • »
  • ರೆಡ್ಡಿಯ ಪ್ರತೀಕಾರ, ಆಂಧ್ರದ ಶಾಪ, ಸೋನಿಯಾರ ನಿಂದನೆ: ಜಗನ್​​ ಮೋಹನ್​​​ ಬೆಳೆದ ಕಥೆ ರೋಚಕ

ರೆಡ್ಡಿಯ ಪ್ರತೀಕಾರ, ಆಂಧ್ರದ ಶಾಪ, ಸೋನಿಯಾರ ನಿಂದನೆ: ಜಗನ್​​ ಮೋಹನ್​​​ ಬೆಳೆದ ಕಥೆ ರೋಚಕ

ಆಂಧ್ರ ಸಿಎಂ ಜಗನ್​​ ಮೋಹನ್​​ ರೆಡ್ಡಿ

ಆಂಧ್ರ ಸಿಎಂ ಜಗನ್​​ ಮೋಹನ್​​ ರೆಡ್ಡಿ

ಚುನಾವಣೆ ಪ್ರಚಾರದ ವೇಳೆ ಎಲ್ಲ ವರ್ಗಕ್ಕೂ ಒಂದಲ್ಲ ಒಂದು ಭರವಸೆ ನೀಡಿರುವ ಜಗನ್, ಸಂಪನ್ಮೂಲ ಕೊರತೆ ಎದುರಿಸುತ್ತಿರುವ ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಯೂ ಇದೆ.

  • News18
  • Last Updated :
  • Share this:

ಬೆಂಗಳೂರು(ಮೇ.24): ಒಂಬತ್ತು ವರ್ಷಗಳ ಹಿಂದೆ ಸರಿಯಾಗಿ 2010ರಲ್ಲಿ ನಡೆದ ಘಟನೆ. ತಂದೆಯ ಅಕಾಲಿಕ ಮರಣದ ನಂತರ  ವೈಎಸ್​​ಆರ್​​ ಕಾಂಗ್ರೆಸ್​ ಮುಖ್ಯಸ್ಥ ಜಗನ್ ಮೋಹನ್​​ ರೆಡ್ಡಿ ತಾಯಿ ವೈಎಸ್ ವಿಜಯಮ್ಮ ಹಾಗೂ ತಂಗಿ ಶರ್ಮಿಳಾ ಹೈದರಬಾದ್​​ನಿಂದ ನೇರ ದೆಹಲಿಗೆ ತೆರಳುತ್ತಾರೆ. ದೆಹಲಿಯ ಜನಪಥ್ ಸಮೀಪದ ಅಂದಿನ ಕಾಂಗ್ರೆಸ್​​ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರ ನಿವಾಸಕ್ಕೆ ಭೇಟಿ ನೀಡುತ್ತಾರೆ.


ಪತಿಯ ಅಗಲಿಕೆಯಿಂದ ತುಸು ಹೆಚ್ಚೇ ಆತಂಕಕ್ಕೀಡಾಗಿದ್ದ ವೈಎಸ್​​ ವಿಜಯಮ್ಮ ಮತ್ತು ಮಗಳು ಶರ್ಮಿಳಾ ಸೋನಿಯಾ ಗಾಂಧಿಯವರ ಭೇಟಿಗಾಗಿ ನಿವಾಸಕ್ಕೆ ಆಗಮಿಸಿರುತ್ತಾರೆ. ಸಹಜವಾಗಿಯೇ ತಮ್ಮ ಪಕ್ಷದ ಅಧ್ಯಕ್ಷರ ಭೇಟಿಗೆ ಬಂದಿದ್ದ ಇವರಿಗೆ ಒಳ್ಳೆಯ ಸ್ವಾಗತ ಸಿಗುವ ನಿರೀಕ್ಷೆಯಿರುತ್ತದೆ. ಆದರೆ, ಸೋನಿಯಾ ಗಾಂಧಿಯವರ ನಿವಾಸಕ್ಕೆ ಬಂದ ಕೂಡಲೇ ತಮ್ಮ ನಿರೀಕ್ಷೆ ಹುಸಿಯಾಗುತ್ತದೆ.


ಸೋನಿಯಾ ಗಾಂಧಿಯವರನ್ನು ಭೇಟಿಯಾಗಲು ಸುಮಾರು 10 ರಿಂದ 15 ನಿಮಿಷ ಕಾಯಬೇಕಾಗುತ್ತದೆ. ನಂತರ ವಿಜಯಮ್ಮ ಅವರನ್ನು ಎದುರುಗೊಂಡ ಸೋನಿಯಾ ಗಾಂಧಿ ಸರಿಯಾಗಿ ಸ್ವಾಗತಿಸುವುದಿಲ್ಲ. ಅತಿಥಿ ಸತ್ಕಾರವೂ ಮಾಡುವುದಿಲ್ಲ.


ಕಾಂಗ್ರೆಸ್​​ ವರಿಷ್ಠೆ ಸೋನಿಯಾ ಗಾಂಧಿಯವರು ಸುತ್ತಿ ಬಳಸದೆ ನೇರ ವಿಷಯಕ್ಕೆ ಬರುತ್ತಾರೆ. ತನ್ನ ಶಕ್ತಿಪ್ರದರ್ಶನ ಮಾಡಲು ಮುಂದಾಗಿದ್ದ ಜಗನ್ 'ಓದಾರ್ಪು ಯಾತ್ರೆ' ನಿಲ್ಲಿಸಬೇಕು. ನಿಮ್ಮ ಮಗನಿಗೆ ಕೂಡಲೇ ಯಾತ್ರ ನಿಲ್ಲಿಸುವಂತೆ ಸೂಚಿಸಿ ಎಂದು ವಿಜಯಮ್ಮನಿಗೆ ಸೋನಿಯಾ ಗಾಂಧಿಯವರು ಆದೇಶಿಸುತ್ತಾರೆ.


ಈ ಮುನ್ನ ವೈಎಸ್ ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಧಾರುಣ ಸಾವನ್ನಪ್ಪಿದ್ದರು. ಅಂದು ವೈಎಸ್ ರಾಜಶೇಖರ ರೆಡ್ಡಿ ಅಕಾಲಿಕ ಸಾವಿನ ಬೆನ್ನಲ್ಲೇ ಆಂಧ್ರ ಪ್ರದೇಶ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸಂಘರ್ಷ ಏರ್ಪಟ್ಟಿತ್ತು. ರಾಜಶೇಖರ ರೆಡ್ಡಿ ಸಾವಿನ ಸುದ್ದಿ ಕೇಳಿದ ಕೂಡಲೇ ಅಭಿಮಾನಿಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಜಗನ್ ಈ ಓದಾರ್ಪು ಯಾತ್ರೆ ಕೈಗೊಂಡಿರುತ್ತಾರೆ. ಆದರೆ, ಈ ಯಾತ್ರೆ ನಿಲ್ಲಿಸಬೇಕೆಂಬುದು ಸೋನಿಯಾ ಗಾಂಧಿ ಬೇಡಿಕೆಯಾಗಿರುತ್ತದೆ.


ಇದನ್ನೂ ಓದಿ: ಜಗನ್​ ‘ಪಾದಯಾತ್ರೆ’ಗೆ ಭಾರೀ ಬೆಂಬಲ, ಆಂಧ್ರ ರಾಜಕಾರಣದಲ್ಲಿ ತಲ್ಲಣ: ಮೈತ್ರಿಗೆ ಸಜ್ಜಾದ ಬಿಜೆಪಿ?


‘ಓದಾರ್ಪು ಯಾತ್ರೆ’ ಹಿಂದಿನ ಉದ್ದೇಶ ಏನೆಂದು ಹೇಳಲು ಎಷ್ಟೇ ಯತ್ನಿಸಿದರೂ ವಿಜಯಮ್ಮ ಮತ್ತು ಶರ್ಮಿಳಾ ರೆಡ್ಡಿ ಮಾತು ಕೇಳಲೂ ಸೋನಿಯಾ ಗಾಂಧಿಯವರು ಸಿದ್ಧರಿರಲಿಲ್ಲ. ತಾನು ಕೂತಿದ್ದ ಕುರ್ಚಿಯಿಂದ ಮೇಲೆದ್ದ ಅವರು, ವಿಜಯಮ್ಮನಿಗೆ "ಬಾಯಿಮುಚ್ಚಿ" ಎಂದು ದರ್ಪ ತೋರುವ ಸನ್ನಿವೇಶವೂ ನಡೆದೋಗುತ್ತದೆ. ಕೂಡಲೇ ಸಿಟ್ಟಿಗೆದ್ದ ವಿಜಯಮ್ಮ ಮತ್ತು ಶರ್ಮಿಳಾ ಹೈದರಾಬಾದ್​ಗೆ ಮರಳುತ್ತಾರೆ.


ಜಗನ್​​ಗೆ ಈ ಸುದ್ದಿ ತಿಳಿದ ಕೂಡಲೇ ತಾನು ಕಾಂಗ್ರೆಸ್​​ ತೊರೆಯವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್‌ ತೊರೆದ ನಂತರ ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತೇನೆ. ಈ ಪಕ್ಷಕ್ಕೆ ವೈಎಸ್ಆರ್ ಕಾಂಗ್ರೆಸ್ ಎಂದು ಹೆಸರಿಡಲಾಗುತ್ತದೆ ಎಂದು ಜಗನ್​​ ಕುಟುಂಬಕ್ಕೆ ತಿಳಿಸುತ್ತಾರೆ.


ಅದಾದ ನಂತರ ರಾಜಶೇಖರ ರೆಡ್ಡಿಯವರ ಸಾವಿನಿಂದ ತೆರವಾಗಿದ್ದ ಮುಖ್ಯಮಂತ್ರಿ ಪದವಿಯ ಮೇಲೆ ಜಗನ್ ಕಣ್ಣಿಟ್ಟಿದ್ದರಾದರೂ, ಅನುಭವದ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ನಿರಾಕರಿಸಿತ್ತು. ಅಲ್ಲದೇ ರೋಸಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.


ಮುಖ್ಯಮಂತ್ರಿ ಪದವಿಯತ್ತ ಆತುರ ಪಡುತ್ತಿದ್ದ ಜಗನ್ ಇದರಿಂದ ತೀವ್ರ ನಿರಾಸೆಗೊಂಡಿದ್ದರು. ಇದರ ಜತೆ ವೈಎಸ್ಆರ್ ವಿರೋಧಿಗಳು ಬಲಗೊಂಡು, ಜಗನ್ ವಿರುದ್ಧ ಕತ್ತಿ ಮಸೆಯಲು ಆರಂಭಿಸಿದ್ದರು. ಇವೆಲ್ಲದಕ್ಕೂ ತಕ್ಷಣದ ಪ್ರತಿಕ್ರಿಯೆ ನೀಡುತ್ತಿದ್ದ ಜಗನ್, ತಂದೆಯ ಜನಪ್ರಿಯತೆಯ ಲಾಭವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ತಂತ್ರ ರೂಪಿಸಿದರು. ಈ ನಡುವೆ ಜಗನ್​​ ಅವರಿಗೆ ಸಹಾಯ ಮಾಡದಂತೆ ಸೋನಿಯಾ ಗಾಂಧಿ ಮತ್ತು ರಾಹುಲ್​​ ಇಬ್ಬರೂ ಕಾರ್ಯಕರ್ತರಿಗೆ ಸೂಚಿಸಲಾಗುತ್ತದೆ.


ಇದನ್ನೂ ಓದಿ: ಜಗನ್​ ಮೋಹನ್​ ರೆಡ್ಡಿ ಕೊಲೆಗೆ ಯತ್ನ; ಅನುಕಂಪದ ಅಲೆ ಹುಟ್ಟಿಸಲು ಇರಿದೆ ಎಂದ ಆರೋಪಿ


ಇದೇ ಸಂದರ್ಭವನ್ನು ಅವಕಾಶವಾಗಿ ಬಳಿಸಿಕೊಂಡ ಟಿಆರ್​​ಎಸ್ ಮುಖ್ಯಸ್ಥ ಮತ್ತು ಸಿಎಂ ಕೆ.ಸಿ ಚಂದ್ರಶೇಖರ್​​ ರಾವ್​​ ಅವರು, ಪ್ರತ್ಯೇಕ ತೆಲಂಗಾಣ ಹೋರಾಟ ಮತ್ತೆ ಶುರು ಮಾಡಿದರು. ಅತ್ತ ಅಂದಿನ ಸಿಎಂ ರೋಸಯ್ಯ ನೇತೃತ್ವದ ಆಂಧ್ರಪ್ರದೇಶ ಸರ್ಕಾರವೂ ಅಧಃಪತನದತ್ತ ಸಾಗುತ್ತಿತ್ತು. ಕಾಂಗ್ರೆಸ್ಸಿನ ಕೆಲವು ಶಾಸಕ ಮತ್ತು ಸಚಿವರು ವೈಎಸ್​​ಆರ್​ ಕುಟುಂಬದ ಜೊತೆಗಿದ್ದರು.


ಕೆಸಿಆರ್​​ ಮಾತ್ರ ಉಪವಾಸ ಕೂರುವ ಮೂಲಕ ಕೇಂದ್ರವನ್ನು ನಡುಗಿಸಲು ಶುರುಮಾಡಿದರು. ಕಡೆಗೆ ಇವರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಆಂಧ್ರ ವಿಭಜನೆಗೆ ಮುಂದಾಯಿತು. ಆಂಧ್ರಪ್ರದೇಶದ ಯಾವುದೇ ಜನಪ್ರತಿನಿಧಿಗಳನ್ನು ಸಂಪರ್ಕಿಸದೇ  ಕೆಸಿಆರ್​ ಒಬ್ಬ ಹಗಲು ಕನಸುಗಾರ ಎಂದಿದ್ದ ಅಂದಿನ ಗೃಹ ಸಚಿವ ಪಿ ಚಿದಂಬರಂ ಅವರೇ ಪ್ರತ್ಯೇಕ ತೆಲಂಗಾಣ ರಾಜ್ಯದ ಘೋಷಣೆ ಮಾಡಿದರು. ಆಂಧ್ರ ವಿಭಜನೆಗೆ ವೈಎಸ್​​ಆರ್​​ ಕುಟುಂಬ ಅಂದು ಕೂಡ ವಿರೋಧ ವ್ಯಕ್ತಪಡಿಸಿತ್ತು.


2010ರಲ್ಲಿ ರೋಸಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಆಂಧ್ರದಲ್ಲಿ ಅಂತ್ಯಗೊಳ್ಳುತ್ತದೆ.


2009ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಇಳಿದಿದ್ದ ಜಗನ್ ಮೊದಲ ಪ್ರಯತ್ನದಲ್ಲೇ ಕಡಪ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಅಂದು ಜಗನ್ ಕಾಂಗ್ರೆಸ್ ಪಕ್ಷದ ಮೂಲಕ ಸಂಸತ್ತಿಗೆ ಆಯ್ಕೆಯಾಗಿದ್ದರು. ಅಂದು ಅವರ ತಂದೆ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.


ಆದರೆ ಜಗನ್ ಲೋಕಸಭೆಗೆ ಆಯ್ಕೆಯಾದ ಕೆಲವೇ ತಿಂಗಳು ಅಂತರದಲ್ಲಿ ಅವರ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದರು. ಇದು ಜಗನ್ ಪಾಲಿಗೆ ನಿಜಕ್ಕೂ ಅರಗಿಸಿಕೊಳ್ಳಲಾಗದ ಆಘಾತವಾಗಿತ್ತು.


ರಾಜಶೇಖರ ರೆಡ್ಡಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಿಎಂ ಗಾದಿಗೆ ಜಗನ್ ರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದರೆ, ಅತ್ತ ಕಾಂಗ್ರೆಸ್ ನ ಹಿರಿಯ ಮುಖಂಡರ ಗುಂಪೊಂದು ದೆಹಲಿಯಲ್ಲಿ ಲಾಭಿ ಮಾಡಿ ಅವರ ಮುಖ್ಯಮಂತ್ರಿ ಗಾದಿಗೆ ಅಡ್ಡಿಯಾಗಿದ್ದರು. ರಾಜಶೇಖರ್ ರೆಡ್ಡಿ ಸಾವಿನಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಹಂಗಾಮಿ ಮುಖ್ಯಮಂತ್ರಿಯಾಗಿ ಪಕ್ಷದ ಹಿರಿಯ ನಾಯಕ ರೋಸಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು.


ಇದನ್ನೂ ಓದಿ: ಆಂಧ್ರ, ತೆಲಂಗಾಣ ರಾಜಕೀಯ: ಟಿಆರ್​ಎಸ್​, ಟಿಡಿಪಿ ನಡುವೇ ‘ಪವರ್​ ಸ್ಟಾರ್​ ಪಾಲಿಟಿಕ್ಸ್’​..!


ಕೆ.ರೋಸಯ್ಯ ಸಿಎಂ ಆದ ಕೂಡಲೇ ಅಸಮಾಧಾನದ ಕಿಡಿ ಹತ್ತಿತು. ಇಲ್ಲಿಂದ ಯುವ ನಾಯಕನ ರಾಜಕೀಯ ಜೀವನ ಮತ್ತೂಂದು ತಿರುವು ಪಡೆದುಕೊಂಡಿತು. ಜಗನ್‌ ಮೋಹನ್‌ ರೆಡ್ಡಿ ನಡೆಸಿದ ‘ಒದರ್ಪು ಯಾತ್ರೆ’ ಬಂಡಾಯದ ಕಿಡಿ ಹೊತ್ತಿಸಿತು. ಈ ವೇಳೆ, ಕಾಂಗ್ರೆಸ್‌ಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಪಕ್ಷವೇ ವೈಎಸ್‌ಆರ್‌ಸಿಪಿ.


ಕಾಂಗ್ರೆಸ್‌ ತೊರೆದ ಜಗನ್ ಹೊಸ ಪಕ್ಷವೊಂದನ್ನು ಸ್ಥಾಪಿಸಲು ಮುಂದಾಗುತ್ತಾರೆ. ಈ ಪಕ್ಷಕ್ಕೆ ವೈಎಸ್ಆರ್ ಕಾಂಗ್ರೆಸ್ ಎಂದು ಹೆಸರಿಡಲಾಗುತ್ತದೆ. ಮತ್ತೆ ಅದೇ ಕಡಪ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ವೈಎಸ್​ಆರ್​​ ಕಾಂಗ್ರೆಸ್​ನಿಂದ ಆಯ್ಕೆಯಾಗುತ್ತಾರೆ.


ಜಗನ್‌ ಮೋಹನ್‌ ರೆಡ್ಡಿ ಒಬ್ಬ ವ್ಯಾಪಾರಿ. ಸಾಕಷ್ಟು ಕಂನಿಗಳನ್ನು ಹೊಂದಿದ್ದರು. ಈ ಮಧ್ಯೆ ಅಕ್ರಮ ಆಸ್ತಿ ಸೇರಿದಂತೆ ಜಗನ್‌ ಮೋಹನ್‌ ವಿರುದ್ಧ ಸುಮಾರು 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಯಿತು. ಜಗನ್​​ ವಿರುದ್ಧ ಪ್ರಕರಣಗಳ ದಾಖಲು, ಸಿಬಿಐ ಮೂಲಕ, 18 ತಿಂಗಳು ಜೈಲು ಪಾಲು ಹೀಗೆ ಹಲವು ಬ್ರಹ್ಮಾಸ್ತ್ರಗಳನ್ನು ಬಿಟ್ಟಿದ್ದು ಇದೇ ಸೋನಿಯಾ ಗಾಂಧಿ ಎಂಬುದು ಈಗ ಇತಿಹಾಸ.


ಜಗನ್​​ ಅಕ್ಷರಶಃ ನಡೆದದ್ದು ಮುಳ್ಳಿನ ಹಾದಿ. ಈತ ಜೈಲು ಸೇರಿದಾಗ ವೈಎಸ್​ಆರ್​​ ಕಾಂಗ್ರೆಸ್​ ಅನ್ನು ಉಳಿಸಲು ಹೆಣಗಾಡಿದವರು ತಾಯಿ ವಿಜಯಮ್ಮ ಮತ್ತು ಪತ್ನಿ ಭಾರತಿ ರೆಡ್ಡಿ. ಗಾಂಧಿ ಕುಟುಂಬವನ್ನು ಎದುರು ಹಾಕಿಕೊಳ್ಳಲು ದಿಗಿಲುಗೊಂಡಿದ್ದ ವೈಎಸ್​ಆರ್​​ ಕುಟುಂಬದ ಬೆಂಬಲಿಗರು ಅಂತರ ಕಾಯ್ದುಕೊಂಡಿದ್ದರು.


ಜಯದ ಸಂಭ್ರಮದ ಬೆನ್ನಲ್ಲೇ ಜಗನ್ ಅವಿಭಜಿತ ಆಂಧ್ರ ಪ್ರದೇಶದ ಪ್ರಭಾವಿ ನಾಯಕರಾಗುವ ಮುನ್ಸೂಚನೆ ನೀಡಿದ್ದರು. ಆದರೆ ಆ ಬಳಿಕ ಜಗನ್ ರಾಜಕೀಯ ಎದುರಾಳಿಗಳು ಹೆಣೆದ ಬಲೆಗೆ ಸಿಲುಕಿದರು. ಅಕ್ರಮ ಆಸ್ಥಿ ಗಳಿಕೆ ಸಂಬಂಧ ಟಿಡಿಪಿ ಸಲ್ಲಿಕೆ ಮಾಡಿದ್ದ ದೂರನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಜಗನ್ ಬಂಧನಕ್ಕೆ ಆದೇಶ ನೀಡಿತ್ತು.


2012ರ ಮೇ ತಿಂಗಳಲ್ಲಿ ಸಿಬಿಐನಿಂದ ಬಂಧನಕ್ಕೀಡಾದ ಜಗನ್ ಬರೊಬ್ಬರಿ 18 ತಿಂಗಳ ಬಳಿಕ ಬಿಡುಗಡೆಯಾಗಿದ್ದರು. ಜಗನ್ ಬಿಡುಗಡೆ ಹೊತ್ತಿಗೆ ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ ತಾರಕಕ್ಕೇರಿತ್ತು. ಈ ಹೊತ್ತಿನಲ್ಲಿ ತಮ್ಮ ತಂದೆ ರಾಜಶೇಖರ ರೆಡ್ಡಿ ಅವರ ಹೊಂದಿದ್ದ ನಿಲುವನ್ನೇ ಹಿಂಬಾಲಿಸಿದ ಜಗನ್ ಆಂಧ್ರ ಪ್ರದೇಶ ವಿಭಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು.


ಇದನ್ನೂ ಓದಿ: ಆಂಧ್ರದಲ್ಲಿ ಗರಿಗೆದರಿದ ರಾಜಕೀಯ: ವೈಎಸ್​​​ಆರ್​​​ ಮತ್ತು ಟಿಡಿಪಿ ನಡುವೆ ಪವನ್​​ ಆಗಲಿದ್ದಾರಾ ಕಿಂಗ್​​ ಮೇಕರ್​?


ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆ ಮಾಡಿತ್ತು. ಆ ಬಳಿಕ 2014ರಲ್ಲಿ ನಡೆದ ವಿಭಜಿತ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮುಂದೆ ಮಂಡಿಯೂರಿತ್ತು. ಅಂದಿನ ಚುನಾವಣೆಯಲ್ಲಿ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಟಿಡಿಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಪರಿಣಾಮ ಭರ್ಜರಿ ಗೆಲುವಿನೊಂದಿಗೆ ಟಿಡಿಪಿ ಅಧಿಕಾರದ ಗದ್ದುಗೆಗೆ ಏರಿತ್ತು.


2014ರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕೆಲಕಾಲ ಜಗನ್ ಶಾಂರಾಗಿದ್ದರು. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ರನ್ನು 2017ರಲ್ಲಿ ವಿಭಜಿತ ಆಂಧ್ರ ಪ್ರದೇಶಕ್ಕೆ ಕರೆತಂದರು.


ಪ್ರಶಾಂತ್ ಕಿಶೋರ್ ಬಂದದ್ದೇ ಆಂಧ್ರ ಪ್ರದೇಶದಲ್ಲಿ ಜಗನ್ ನಸೀಬು ಬದಲಾಗಿತ್ತು. 2017ರಿಂದಲೇ 2019ರ ವಿಧಾನಸಭೆ ಚುನಾವಣೆಗೆ ರಣತಂತ್ರ ಹೆಣೆಯಲು ಆರಂಭಿಸಿದ ಜಗನ್, ಅವರ ತಂದೆಯಂತೆಯೇ ಆಂಧ್ರ ಪ್ರದೇಶದಾದ್ಯಂತ ಪಾದಯಾತ್ರೆ ನಡೆಸಿದರು. ಬರೊಬ್ಬರಿ 3,641 ಕಿ.ಮೀ ಪಾದಯಾತ್ರೆ ನಡೆಸಿದ ಜಗನ್ ಆಂಧ್ರ ಪ್ರದೇಶದ 13 ಜಿಲ್ಲೆಗಳ ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ವಾಸಿಗಳ ಕಷ್ಟ ಸುಖ ಆಲಿಸಿದರು.


14 ತಿಂಗಳು 341 ದಿನಗಳ ಸುಧೀರ್ಘ ಪಾದಯಾತ್ರೆಯಲ್ಲಿ ಜಗನ್ ಕೋಟಿಗಟ್ಟಲೇ ಜನರನ್ನು ಭೇಟಿ ಮಾಡಿದ್ದರು. ಇದು ವೈಎಸ್ ಆರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ಜಗನ್​​ಗೆ ನೆರವಾಯಿತು. ಜಗನ್​ ಮೋಹನ್​ ರೆಡ್ಡಿ ವಿಶಾಖಪಟ್ಟಣಂ ಏರ್​ಪೋರ್ಟ್​ನಲ್ಲಿದ್ದಾಗ ಅಭಿಮಾನಿಯ ಸೋಗಿನಲ್ಲಿ ವ್ಯಕ್ತಿಯೊಬ್ಬ ಸೆಲ್ಫೀ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾನೆ. ಅದಕ್ಕೆ ಒಪ್ಪಿದ ಜಗನ್​ ಮೋಹನ್​ ರೆಡ್ಡಿ ಸೆಲ್ಫೀ ತೆಗೆದುಕೊಳ್ಳಲು ಪಕ್ಕ ನಿಂತಾಗ, ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಅದೃಷ್ಟವಶಾತ್​​ ಜಗನ್​ ಮೋಹನ್​ ರೆಡ್ಡಿ ಈ ವೇಳೆ ಬದುಕುಳಿತ್ತಾರೆ.


ಇತ್ತೀಚೆಗೆ ಎನ್​​ಡಿಎಯಿಂದ ಹೊರಬಂದ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಉದ್ಧಾರಕ್ಕೆ ಪ್ರಧಾನಿ ಮೋದಿ ಏನೂ ಸಹಾಯ ಮಾಡಲಿಲ್ಲ ಎಂದು ದೂರಿದರು. ಬಳಿಕ ಕಾಂಗ್ರೆಸ್​ ಜತೆಗೆ ಟಿಡಿಪಿ ಮೈತ್ರಿಯಾಗಿ ತೆಲಂಗಾಣದಲ್ಲಿ ಚುನಾವಣೆ ಎದುರಿಸಿತ್ತು. ಆಗ ಟಿಆರ್​​ಎಸ್​​ ಎದು ಮೈತ್ರಿ ಹೀನಾಯವಾಗಿ ಸೋಲಬೇಕಾಯ್ತು.


ಎರದು ದಶಕಗಳಲ್ಲಿಯೇ ಮೊದಲ ಬಾರಿಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಿತು. ಹಾಗೆಯೇ ಪವರ್​ ಸ್ಟಾರ್​​ ಪವನ್​​ ಕಲ್ಯಾಣ್ ಮತ್ತು ಜಗನ್​​ ಕೂಡ ಪ್ರತ್ಯೇಕವಾಗಿ ಚುನಾವಣೆಗೆ ಧುಮುಕಿದರು. ಆದರೆ, ಆಂಧ್ರದ ಜನತೆ ಜಗನ್​​ ಕೈಹಿಡಿದರು. ಅಧಿಕೃತವಾಗಿ 23ಕ್ಕೆ ಬಂದ ಫಲಿತಾಂಶದಲ್ಲಿ ಭಾರೀ ಜಯಭೇರಿ ಬಾರಿಸಿದರು.


ನ್ಯೂಸ್​​-18 ಜೊತೆಗೆ ಮಾತಾಡಿದ ಜಗನ್​​, ನಾನು ಇಷ್ಟು ಸೀಟು ಬರುತ್ತದೆ ಎಂದು ಊಹಿಸಿರಲಿಲ್ಲ. ಈಗ ಜನ ನನ್ನ ಕೈಹಿಡಿದಿದ್ಧಾರೆ. ಇದಕ್ಕೆ ನಾನು ಚಿರಋಣಿ ಎಂದು ಹೇಳಿದರು.


ಆಂಧ್ರಪ್ರದೇಶ ವಿಭಜನೆ ನಂತರ ಸಂಪನ್ಮೂಲ ಕೊರತೆ ಎದುರಾಗಿದೆ. ಹೊಸ ರಾಜಧಾನಿ ಅಮರಾವತಿಯಲ್ಲಿ ಈಗಲೂ ನಿರ್ಮಾಣ ಕಾರ್ಯಗಳು ನಿಧಾನ ಗತಿಯಲ್ಲೇ ಸಾಗುತ್ತಿವೆ. ಚುನಾವಣೆ ಪ್ರಚಾರದ ವೇಳೆ ಎಲ್ಲ ವರ್ಗಕ್ಕೂ ಒಂದಲ್ಲ ಒಂದು ಭರವಸೆ ನೀಡಿರುವ ಜಗನ್, ಸಂಪನ್ಮೂಲ ಕೊರತೆ ಎದುರಿಸುತ್ತಿರುವ ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಯೂ ಇದೆ.


ಸದ್ಯ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ ಎಂದು ಜಗನ್​​ ಬಲವಾಗಿ ನಂಬಿದ್ಧಾರೆ. ಜಗನ್ ಅವರ ರಾಜಕೀಯ ಭವಿಷ್ಯ ಕುಂಠಿತಗೊಳಿಸಲು ಆಂಧ್ರವನ್ನು ವಿಭಜಿಸಿದ ಗಾಂಧಿ ಕುಟುಂಬದವರು ಭಾರತೀಯ ರಾಜಕಾರಣದಲ್ಲಿ ಮೂಲೆಗುಂಪಾಗಿದ್ದಾರೆ. ಗಾಂಧಿ ಕುಟುಂಬವನ್ನು ತಾನು ಕ್ಷಮಿಸಿದ್ಧೇನೆಂದು ಜಗನ್ ಹೇಳುತ್ತಾರಾದರೂ, ಅವರ ಕೆಲ ಅಪ್ತರು ಅದನ್ನು ದೈವ ನಿಯಮ(Divine Justice) ಎನ್ನುತ್ತಾರೆ. ಮತ್ತೆ ಕೆಲವರು ಅದನ್ನು ಆಂಧ್ರದ ಶಾಪ ಎಂದು ಕರೆಯುತ್ತಾರೆ.


ಪ್ರೊಟೆಸ್ಟಂಟ್​​ ಪಂಗಡದ ಕ್ರೈಸ್ತರಾಗಿರುವ ಜಗನ್ಮೋಹನ್ ರೆಡ್ಡಿ ಅವರು ಶಾಪಕ್ಕಿಂತ ಹೆಚ್ಚಾಗಿ ದೈವ ನಿಯಮವನ್ನು ನಂಬುತ್ತಾರೆ.


(ಲೇಖಕರು: ಗಣೇಶ್‌ ನಚಿಕೇತು)
--------------ಇದನ್ನೂ ಓದಿ: ಏಕಾಂಗಿ ಸ್ಪರ್ಧೆಗೆ ಪವನ್​ ಕಲ್ಯಾಣ್​ ನಿರ್ಧಾರ; ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆಯಾ ಆಂಧ್ರ ರಾಜಕೀಯ

Published by:Ganesh Nachikethu
First published: