ಮೊರಾಟೋರಿಯಂನಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್; ಡಿ. 16ರವರೆಗೆ ಹಣ ಹಿಂಪಡೆಯುವ ಮಿತಿ 25 ಸಾವಿರ
ಡಿಬಿಎಸ್ ಮತ್ತು ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ ಪ್ರಕ್ರಿಯೆಯ ರೂಪುರೇಖೆಯನ್ನು ರಚಿಸಿ ಸಾರ್ವಜನಿಕರ ಅವಗಾಹನೆಗೆ ಇಡಲಾಗಿದೆ. ಅದರ ಕರಡು ಯೋಜನೆಯ ಪ್ರಕಾರ, ಡಿಬಿಎಸ್ ಇಂಡಿಯಾ ಸಂಸ್ಥೆಯು ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು ವಿಲೀನಗೊಳಿಸಲು ನೆರವಾಗುವಂತೆ ತನ್ನ ಸ್ವಾಮ್ಯದ ಡಿಬಿಐಎಲ್ಗೆ 2,500 ಕೋಟಿ ಬಂಡವಾಳ ಒದಗಿಸಲಿದೆ.
ನವದೆಹಲಿ(ಡಿ. 18): ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ (ಡಿಬಿಐಎಲ್) ಜೊತೆ ವಿಲೀನ ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಎಲ್ವಿಬಿಯನ್ನು ಒಂದು ತಿಂಗಳ ಕಾಲ ಮೊರಾಟೋರಿಯಮ್ನಲ್ಲಿ ಇಡಲಾಗಿದೆ. ಈ ಒಂದು ತಿಂಗಳ ಅವಧಿಯಲ್ಲಿ ಆ ಬ್ಯಾಂಕ್ನ ಗ್ರಾಹಕರು ಹಣ ಹಿಂಪಡೆಯುವ ಪ್ರಮಾಣಕ್ಕೆ ಮಿತಿ ಹಾಕಲಾಗಿದೆ. ಗರಿಷ್ಠ 25 ಸಾವಿರ ರೂ ಮಾತ್ರ ವಿತ್ಡ್ರಾ ಮಾಡಲು ಅವಕಾಶ ಕೊಡಲಾಗಿದೆ. ಆರ್ಬಿಐನ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಒಂದು ತಿಂಗಳ ಮೊರಾಟೋರಿಯಮ್ ಅವಧಿಯವರೆಗೆ ಎಲ್ವಿಬಿ ಮಂಡಳಿಯನ್ನು ಆರ್ಬಿಐ ಸೂಪರ್ಸೀಡ್ ಮಾಡಿ ಕೆನರಾ ಬ್ಯಾಂಕ್ನ ಮಾಜಿ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ ಟಿ.ಎನ್. ಮನೋಹರನ್ ಅವರನ್ನ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಡಿಬಿಎಸ್ ಮತ್ತು ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ ಪ್ರಕ್ರಿಯೆಯ ರೂಪುರೇಖೆಯನ್ನು ರಚಿಸಿ ಸಾರ್ವಜನಿಕರ ಅವಗಾಹನೆಗೆ ಇಡಲಾಗಿದೆ. ಅದರ ಕರಡು ಯೋಜನೆಯ ಪ್ರಕಾರ, ಡಿಬಿಎಸ್ ಇಂಡಿಯಾ ಸಂಸ್ಥೆಯು ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು ವಿಲೀನಗೊಳಿಸಲು ನೆರವಾಗುವಂತೆ ತನ್ನ ಸ್ವಾಮ್ಯದ ಡಿಬಿಐಎಲ್ಗೆ 2,500 ಕೋಟಿ ಬಂಡವಾಳ ಒದಗಿಸಲಿದೆ.
ಈ ವರ್ಷ ಆರ್ಥಿಕ ಸಂಕಷ್ಟ ಅನುಭವಿಸಿದ ಎರಡನೇ ಖಾಸಗಿ ಬ್ಯಾಂಕ್ ಇದಾಗಿದೆ. ಮಾರ್ಚ್ ತಿಂಗಳಲ್ಲಿ ಯೆಸ್ ಬ್ಯಾಂಕ್ ಕೂಡ ಮುಚ್ಚುವ ಹಾದಿಯಲ್ಲಿತ್ತು. ಆಗ ಅದನ್ನ ಮೊರಾಟೋರಿಯಮ್ನಲ್ಲಿ ಇರಿಸಲಾಗಿತ್ತು. ಎಸ್ಬಿಐ ಮೂಲಕ ಅದಕ್ಕೆ ಪುನಶ್ಚೇತನ ಸಿಕ್ಕಿತ್ತು. ಯೆಸ್ ಬ್ಯಾಂಕ್ನ ಶೇ. 45ರಷ್ಟು ಪಾಲನ್ನು ಎಸ್ಬಿಐ 7,250 ಕೋಟಿ ರೂಪಾಯಿಗೆ ಕೊಂಡು ಯೆಸ್ ಬ್ಯಾಂಕ್ ಗ್ರಾಹಕರ ಆತಂಕವನ್ನು ದೂರ ಮಾಡಿತ್ತು.
ಇದೇ ವೇಳೆ, ಮೊರಾಟೋರಿಯಮ್ನಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಗ್ರಾಹಕರು ಡಿ. 16ರವರೆಗೆ 25 ಸಾವಿರ ರೂ ಗಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡುವಂತಿಲ್ಲ. ವೈದ್ಯಕೀಯ ಚಿಕಿತ್ಸೆ, ಮದುವೆ ಇತ್ಯಾದಿ ತುರ್ತು ಹಾಗೂ ಅನಿವಾರ್ಯ ಅಗತ್ಯಗಳಿಗೆ ಮಾತ್ರ ಹೆಚ್ಚಿನ ಹಣವನ್ನು ಪಡೆಯಬಹುದು. ಅದೂ 5 ಲಕ್ಷ ರೂವನ್ನು ಮೀರುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಕಳೆದ ಮೂರು ವರ್ಷಗಳಿಂದ ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಹಣಕಾಸು ಸ್ಥಿತಿ ಹದಗೆಡುತ್ತ ಬಂದಿದೆ. ಇದೇ ಮಾರ್ಚ್ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಈ ಬ್ಯಾಂಕ್ 836 ಕೋಟಿ ನಷ್ಟ ಅನುಭವಿಸಿತ್ತು. ಕೆಟ್ಟ ಸಾಲದ (ಎನ್ಪಿಎ) ಹೊರೆ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಈ ಅವಧಿಯಲ್ಲಿ ಸರಿಯಾದ ಬಂಡವಾಳವನ್ನೂ ಶೇಖರಿಸಲು ಎಲ್ವಿಬಿ ವಿಫಲವಾಗಿದೆ. ಕಳೆದ ವರ್ಷವೇ ಲಕ್ಷ್ಮೀ ವಿಲಾಸ್ ಬ್ಯಾಂಕ್ ಇಂಡಿಯಾ ಬುಲ್ಸ್ನ ಹಣಕಾಸು ಸಂಸ್ಥೆಗಳೊಂದಿಗೆ ವಿಲೀನಗೊಳಿಸಲು ಅನುಮತಿ ನೀಡಬೇಕೆಂದು ಆರ್ಬಿಐ ಅನ್ನು ಕೋರಿಕೊಂಡಿತ್ತು. ಆದರೆ, ರಿಯಲ್ ಎಸ್ಟೇಟ್ ಕ್ಷೇತ್ರದ ಸಂಸ್ಥೆಗಳನ್ನ ಕರ್ಮಿಷಯಲ್ ಬ್ಯಾಂಕ್ ವ್ಯಾಪ್ತಿಗೆ ತರಲು ಆರ್ಬಿಐ ಒಪ್ಪಲಿಲ್ಲ. ಈಗ ಡಿಬಿಐಎಲ್ ಬ್ಯಾಂಕ್ಗೆ ಎಲ್ವಿಬಿಯನ್ನು ಖರೀದಿಸಲು ಅನುಮತಿ ನೀಡಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ