Rakesh Tikait| ರೈತರ ಹೋರಾಟ 10 ತಿಂಗಳಲ್ಲ 10 ವರ್ಷವಾದರೂ ಮುಂದುವರೆಯುತ್ತದೆ; ರೈತ ಮುಖಂಡ ರಾಕೇಶ್ ಟಿಕಾಯತ್

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭಗೊಂಡು 10 ತಿಂಗಳುಗಳು ಕಳೆದಿವೆ. ಒಂದು ವೇಳೆ ನಾವು ಈ ಕಾಯ್ದೆಗಳ ವಿರುದ್ಧ ಇನ್ನೂ 10 ವರ್ಷಗಳ ಕಾಲ ಪ್ರತಿಭಟನೆ ನಡೆಸಲೂ ಸಿದ್ಧರಿದ್ದೇವೆ ಎಂಬುದನ್ನು ಸರಕಾರವು ಕಿವಿಗೊಟ್ಟು ಕೇಳಬೇಕು ಎಂದು ರಾಕೇಶ್ ಟಿಕಾಯತ್​ ತಿಳಿಸಿದ್ದಾರೆ.

ರಾಕೇಶ್ ಟಿಕಾಯತ್.

ರಾಕೇಶ್ ಟಿಕಾಯತ್.

 • Share this:
  ನವ ದೆಹಲಿ (ಸೆಪ್ಟೆಂಬರ್​ 27); ಕೇಂದ್ರ ಸರ್ಕಾರದ (Central Govrnment) ವಿವಾದಾತ್ಮಕ ಕೃಷಿ ಕಾಯ್ದೆಗಳ (Agriculture Bill) ವಿರುದ್ಧ ಕಳೆದ ಒಂದು ವರ್ಷದಿಂದ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಹೋರಾಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪರಿಣಾಮ ಇಂದು ರೈತ ಸಂಘಟನೆಗಳು ದೇಶದಾದ್ಯಂತ ಬಂದ್​ಗೆ ಕರೆ ನೀಡಿದ್ದು, ಈ ಬಂದ್​ ಸಹ ಯಶಸ್ವಿಯಾಗಿದೆ. ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಇಂದು ಹೇಳಿಕೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್​ (Rakesh Tikait), " ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮುಂದಿನ 10 ವರ್ಷಗಳವರೆಗೂ ಚಳವಳಿ ನಡೆಸಲು ಸಿದ್ಧರಿದ್ದಾರೆ. ಆದರೆ ಈ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಲು ಯಾವತ್ತೂ ಬಿಡುವುದಿಲ್ಲ" ಎಂದು ಘೋಷಿಸಿದ್ದಾರೆ.

  ಹರಿಯಾಣದ ಪಾಣಿಪತ್​ನಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ನಲ್ಲಿ ಮಾತನಾಡಿರುವ ರಾಕೇಶ್ ಟಿಕಾಯತ್, "ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭಗೊಂಡು 10 ತಿಂಗಳುಗಳು ಕಳೆದಿವೆ. ಒಂದು ವೇಳೆ ನಾವು ಈ ಕಾಯ್ದೆಗಳ ವಿರುದ್ಧ ಇನ್ನೂ 10 ವರ್ಷಗಳ ಕಾಲ ಪ್ರತಿಭಟನೆ ನಡೆಸಲೂ ಸಿದ್ಧರಿದ್ದೇವೆ ಎಂಬುದನ್ನು ಸರಕಾರವು ಕಿವಿಗೊಟ್ಟು ಕೇಳಬೇಕು. ಈ ಕಾಯ್ದೆಗಳನ್ನು ರದ್ದುಪಡಿಸುವ ತನಕವೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ" ಎಂದು ಟಿಕಾಯತ್ ಘೋಷಿಸಿದ್ದಾರೆ. ಅಲ್ಲದೆ, ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದೆ ಇದ್ದಲ್ಲಿ ತಮ್ಮ ಚಳವಳಿಯನ್ನು ರೈತರು ಇನ್ನಷ್ಟು ತೀವ್ರಗೊಳಿಸಲಿದ್ದಾರೆಂದು ಅವರು ಹೇಳಿದರು.

  ದಿಲ್ಲಿಯತ್ತ ಸಾಗಬೇಕಾದ ಅಗತ್ಯ ಬಂದರೂ ಬರಬಹುದಾದೆಂದು ಹೇಳಿದ ಟಿಕಾಯತ್ ಅದಕ್ಕಾಗಿ ಟ್ರಾಕ್ಟರ್ ಗಳನ್ನು ಸಜ್ಜಾಗಿರಿಸುವಂತೆ ಕರೆ ನೀಡಿದರು.‌ ಒಂದು ವೇಳೆ ಈಗಿನ ಸರಕಾರವು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದು ಪಡಿಸದೆ ಇದ್ದಲ್ಲಿ ಭವಿಷ್ಯದಲ್ಲಿ ಅಧಿಕಾರಕ್ಕೇರುವ ಸರಕಾರಗಳಾದರೂ ಅದನ್ನು ಹಿಂಪಡೆಯಲೇಬೇಕಾಗುತ್ತದೆ ಎಂದು ಟಿಕಾಯತ್ ಎಚ್ಚರಿಕೆ ನೀಡಿದರು.

  ಪ್ರತಿಭಟನೆಯನ್ನು ಬಲಪಡಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಟಿಕಾಯತ್ ಅವರು ಯುವರೈತರನ್ನು ಆಗ್ರಹಿಸಿದರು. ರೈತರ ಪ್ರತಿಭಟನೆಗೆ ಕಳಂಕ ಹಚ್ಚಲು ನಡೆಯುತ್ತಿರುವ ಅಭಿಯಾನವನ್ನು ಮಟ್ಟಹಾಕುವ ಅತಿ ದೊಡ್ಡ ಜವಾಬ್ದಾರಿ ಯುವ ರೈತರ ಹೆಗಲ ಮೇಲಿದೆಯೆಂದು ಅವರು ಹೇಳಿದರು. ಆರಂಭದಲ್ಲಿ ಕೇಂದ್ರ ಸರಕಾರವು ಈ ಪ್ರತಿಭಟನೆಯು ಕೇವಲ ಪಂಜಾಬ್ ಗಷ್ಟೇ ಸೀಮಿತವಾಗಿದೆಯೆಂದು ಬಿಂಬಿಸಲು ಯತ್ನಿಸಿತ್ತು.

  ಇದನ್ನೂ ಓದಿ: Bharat Bandh| ರೈತರು ಕರೆ ನೀಡಿರುವ ಭಾರತ್ ಬಂದ್; ಪಂಜಾಬ್-ಹರಿಯಾಣ-ಬಂಗಾಳ ಸ್ತಬ್ಧ, ಚೆನ್ನೈನಲ್ಲಿ ರೈಲ್ ರೋಖೋ!

  ಆನಂತರ ರೈತರನ್ನು ಬೇರೆ ಬೇರೆ ಹೆಸರುಗಳಿಂದ ಬ್ರಾಂಡ್ ಮಾಡಲಾಯಿತು. ಅಲ್ಲದೆ ಇದು ಶ್ರೀಮಂತರ ರೈತರ ಪ್ರತಿಭಟನೆ ಎಂದು ಬಿಂಬಿಸುವ ಯತ್ನವೂ ನಡೆದಿತ್ತು ಎಂದು ಟಿಕಾಯತ್ ಹೇಳಿದರು. ಇಂದಿನ ಭಾರತ್ ಬಂದ್‌ ಎಲ್ಲಾ ರಾಜ್ಯಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬಂದ್ ಯಶಸ್ವಿಯಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: