RBI Repo Rate: ರೆಪೋ ಬದಲಾವಣೆ ಇಲ್ಲ; ಹಣದುಬ್ಬರ ಅಂದಾಜು ಶೇ. 5.7; ಜಿಡಿಪಿ ವೃದ್ಧಿ ಅಂದಾಜು ಶೇ. 9.5

RBI Repo Rate: ಆರ್​ಬಿಐನ Repo ದರ ಶೇ 4ರಲ್ಲೇ ಮುಂದುವರಿಯಲಿದೆ. ಈ ಹಣಕಾಸು ವರ್ಷದಲ್ಲಿ ಶೇ. 9.5ರಷ್ಟು ಜಿಡಿಪಿ ವೃದ್ಧಿಯಾಗಬಹುದು ಎಂಬ ಲೆಕ್ಕಾಚಾರ ಮುಂದುವರಿದಿದೆ. ಹಣದುಬ್ಬರ ಶೇ. 5.7ರಷ್ಟು ಇರಬಹುದು ಎಂದು ಅಂದಾಜು ಮಾಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್

  • News18
  • Last Updated :
  • Share this:
ನವದೆಹಲಿ, ಆ. 06: ಎಡಬಿಡದೆ ಕಾಡುತ್ತಿರುವ ಕೊರೋನಾ ವೈರಸ್ ಮಹಾಮಾರಿ ಮಧ್ಯೆ ಭಾರತದ ಆರ್ಥಿಕತೆ ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ ವರ್ಷದ ಲಾಕ್ ಡೌನ್​ನಿಂದಾಗಿ ಪ್ರಪಾತಕ್ಕೆ ಕುಸಿದಿದ್ದ ಆರ್ಥಿಕತೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ತ್ರೈಮಾಸಿಕ ಅವಧಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಬಹಳ ಮಹತ್ವ ಪಡೆಯುತ್ತವೆ. ಇಂದು ನಡೆದ ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಹಣದುಬ್ಬರ ಮತ್ತು ಜಿಡಿಪಿ ಬೆಳವಣಿಗೆ ಬಗ್ಗೆ ಇದ್ದ ನಿರೀಕ್ಷೆಯನ್ನು ಪರಿಷ್ಕರಿಸಲಾಯಿತು. ಹಾಗೆಯೇ, ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಯಿತು. ಹಣಕಾಸು ನೀತಿ ಸಮಿತಿಯ ಸಭೆ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡರು.

2022 ಮಾರ್ಚ್​ಗೆ ಅಂತ್ಯವಾಗುವ ಹಣಕಾಸು ವರ್ಷದಲ್ಲಿ ಸಿಪಿಐ (ಕನ್ಸೂಮರ್ ಪ್ರೈಸ್ ಇಂಡೆಕ್ಸ್) ಆಧಾರಿತ ಹಣದುಬ್ಬರ ಶೇ. 5.7 ಇರುವ ಸಾಧ್ಯತೆ ಇದೆ ಎಂದು ಆರ್​ಬಿಐ ಒಂದು ಅಂದಾಜಿಗೆ ಬಂದಿದೆ. ಕಳೆದ ಬಾರಿ ಅದು ಇದೇ ಅವಧಿಯಲ್ಲಿ ಸಿಪಿಐ ಉಬ್ಬರ ಶೇ. 5.1 ಆಗಬಹುದು ಎಂದು ಅಂದಾಜು ಮಾಡಿತ್ತು. ಈಗ ತನ್ನ ಅಂದಾಜಿನಲ್ಲಿ ಬಲದಾವಣೆ ಮಾಡಿದೆ. ಆದರೆ, ಮುಂದಿನ ಹಣಕಾಸುವ ವರ್ಷದಲ್ಲಿ ಹಣದುಬ್ಬರ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಶಕ್ತಿಕಾಂತ್ ದಾಸ್ ಆಶಿಸಿದರು. ವಿವಿಧ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯು ಹಣದುಬ್ಬರ ಏರಿಕೆಗೆ ಕಾರಣವಾಗುತ್ತದೆ ಎಂದು ಈ ಹಿಂದೆಯೇ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Tokyo Olympics- ಅದಿತಿ ಅದ್ವಿತೀಯ ಆಟ; ಸೆಮಿಫೈನಲ್​ಗೆ ಬಜರಂಗ್; ಭಾರತ ಇನ್ನೆಷ್ಟು ಗೆಲ್ಲುತ್ತೆ ಪದಕ?

ಇನ್ನು, ಎಲ್ಲರ ಗಮನ ನೆಟ್ಟಿರುವ ಜಿಡಿಪಿ ಬೆಳವಣಿಗೆ ಬಗ್ಗೆ ಆರ್​ಬಿಐ ಮಾಡಿರುವ ಅಂದಾಜಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 9.5ರಷ್ಟು ವೃದ್ಧಿ ಕಾಣುತ್ತದೆ ಎಂದು ತಾನು ಈ ಹಿಂದೆ ಅಂದಾಜು ಮಾಡಿದ್ದ ನಿಲುವಿಗೆ ಆರ್​ಬಿಐ ಈಗಲೂ ಬದ್ಧವಾಗಿದೆ. ಕಳೆದ ವರ್ಷ ಮಾಡಲಾಗಿದ್ದ ಸುದೀರ್ಘ ಲಾಕ್ ಡೌನ್ ಬಳಿಕ ಆರ್ಧಿತಕತೆ ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಂಡಿತ್ತು. 2021-22ರ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 21.4ರಷ್ಟು ವೃದ್ಧಿ ಕಂಡಿತು. ಬಳಿಕ ಕೋವಿಡ್ ಕಾರಣಕ್ಕೆ ವಿವಿಧೆಡೆ ನಿರ್ಬಂಧಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳವಣಿಗೆ ಕಡಿಮೆಯಾಗುತ್ತಾ ಹೋಗುತ್ತಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 9.5 ಇರಬಹುದು ಎಂಬುದು ಆರ್​ಬಿಐ ಅಂದಾಜು.

ಇದೇ ವೇಳೆ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಅದರಂತೆ ರಿಪೋ ದರ ಶೇ. 4 ಹಾಗೂ ರಿವರ್ಸ್ ರಿಪೋ ದರ ಶೇ. 3.35ರಲ್ಲೇ ಮುಂದುವರಿಯಲಿದೆ. ಇಲ್ಲಿ ರೆಪೋ ದರ ಎಂದರೆ ಆರ್​ಬಿಐ ತನ್ನ ಅಧೀನದ ಕಮರ್ಷಿಯಲ್ ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಇದು ಕಮರ್ಷಿಯಲ್ ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯ ಮೇಲೆ ಪರಿಣಾಮ ಬೀರಬಲ್ಲುದು. ರೆಪೋ ದರ ಹೆಚ್ಚಾದರೆ ಬ್ಯಾಂಕುಗಳ ಬಡ್ಡಿ ದರ ಕೂಡ ಹೆಚ್ಚುತ್ತದೆ. ಇನ್ನು, ರಿವರ್ಸ್ ರೆಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಲ್ಲಿ ಠೇವಣಿ ಇಡುವ ಹಣದ ಮೇಲೆ ಸಿಗುವ ಬಡ್ಡಿಯಾಗಿದೆ.
Published by:Vijayasarthy SN
First published: