ಈ ಹಣಕಾಸು ವರ್ಷ ದೇಶದ ಜಿಡಿಪಿ ಶೇ. 9.5 ಕುಸಿತ: ಆರ್ಬಿಐ ಅಧಿಕೃತ ಅಂದಾಜು
ಹಿಂದಿನ ಹಣಕಾಸು ವರ್ಷದಲ್ಲಿ ಶೇ. 4.2ರಷ್ಟು ಜಿಡಿಪಿ ಬೆಳವಣಿಗೆ ಕಂಡಿದ್ದ ಭಾರತ ಈ ಹಣಕಾಸು ವರ್ಷದಲ್ಲಿ ಮೈನಸ್ 9.5ರಷ್ಟು ಕುಸಿತ ಕಾಣಲಿದೆ ಎಂದು ಸ್ವತಃ ಆರ್ಬಿಐ ಸಂಸ್ಥೆಯೇ ಅಂದಾಜು ಮಾಡಿದೆ.
ನವದೆಹಲಿ(ಅ. 09): ಮುಂದಿನ ಮಾರ್ಚ್ ತಿಂಗಳಲ್ಲಿ ಅಂತ್ಯಗೊಳ್ಳುವ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ. 9.5ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಅಂದರೆ, ಜಿಡಿಪಿ ಈ ವರ್ಷ ಮೈನಸ್ 9.5 ಪರ್ಸೆಂಟ್ ಇರಲಿದೆ. ಇದು ನಿಜವಾದರೆ ಭಾರತದ ಇತ್ತೀಚಿನ ಇತಿಹಾಸದಲ್ಲೇ ಕಳಪೆ ಆರ್ಥಿಕ ಬೆಳವಣಿಗೆ ಕಂಡಂತಾಗುತ್ತದೆ. ವಿಶ್ವ ಬ್ಯಾಂಕ್ ಕೂಡ ಈ ವರ್ಷ ಭಾರತ ಶೇ. 9.6ರಷ್ಟು ಹಿನ್ನಡೆ ಕಾಣಬಹುದು ಎಂದು ಅಂದಾಜು ಮಾಡಿತ್ತು. ಆರ್ಬಿಐನ ಅಂದಾಜು ಕೂಡ ಹೆಚ್ಚೂಕಡಿಮೆ ಅಷ್ಟೇ ಇದೆ. ಸಮಾಧಾನದ ವಿಷಯ ಎಂದರೆ ಕಳೆದ ಬಾರಿಯ ತ್ತೈಮಾಸಿಕದಲ್ಲಿ, ಅಂದರೆ ಜೂನ್ ತಿಂಗಳಿಗೆ ಅಂತ್ಯವಾಗುವ ತ್ರೈಮಾಸಿಕದ ದತ್ತಾಂಶದ ಆಧಾರದಲ್ಲಿ ಭಾರತದ ಜಿಡಿಪಿ ಶೇ. 23.9 ರಷ್ಟು ಕುಸಿಯುವ ಅಂದಾಜು ಮಾಡಲಾಗಿತ್ತು. ಆದರೆ, ಲಾಕ್ಡೌನ್ ಅನ್ನು ಹಂತ ಹಂತವಾಗಿ ಹಿಂಪಡೆದು ಆರ್ಥಿಕತೆಯ ಗಾಲಿಗಳು ಚಾಲಿಸಲು ಆರಂಭಗೊಂಡಿರುವುದರಿಂದ ಸಣ್ಣ ಸಣ್ಣ ಬೆಳವಣಿಗೆಗಳು ಕಾಣಲು ಆರಂಭಿಸಿವೆ. ಇದೇ ರೀತಿ ಆರ್ಥಿಕ ಚೇತರಿಕೆ ಮುಂದುವರಿದಲ್ಲಿ ಮುಂದಿನ ವರ್ಷ ಆರ್ಥಿಕ ಬೆಳವಣಿಗೆ ಪಾಸಿಟಿವ್ ಸಂಖ್ಯೆಗೆ ಬರುವ ನಿರೀಕ್ಷೆ ಇದೆ. ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಜಿಡಿಪಿ 2019-20ರ ಹಣಕಾಸು ವರ್ಷದಲ್ಲಿ ಶೇ. 4.2ರಷ್ಟು ಬೆಳವಣಿಗೆ ಕಂಡಿತ್ತು. ಆರ್ಥಿಕತೆ ಅಲ್ಲಿಂದ ಒಮ್ಮೆಲೇ ಪ್ರಪಾತಕ್ಕೆ ಬಿದ್ದಂತಾಗುತ್ತದೆ. ಕಳೆದ ಜೂನ್ ತಿಂಗಳಲ್ಲಿ ಹಲವಾರು ಹಣಕಾಸು ಸಲಹೆಗಾರ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ಶೇ 3.2ರಷ್ಟು ಮಾತ್ರ ಕುಸಿತ ಕಾಣಬಹುದು ಎಂದು ಅಂದಾಜು ಮಾಡಿದ್ದವು. ಆದರೆ, ಜಾಗತಿಕವಾಗಿ ಆರ್ಥಿಕ ಹಿಂಜರಿತ ಇರುವುದರಿಂದ ಅನ್ಲಾಕ್ ಮಾಡಿದರೂ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಇವತ್ತು ನಡೆದ ಮಾನಿಟರಿ ಪಾಲಿಸಿ ಕಮಿಟಿಯ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸದ್ಯದ ಆರ್ಥಿಕ ಬಿಕ್ಕಟ್ಟಿನಲ್ಲಿ ತಮ್ಮ ಕೈಲಾದ ಮಟ್ಟಿಗೆ ನೀತಿ ರೂಪಿಸಿದ್ದೇವೆ. ಮುಂಬರುವ ದಿನಗಳು ಚೇತರಿಕೆಯ ದಿನಗಳಂತೆ ತೋರುತ್ತಿವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆಯಂತೆ ಆರ್ಬಿಐ ತನ್ನ ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನ ಯಥಾಸ್ಥಿತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ರಿಪೋ ಶೇ 4ರಲ್ಲಿ ಹಾಗೂ ರಿವರ್ಸ್ ರಿಪೋ ಶೇ. 3.35ರ ದರದಲ್ಲಿ ಮುಂದುವರಿಯಲಿವೆ. ಮೊನ್ನೆಯಷ್ಟೇ ರಾಯ್ಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಆರ್ಥಿಕ ತಜ್ಞರ ಅಭಿಪ್ರಾಯ ಸಂಗ್ರಹದ ಪ್ರಕಾರ ಸದ್ಯದ ಸಂದರ್ಭದಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿ ಉಳಿಸಿಕೊಳ್ಳಬಹುದು ಎಂದೇ ಅಂದಾಜು ಮಾಡಿದ್ದರು. ಅದು ನಿಜವಾಯಿತು. ಇಲ್ಲಿ ರೆಪೋ (Repo) ಎಂದರೆ ಆರ್ಬಿಐ ಸಂಸ್ಥೆ ತನ್ನ ಅಡಿಯ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಕಿರು ಅವಧಿಯ ಸಾಲಕ್ಕೆ ವಿಧಿಸುವ ಬಡ್ಡಿ ದರವಾಗಿದೆ. ಅಂದರೆ, ವಾಣಿಜ್ಯ ಬ್ಯಾಂಕುಗಳಿಗೆ ಹಣದ ಕೊರತೆ ಎದುರಾದರೆ ಶೇ. 4ರ ಬಡ್ಡಿಗೆ ಆರ್ಬಿಐನಿಂದ ಸಾಲ ಪಡೆಯಬಹುದು. ಹಾಗೆಯೇ, ರಿವರ್ಸ್ ರಿಪೋ ಎಂದರೆ ವಾಣಿಜ್ಯ ಬ್ಯಾಂಕುಗಳು ತಮ್ಮ ಹೆಚ್ಚುವರಿ ಹಣವನ್ನು ಆರ್ಬಿಐನಲ್ಲಿ ಠೇವಣಿ ಇಟ್ಟರೆ ಸಿಗುವ ಬಡ್ಡಿ ದರವಾಗಿದೆ.
ಇದೀಗ ಹಣದುಬ್ಬರ (Inflation) ಪ್ರಮಾಣ ಸೆಪ್ಟೆಂಬರ್ವರೆಗೂ ಹೆಚ್ಚೇ ಇರುತ್ತದೆ. ಆದರೆ, ಅಕ್ಟೋಬರ್ನಿಂದ ಆರಂಭವಾಗುವ ತ್ರೈಮಾಸಿಕಗಳಲ್ಲಿ ಹಣದುಬ್ಬರ ತಹಬದಿಗೆ ಬರುತ್ತದೆಂದು ಆರ್ಬಿಐ ಗವರ್ನರ್ ನಿರೀಕ್ಷಿಸಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ದೇಶದಲ್ಲಿ ಆಹಾರ ಧಾನ್ಯ ಉತ್ಪಾದನೆ ದಾಖಲೆ ಮಟ್ಟಕ್ಕೆ ಏರಿದೆ. ಕೈಗಾರಿಕೆಗಳಿಗೆ ಮತ್ತೆ ಜೀವ ಬಂದಿದೆ. ನಗರಗಳು ಗರಿಗೆದರಿವೆ. ಸಂಕಷ್ಟದಲ್ಲೂ ನಾವು ಚೇತರಿಕೆ ಕಾಣುತ್ತೇವೆ ಎಂದು ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ