ಬ್ಯಾಂಕ್​ಗಳ ಬಿಕ್ಕಟ್ಟಿಗೆ ಆರ್​ಬಿಐ ಬೇಜವಾಬ್ದಾರಿಯೇ ಕಾರಣ; ನೊಬೆಲ್ ವಿಜೇತ ಅಭಿಜಿತ್​ ಬ್ಯಾನರ್ಜಿ

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಇತ್ತೀಚೆಗೆ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಭಾರತದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್​ಬಿಐ) ತಲಾ 100 ಕೋಟಿ ರೂ ಗಳಿಗಿಂತ ಹೆಚ್ಚಿನ ಸಾಲವನ್ನು ಮರುಪಾವತಿಸದ ಸಾಲಗಾರರನ್ನು ಹೊಂದಿದೆ. ಈವರೆಗೆ ಎಸ್​ಬಿಐ ಬ್ಯಾಂಕಿನಿಂದ ವಸೂಲಿ ಮಾಡಲಾಗದ ಸಾಲ ಮಾತ್ರ 76,600 ಕೋಟಿ.

MAshok Kumar | news18-kannada
Updated:October 16, 2019, 4:04 PM IST
ಬ್ಯಾಂಕ್​ಗಳ ಬಿಕ್ಕಟ್ಟಿಗೆ ಆರ್​ಬಿಐ ಬೇಜವಾಬ್ದಾರಿಯೇ ಕಾರಣ; ನೊಬೆಲ್ ವಿಜೇತ ಅಭಿಜಿತ್​ ಬ್ಯಾನರ್ಜಿ
ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ.
  • Share this:
ಕೋಲ್ಕತಾ (ಅಕ್ಟೋಬರ್ 16); ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಬೃಹತ್ ಅಪಾಯ ಮತ್ತು ಬಿಕ್ಕಟ್ಟಿಗೆ ಮುಖಮಾಡಿದೆ. ಆದರೆ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಈ ಎಲ್ಲಾ ಪರಿಸ್ಥಿತಿಗೆ ರಿಸರ್ವ್​​ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಬೇಜವಾಬ್ದಾರಿ ನಡೆಯೇ ಕಾರಣ  ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ದೂಷಿಸಿದ್ದಾರೆ.

ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ ಹಗರಣ ಹಾಗೂ ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿರುವ ಅಭಿಜಿತ್ ಬ್ಯಾನರ್ಜಿ, “ದೇಶದ ಬ್ಯಾಂಕಿಂಗ್ ವ್ಯವಸ್ಥೆ ಪ್ರಸ್ತುತ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಹಲವು ವರ್ಷಗಳಿಂದ ಗೊಂದಲಕ್ಕೀಡಾದ ಬ್ಯಾಂಕಿಂಗ್ ವ್ಯವಸ್ಥೆ ಇಂದು ಅದರ ಗಾಢವಾದ ಪರಿಣಾಮವನ್ನು ಎದುರಿಸುತ್ತಿದೆ. ಆದರೆ, ಬ್ಯಾಂಕ್​ಗಳ ಈ ವ್ಯವಸ್ಥೆ ಹಾಳಾಗಲು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ (ಆರ್​ಬಿಐ) ಬೇಜವಾಬ್ದಾರಿ ನೀತಿಯೇ ಕಾರಣ.

ಇದೀಗ ಹಳಿ ತಪ್ಪಿರುವ ಬ್ಯಾಂಕ್​ಗಳನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಬ್ಯಾಂಕಿಂಗ್ ವ್ಯವಸ್ಥೆಗೆ ಹೀಗೆ ಹಣ ಖರ್ಚು ಮಾಡುವ ಬದಲು ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡುವುದು ಅಥವಾ ಖಾಸಗಿಯವರಿಗೆ ಮಾರಾಟ ಮಾಡುವ ಕುರಿತು ಯೋಚಿಸುವುದು  ಒಳಿತು” ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಏನಿದು ಪಿಎಂಸಿ ಬ್ಯಾಂಕ್ ಹಗರಣ? ಬ್ಯಾಂಕಿಂಗ್ ವಲಯದ ಕರ್ಮಕಾಂಡದ ಒಂದು ಕಥೆ

ಈ ಕುರಿತು ವಿವರಣೆ ನೀಡಿದ ಅಭಿಜಿತ್ ಬ್ಯಾನರ್ಜಿ, "ಭಾರತದ ಹಲವಾರು ಬ್ಯಾಂಕ್​ಗಳು ಇಂದು ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಅವಕಾಶವನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಬೇಕು. ಹೀಗೆ ಖಾಸಗೀಕರಣದಿಂದಾಗಿ ಸಂಗ್ರಹಿಸಲ್ಪಟ್ಟ ಹಣವನ್ನು ಬ್ಯಾಂಕುಗಳಿಗೆ ಜಾಮೀನು ನೀಡಲು ಬಳಸಿಕೊಳ್ಳುವುದು ಸರಿಯಾದ ಕೆಲಸ ಎಂದು ನಾನು ಭಾವಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಇತ್ತೀಚೆಗೆ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಭಾರತದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್​ಬಿಐ) ತಲಾ 100 ಕೋಟಿ ರೂ ಗಳಿಗಿಂತ ಹೆಚ್ಚಿನ ಸಾಲವನ್ನು ಮರುಪಾವತಿಸದ ಸಾಲಗಾರರನ್ನು ಹೊಂದಿದೆ. ಈವರೆಗೆ ಎಸ್​ಬಿಐ ಬ್ಯಾಂಕಿನಿಂದ ವಸೂಲಿ ಮಾಡಲಾಗದ ಸಾಲ ಮಾತ್ರ 76,600 ಕೋಟಿ.

ಸಮಸ್ಯೆ ಪೀಡಿತ ಬ್ಯಾಂಕುಗಳಲ್ಲಿ ಆದಾಯಕ್ಕಿಂತ ವೆಚ್ಚ ಅಧಿಕವಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿರುವ ಕಾರಣ ಬ್ಯಾಂಕುಗಳಲ್ಲಿ ಅನುತ್ಪಾದಕ ಪ್ರವೃತ್ತಿ ಬೆಳೆಯುತ್ತಿದೆ. ಅಲ್ಲದೆ, ಬ್ಯಾಂಕ್​ಗಳು ತೆಗೆದುಕೊಂಡಿರುವ ಕೆಲವು ಕೆಟ್ಟ ತೀರ್ಪುಗಳು ಅದರ ನಷ್ಟಕ್ಕೂ ಕಾರಣವಾಗಿದೆ. ಇಂತಹ ಸಂದರ್ಭವನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳಬೇಕು.ಕಳೆದ ಮೂರು ವರ್ಷದಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು 416 ಡೀಫಾಲ್ಟರ್ ನಿಷ್ಕ್ರೀಯ ಸಾಲಗಾರರ ಪರಿಣಾಮವಾಗಿ ಸುಮಾರು 1.76 ಲಕ್ಷ ಕೋಟಿ ರೂ ಗಳನ್ನು ಕಳೆದುಕೊಂಡಿದೆ. ವಾಣಿಜ್ಯ ಬ್ಯಾಂಕುಗಳು ಪ್ರತಿಯೊಂದು ವಾಣಿಜ್ಯ ಸಂಸ್ಥೆಗಳಿಗೆ 100 ಕೋಟಿಗಿಂತ ಹೆಚ್ಚಿನ ಸಾಲವನ್ನು ನೀಡಿ ವಸೂಲಿ ಮಾಡಲಾಗದೆ ಪರಿತಪಿಸುತ್ತಿದೆ. ಹೀಗೆ ವಾಣಿಜ್ಯ ಬ್ಯಾಂಕ್​ಗಳಿಂದ ವಸೂಲಿ ಮಾಡಲಾಗದೆ ಉಳಿದಿರುವ ಸಾಲದ ಪ್ರಮಾಣ ಮಾತ್ರ 2.75 ಲಕ್ಷ ಕೋಟಿ.

ಮಹಾರಾಷ್ಟ್ರದ ಪಿಎನ್​ಬಿ ಬ್ಯಾಂಕ್​ನಲ್ಲಿ 4,355 ಕೋಟಿ ರೂ ಹಗರಣ ಬೆಳಕಿಗೆ ಬಂದು ಆರ್​ಬಿಐ ನಿರ್ಬಂಧ ಹೇರಿದ ಒಂದು ವಾರದಲ್ಲಿ ಮೂರು ಜನ ಖಾತೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಈ ಬ್ಯಾಂಕಿನ ಠೇವಣಿದಾರರಿಗೆ 6 ತಿಂಗಳಿಗೆ ಕೇವಲ 40,000 ರೂ ಹಣವನ್ನು ಮಾತ್ರ ಪಡೆಯಲು ಅನುಮತಿ ನೀಡಿರುವುದು ಖಾತೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೀಗೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಪ್ರಸ್ತುತ ಹತ್ತಾರು ಸಮಸ್ಯೆಯನ್ನು ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸುವುದು ಅಸಾಧ್ಯವಾದ ಮಾತು. ಈ ನಡುವೆ ಭಾರತದಲ್ಲಿ ಕೆಲವು ಸರ್ಕಾರಿ ಬ್ಯಾಂಕ್​ಗಳು ಈಗಲೂ ಉತ್ತಮ ಠೇವಣಿದಾರರನ್ನು ಹೊಂದಿದೆ. ಹೀಗಾಗಿ  ಇವುಗಳನ್ನು ಮಾರಾಟ ಮಾಡುವಲ್ಲಿ ಸರ್ಕಾರಕ್ಕೆ ಯಾವುದೇ ತೊಡಕಾಗುವುದಿಲ್ಲ. ಆದರೆ, ಇಂತಹ ಆಲೋಚನೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಇದು ಸಾಧ್ಯವಾದರೆ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆ ಮತ್ತೆ ಪುನಶ್ಚೇತನ ಕಾಣಲಿದೆ ಎಂದು ಅಭಿಜಿತ್​ ಬ್ಯಾನರ್ಜಿ ತಿಳಿಸಿದ್ದಾರೆ.

ಇದನ್ನೂ ಓದಿ : ಮನಮೋಹನ್​ ಸಿಂಗ್​-ರಘುರಾಮ್​ ರಾಜನ್​ ಆಡಳಿತಾವಧಿಯಲ್ಲಿ ಬ್ಯಾಂಕ್​ಗಳ ಸ್ಥಿತಿ ಶೋಚನೀಯವಾಗಿತ್ತು; ನಿರ್ಮಲಾ ಸೀತಾರಾಮನ್​

First published: October 16, 2019, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading