RBI Monetary Policy – ಆರ್ಬಿಐನ ರೆಪೋ ದರ ಯಥಾಸ್ಥಿತಿ; ಜಿಡಿಪಿ ಗುರಿ ಏರಿಕೆ; ಗರಿಗೆದರಿದ ಸೆನ್ಸೆಕ್ಸ್
ಕೋವಿಡ್ ಸಂಕಷ್ಟದ ಮಧ್ಯೆ ಆರ್ಥಿಕತೆ ಚೇತರಿಕೆ ಹಾದಿಯಲ್ಲಿರುವಂತೆಯೇ ಆರ್ಬಿಐ ತನ್ನ ಜಿಡಿಪಿ ಅಂದಾಜನ್ನು ಪರಿಷ್ಕರಿಸಿದೆ. ಪರಿಣಾಮವಾಗಿ ಷೇರುಪೇಟೆಗೆ ಹೊಸ ಉತ್ಸಾಹ ಮೂಡಿದೆ. ಆರ್ಬಿಐ ತನ್ನ ರೆಪೋವನ್ನು ಶೇ. 4ರ ದರದಲ್ಲೇ ಮುಂದುವರಿಸಿದೆ.
ನವದೆಹಲಿ(ಡಿ. 04): ಈ ವರ್ಷ ಭಾರತದ ಜಿಡಿಪಿ ಮೈನಸ್ 9.5 ಪ್ರತಿಶತ ಇರಬಹುದು ಎಂದು ಹೇಳಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮತ್ತೊಮ್ಮೆ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಜಿಡಿಪಿ ಬೆಳವಣಿಗೆ -7.5 ಪ್ರತಿಶತಕ್ಕೆ ಬಂದು ನಿಲ್ಲಬಹುದು ಎಂದು ಆರ್ಬಿಐ ಹೇಳಿದೆ. ಅಂದರೆ, ಭಾರತದ ಆರ್ಥಿಕ ಕುಸಿತ ಶೇ. 7.5ಕ್ಕೆ ಮಾತ್ರ ಸೀಮಿತವಾಗಬಹುದು. ಇದರೊಂದಿಗೆ ಭಾರತದ ಆರ್ಥಿಕತೆ ಆಶಾದಾಯಕ ಸ್ಥಿತಿಗೆ ಮರಳುವ ಸೂಚನೆಯನ್ನು ಆರ್ಬಿಐ ಗ್ರಹಿಸಿದೆ. ಆರ್ಬಿಐನ ಜಿಡಿಪಿ ಅಂದಾಜು ಪರಿಷ್ಕರಣೆಗೊಂಡು ಆರ್ಥಿಕತೆ ಮತ್ತೆ ಲಯಕ್ಕೆ ಬರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಲೇ ಭಾರತದ ಷೇರುಪೇಟೆ ಗರಿಗೆದರಿ ಹೊಸ ದಾಖಲೆಗಳ ಮಟ್ಟಕ್ಕೇರಿತು.
ಬಿಎಸ್ಇ ಸೆನ್ಸೆಕ್ಸ್ ಡಿಢೀರ್ 370 ಅಂಕ ಹೆಚ್ಚಳಗೊಂಡು ಹೊಸ ದಾಖಲೆಯ 45,000 ಅಂಕಗಳ ಮಟ್ಟ ಮುಟ್ಟಿತು. ಎನ್ಎಸ್ಇ ನಿಫ್ಟಿ ಸೂಚ್ಯಂಕ ಕೂಡ 107 ಅಂಕ ಹೆಚ್ಚಳಗೊಂಡು ಹೊಸ ದಾಖಲೆಯ 13,240 ರ ಮಟ್ಟ ತಲುಪಿತು. ಬ್ಯಾಂಕಿಂಗ್ ಸಂಸ್ಥೆಗಳಾದ ಹೆಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ ಮತ್ತು ಐಸಿಐಸಿಐ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಗಳ ಷೇರುಗಳು ಹೆಚ್ಚು ಮೊತ್ತಕ್ಕೆ ಮಾರಾಟ ಕಂಡವು.
ಇಂದು ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಈ ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳು ಉತ್ತಮಗೊಂಡಿವೆ. ಇದರಿಂದ ನಿರೀಕ್ಷೆಮೀರಿ ವೇಗದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಬಹುದು ಎಂದಿದ್ಧಾರೆ. 2021ರ ವರ್ಷದಲ್ಲಿ ಜಿಡಿಪಿ ಶೇ. -9.5ರಷ್ಟು ಕುಸಿಯಬಹುದು ಎಂದು ಕಳೆದ ತಿಂಗಳಷ್ಟೇ ಆರ್ಬಿಐ ಅಂದಾಜು ಮಾಡಿತ್ತು.
ಇದೇ ವೇಳೆ, ಆರ್ಥಿಕ ಬೆಳವಣಿಗೆ ಇದೇ ಮಟ್ಟದಲ್ಲಿ ಮುಂದುವರಿಯುವ ಉದ್ದೇಶದಿಂದ ಆರ್ಬಿಐ ತನ್ನ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದರೊಂದಿಗೆ ಶೇ. 4ರ ರೆಪೋ ದರ ಹಾಗೂ ಶೇ. 3.35ರ ರಿವರ್ಸ್ ರಿಪೋ ದರ ಮುಂದುವರಿಯಲಿದೆ. ಲಾಕ್ಡೌನ್ಗೆ ಮುನ್ನ ರೆಪೋ ದರ ಶೇ. 5.15ರಷ್ಟು ಇತ್ತು. ಅಲ್ಲಿಂದೀಚೆ ಆರ್ಬಿಐ ರೆಪೋ ದರದಲ್ಲಿ 115 ಮೂಲಾಂಕಗಳಷ್ಟು ಕಡಿಮೆ ಮಾಡಿದೆ. ಇದು ಆರ್ಬಿಐ ಇತಿಹಾಸದಲ್ಲೇ ಅತ್ಯಂತ ಕಡಿಮೆಯ ರೆಪೋ ದರವಾಗಿದೆ.
ರೆಪೋ ದರ ಎಂದರೆ ಆರ್ಬಿಐನಿಂದ ಕಮರ್ಷಿಯಲ್ ಬ್ಯಾಂಕುಗಳು ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿಯಾಗಿದೆ. ರಿವರ್ಸ್ ರೆಪೋ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಇಡುವ ಠೇವಣಿಗೆ ಆರ್ಬಿಐ ನೀಡುವ ಬಡ್ಡಿ ದರವಾಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ