ತಿರುವನಂತಪುರಂ: ದಕ್ಷಿಣ ಭಾರತದ ಹೆಸರಾಂತ ಶಬರಿಮಲೆಯ ಅಯ್ಯಪ್ಪ (Sabarimala Ayyappa) ದೇವಸ್ಥಾನದಲ್ಲಿ ಈ ಬಾರಿಯ ಮಂಡಲಂ-ಮಕರವಿಳಕ್ಕು (Mandalam-Makaravilakku) ಯಾತ್ರೆಯಿಂದ ಬರೋಬ್ಬರಿ 351 ಕೋಟಿ ರೂ ಆದಾಯ ಸಂಗ್ರಹವಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯ ಆದಾಯ ಸಂಗ್ರಹ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ದೇವರಿಗೆ ಸಮರ್ಪಿಸಿರುವ ನಾಣ್ಯಗಳ ಎಣಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಅದನ್ನು ಹೊರತುಪಡಿಸಿಯೇ 351 ಕೋಟಿ ರೂ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.
" ಪ್ರಸ್ತುತ ಲೆಕ್ಕ ಸಿಕ್ಕಿರುವ 351 ಕೋಟಿ ರೂ. ಯಂತ್ರಗಳ ಸಹಾಯದಿಂದ ಎಣಿಕೆ ಮಾಡಲಾಗಿದೆ. ನಾಣ್ಯಗಳ ಎಣಿಕೆಯನ್ನು ಯಂತ್ರಗಳಿಂದ ಮಾಡಲಾಗದ ಕಾರಣ ಮನುಷ್ಯರೇ ಲೆಕ್ಕ ಮಾಡಬೇಕಾಗಿದೆ. ಈಗ ನೌಕರರಿಗೆ ವಿಶ್ರಾಂತಿ ನೀಡಿದ್ದೇವೆ. ಫೆಬ್ರವರಿ 5 ರಂದು ಎಣಿಕೆ ಕಾರ್ಯ ಪುನಾರಂಭಗೊಳ್ಳಲಿದೆ " ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಅನಂತಗೋಪನ್ ತಿಳಿಸಿದ್ದಾರೆ.
ಕೋವಿಡ್ ತೆರವು ನಿರ್ಬಂಧ ತೆರವಿನಿಂದ ಭಕ್ತರ ಹೆಚ್ಚಳ
ಕೋವಿಡ್-19 ನಿರ್ಬಂಧಗಳನ್ನು ತೆರವುಗಳಿಸಿದ ನಂತರ ಭಾರೀ ಸಂಖ್ಯೆಯ ಭಕ್ತರು ಅಯ್ಯಪ್ಪನ ಸನ್ನಿದಾನಕ್ಕೆ ಆಗಮಿಸಿರುವುದರಿಂದ ಆದಾಯ ಪ್ರಮಾಣ ಹೆಚ್ಚಾಗಿದೆ. ನವೆಂಬರ್ನಿಂದ ಜನವರಿವರೆಗೆ ಸುಮಾರು 60 ದಿನಗಳ ಕಾಲ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗೆ ಸುಮಾರು 30 ಲಕ್ಷ ಭಕ್ತರ ಸಮೂಹ ಆಗಮಿಸಿದೆ. ಹಾಗಾಗಿ ಆದಾಯ ಸಂಗ್ರಹ ದಾಖಲೆಯನ್ನು ಮುಟ್ಟಿದೆ. ಇನ್ನೂ ನಾಣ್ಯಗಳನ್ನು ಎಣಿಸುವುದಕ್ಕೆ ಹಲವು ದಿನಗಳ ಅಗತ್ಯವಿದೆ. ಇದನ್ನು ಸುಮಾರು 600 ಜನರು ಕೆಲಸ ಮಾಡುತ್ತಿದ್ದು, ಇದು ಅಯ್ಯಪ್ಪನ ಆದಾಯವನ್ನು ಮತ್ತಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ: Ayyappa Swamy: ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸೋದೇಕೆ? ಶನಿಗೂ ಇದಕ್ಕೂ ಇರೋ ಸಂಬಂಧವೇನು?
ಭಕ್ತರ ಸಂಖ್ಯೆಯಲ್ಲಿ ಶೇ.20ರಷ್ಟು ಏರಿಕೆ
ಶಬರಿಮಲೆಯಲ್ಲಿ ಭಕ್ತರು 41-ದಿನಗಳ ಕಾಲ ಮಾಡುವ ವೃತವನ್ನು ಮಂಡಲ ಕಲಾಂ ಅಥವಾ ಉತ್ಸವ ಎಂದು ಕರೆಯಲಾಗುತ್ತದೆ. ಇದು ಮಲಯಾಳಂ ಯುಗದ ವೃಶ್ಚಿಕಂ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಈ ವರ್ಷ ಮಂಡಲಂ ಹಬ್ಬವು ನವೆಂಬರ್ 17, 2022 ರಿಂದ ಡಿಸೆಂಬರ್ 27, 2022 ರವರೆಗೆ ನಡೆದಿತ್ತು. ಮಕರವಿಳಕ್ಕು ಉತ್ಸವವು ಡಿಸೆಂಬರ್ 30 ಜನವರಿ 14 ರಂದು ಮಕರವಿಳಕ್ಕುವಿನೊಂದಿಗೆ ಜನವರಿ 20 ರಂದು ಕೊನೆಗೊಂಡಿತ್ತು. ಕಳೆದ ಬಾರಿಗಿಂತ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಶೇ. 20ರಷ್ಟು ಹೆಚ್ಚಾಗಿತ್ತು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಪ್ರಸಾದ ಮಾರಾಟದಿಂದ ಬರುವ ಆದಾಯ
ಒಂದು ಋತುವಿನಲ್ಲಿ ಬರುವ ಆದಾಯದಲ್ಲಿ ಮೂರನೇ ಒಂದು ಭಾಗದಷ್ಟು ಆದಾಯವು ಅರವನ ಮತ್ತು ಅಪ್ಪಂ ಅನ್ನು ಒಳಗೊಂಡಿರುವ ಪ್ರಸಾದದ ಮಾರಾಟದಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ಹುಂಡಿ ಕಾಣಿಕೆಯಿಂದ ಬರುವ ಆದಾಯ ಎರಡನೇ ಗರಿಷ್ಠ ಆದಾಯವಾಗಿದೆ. ಅರವನದ ಪ್ರಸಾದದ ಕಂಟೈನರ್ ಅನ್ನು 100 ರೂಗೆ ಮಾರಾಟ ಮಾಡಲಾಗುತ್ತದೆ. ಅರವನ ಪ್ರಸಾದಕ್ಕೆ ಹೋಲಿಸಿದರೆ ಅಪ್ಪಂ ಮಾರಾಟದಿಂದ ಬರುವ ಆದಾಯ ಕಡಿಮೆಯಾಗಿದೆ.
ಹಿಂದಿನ ದಾಖಲೆ 270 ಕೋಟಿರೂ
ಈ ಬಾರಿ ನಾಣ್ಯಗಳನ್ನು ಹೊರೆತುಪಡಿಸಿಯೇ ಈಗಾಗಲೇ 351 ಕೋಟಿ ರೂ ಲೆಕ್ಕ ಸಿಕ್ಕಿದೆ. ಇನ್ನು ನಾಣ್ಯಗಳು ಒಂದಷ್ಟು ಕೋಟಿ ರೂಗಳಾಗಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. 2017-18 ಋತುವಿನಲ್ಲಿ ಅಯ್ಯಪ್ಪನ ಸನ್ನಿದಾನದಲ್ಲಿ 270 ಕೋಟಿ ರೂ ಸಂಗ್ರಹವಾಗಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ 2022-23ರ ಋತುವಿನಲ್ಲಿ ಹೆಚ್ಚು ಕಡಿಮೆ 90ರಿಂದ 100 ಕೋಟಿ ರೂ ಹೆಚ್ಚು ಆದಾಯ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.
ಗೊಂದಲದಲ್ಲಿ ಅಧಿಕಾರಿಗಳು
ಯಾತ್ರಾರ್ಥಿಗಳು ‘ಕಣಿಕ್ಕ’(ಕಾಣಿಕೆ) ರೂಪದಲ್ಲಿ ಅರ್ಪಿಸುವ ಕೋಟ್ಯಂತರ ರೂಪಾಯಿ ಮೌಲ್ಯದ ನಾಣ್ಯಗಳನ್ನು ಲೆಕ್ಕ ಮಾಡದೇ ಹಾಗೆಯೇ ಬಿಡಲಾಗಿದೆ. ಅವುಗಳನ್ನು ಬೆಟ್ಟದ ದೇಗುಲದ ಆವರಣದ ಒಂದು ದೊಡ್ಡ ಸ್ಟೋರ್ ರೂಂನಲ್ಲಿ ಇರಿಸಲಾಗಿದೆ. ಸಂಗ್ರಹವಾಗಿರುವ ನಾಣ್ಯಗಳ ಗಾತ್ರವನ್ನು ಗಮನಿಸಿದರೆ, ಟಿಡಿಬಿ ಅಧಿಕಾರಿಗಳು ಅವುಗಳನ್ನು ಎಣಿಕೆ ಮಾಡಬೇಕೆ ಅಥವಾ ತೂಕ ಮಾಡಬೇಕಾ ಎಂಬ ಎರಡು ಮನಸ್ಸಿನಲ್ಲಿದ್ದಾರೆ. ಏಕೆಂದರೆ ಕಳೆದ ಬಾರಿ ತೂಕದ ವಿಧಾನದಿಂದ ಟಿಬಿಬಿ ಸ್ವಲ್ಪ ಹಣವನ್ನು ಕಳೆದುಕೊಂಡಿತ್ತು. ಒಂದೇ ಮುಖಬೆಲೆಯುಳ್ಳ ನಾಣ್ಯಗಳಲ್ಲಿ ತೂಕವಿರುವ ನಾಣ್ಯಗಳು ಹಾಗೂ ಲೈಟ್ವೇಟ್ ನಾಣ್ಯಗಳು ಇರುವುದರಿಂದ ಈ ಸಮಸ್ಯೆ ತಲೆದೋರಿದೆ. ಆದರೂ ಅಧಿಕಾರಿಗಳು ನಾಣ್ಯಗಳ ಎಣಿಕೆ ಕಾರ್ಯ ತೀವ್ರ ದಣಿವನ್ನು ಉಂಟುಮಾಡುವುದರಿಂದ ತೂಕ ಮಾಡಲು ಅನುಮತಿ ಕೋರಿ ಕೇರಳ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ