• Home
  • »
  • News
  • »
  • national-international
  • »
  • ಶೇ. 5.15ರ ರೆಪೋ ದರ ಉಳಿಸಿಕೊಂಡ ಆರ್​ಬಿಐ; ಶೇ. 6ರ ಜಿಡಿಪಿ ದರದ ಅಂದಾಜು

ಶೇ. 5.15ರ ರೆಪೋ ದರ ಉಳಿಸಿಕೊಂಡ ಆರ್​ಬಿಐ; ಶೇ. 6ರ ಜಿಡಿಪಿ ದರದ ಅಂದಾಜು

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಮುಂಬರುವ ದಿನಗಳಲ್ಲಿ ಬೇಳೆ ಕಾಳು, ಪ್ರೋಟೀನ್​ಯುಕ್ತ ಆಹಾರ ಸೇರಿದಂತೆ ವಿವಿಧ ಆಹಾರ ವಸ್ತುಗಳು, ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್​ಬಿಐನ ಎಂಪಿಸಿ ಎಚ್ಚರಿಸಿದೆ. ಕೊರೊನಾ ವೈರಸ್​ನಿಂದಾಗಿ ಭಾರತದ ಪ್ರವಾಸೋದ್ಯಮದ ಮೇಲೂ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಮುಂದೆ ಓದಿ ...
  • News18
  • Last Updated :
  • Share this:

ನವದೆಹಲಿ(ಫೆ. 06): ಸತತ ಎರಡನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದರ ರೆಪೋ ದರ ಅಥವಾ ಅದರ ಸಾಲದ ಮೇಲಿನ ಬಡ್ಡಿ ದರ ಶೇ. 5.15ರಲ್ಲೇ ಮುಂದುವರಿಯಲಿದೆ. ಆರ್​ಬಿಐ ಪ್ರಕಟಿಸಿದ ತನ್ನ ದ್ವೈಮಾಸಿಕ ನೀತಿಯಲ್ಲಿ ಇದನ್ನು ತಿಳಿಸಿದೆ. ಕಳೆದ ವರ್ಷ ಆರ್​ಬಿಐ ಸತತ ಐದು ಬಾರಿ ರೆಪೋ ದರದಲ್ಲಿ ಇಳಿಕೆ ಮಾಡಿತ್ತು. ಈ ಅವಧಿಯಲ್ಲಿ ರೆಪೋ ದರದಲ್ಲಿ ಬರೋಬ್ಬರಿ 135 ಮೂಲಾಂಕಗಳಷ್ಟು ಇಳಿಕೆಯಾಗಿತ್ತು.


ಆರ್​ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಸದಸ್ಯರೂ ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದರು. ಚೇತನ್ ಘಾಟೆ, ಪಾಮಿ ದುವಾ, ರವೀಂದ್ರ ಧೋಲಾಕಿಯಾ, ಜನಕ್ ರಾಜ್, ಮೈಕೇಲ್ ದೇಬಬ್ರತಾ ಪಾತ್ರ, ಶಕ್ತಿಕಾಂತ್ ದಾಸ್ ಮೊದಲಾದವರು ಆರ್​ಬಿಐನ ಎಂಪಿಸಿ ಸದಸ್ಯರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಆರ್ಥಿಕತೆ ಸಾಗುವ ರೀತಿಯನ್ನು ನೋಡಿಕೊಂಡು ರೆಪೋ ದರದಲ್ಲಿ ಬದಲಾವಣೆ ತರುತ್ತೇವೆ ಎಂದು ಎಂಪಿಸಿ ಸ್ಪಷ್ಟಪಡಿಸಿದೆ. ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಯಥಾಸ್ಥಿತಿ ಪಾಲಿಸಿರುವುದು ರಿಯಲ್ ಎಸ್ಟೇಟ್ ಮೊದಲಾದ ಕ್ಷೇತ್ರಗಳಿಗೆ ತುಸು ನಿರಾಳತೆ ತಂದಿದೆ.


ಏನಿದು ರೆಪೋ ದರ?


ತನ್ನ ವ್ಯಾಪ್ತಿಯಲ್ಲಿರುವ ಕಮರ್ಷಿಯಲ್ ಬ್ಯಾಂಕುಗಳಿಗೆ ಆರ್​ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ಆಗಿದೆ. ಕಮರ್ಷಿಯಲ್ ಬ್ಯಾಂಕುಗಳು ರೆಪೋ ದರದ ಆಧಾರದ ಮೇಲೆಯೇ ತನ್ನ ಗ್ರಾಹಕರಿಗೆ ನೀಡುವ ಸಾಲಕ್ಕೆ ಬಡ್ಡಿ ವಿಧಿಸಬೇಕು ಎಂಬ ನಿಯಮವಿಲ್ಲ. ಅದು ವಾಣಿಜ್ಯ ಬ್ಯಾಂಕುಗಳ ಐಚ್ಛಿಕವಾಗಿರುತ್ತದೆ. ಇನ್ನು, ಆರ್​ಬಿಐ ರಿವರ್ಸ್ ರೆಪೋ ದರ ಕೂಡ ವಿಧಿಸುತ್ತದೆ. ಇದು ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಲ್ಲಿ ಇಡುವ ಠೇವಣಿಗೆ ನೀಡಲಾಗುವ ಬಡ್ಡಿಯ ದರವಾಗಿರುತ್ತದೆ.


ಇದನ್ನೂ ಓದಿ: ಶಾಹೀನ್ ಬಾಗ್ ಪ್ರತಿಭಟನೆಗಳನ್ನು ಖಿಲಾಫತ್ ಆಂದೋಲನಕ್ಕೆ ಹೋಲಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್


ಜಿಡಿಪಿ ಶೇ. 6:


ಇದೇ ವೇಳೆ, ಏಪ್ರಿಲ್ 1ರಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ. 6ರ ದರದಲ್ಲಿ ಅಭಿವೃದ್ಧಿ ಹೊಂದಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜು ಮಾಡಿದೆ. ಆರ್ಥಿಕತೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಕಾಣುತ್ತಿಲ್ಲವಾದ್ದರಿಂದ ಜಿಡಿಪಿ ದರ ಶೇ. 6ಕ್ಕೆ ಸೀಮಿತಗೊಳ್ಳಬಹುದು ಎಂಬುದು ಆರ್​ಬಿಐನ ಅಂದಾಜು. ಹಾಗೆಯೇ, ಈ ಬಾರಿಯ ಹಣಕಾಸು ವರ್ಷದಲ್ಲಿ (2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗಿನ ವರ್ಷ) ಜಿಡಿಪಿ ದರ ಶೇ. 5 ಇರಬಹುದು ಎಂದು ಆರ್​ಬಿಐ ಪುನರುಚ್ಚರಿಸಿದೆ.


ಇನ್ನು, ಮಾರ್ಚ್ 31ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಗ್ರಾಹಕ ಹಣದುಬ್ಬರ ಶೇ. 6.5 ಇರಬಹುದು ಎಂದೂ ಆರ್​ಬಿಐ ಅಂದಾಜು ಮಾಡಿದೆ. ಗ್ರಾಹಕ ಹಣದುಬ್ಬರವೆಂದರೆ ಗ್ರಾಹಕ ಬೆಲೆ ಏರಿಕೆಯ ದರವಾಗಿದೆ. ಆರ್​ಬಿಐನ ನೀತಿಗಳಲ್ಲಿ ಇದೂ ಕೂಡ ಒಂದು ಪ್ರಮುಖ ಭಾಗವಾಗಿರುತ್ತದೆ.


ಇದನ್ನೂ ಓದಿ: ಸಿಎಎ ಮುಸ್ಲಿಮರಿಗಷ್ಟೇ ಅಲ್ಲ ದಲಿತರಿಗೂ ಮಾರಕ; ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಕಿಡಿ!


ಜಿಎಸ್​ಟಿ ನೊಂದಾಯಿತ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್​ಎಂಇ) ಏಕ-ಕಾಲದ ಸಾಲ ಬದಲಾವಣೆ ಯೋಜನೆಯ ವ್ಯಾಪ್ತಿಗೆ ತರಲು ಆರ್​ಬಿಐ ನಿರ್ಧರಿಸಿರುವುದು ಮತ್ತೊಂದು ಗಮನಾರ್ಹ ನೀತಿಯಾಗಿದೆ. ಇದರಿಂದ ದೇಶದ ಹಲವಾರು ಸಣ್ಣ ಉದ್ಯಮಗಳಿಗೆ ಚೇತರಿಕೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.


ಬೆಲೆ ಏರಿಕೆ ಬಿಸಿ?


ಮುಂಬರುವ ದಿನಗಳಲ್ಲಿ ಬೇಳೆ ಕಾಳು, ಪ್ರೋಟೀನ್​ಯುಕ್ತ ಆಹಾರ ಸೇರಿದಂತೆ ವಿವಿಧ ಆಹಾರ ವಸ್ತುಗಳು, ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್​ಬಿಐನ ಎಂಪಿಸಿ ಎಚ್ಚರಿಸಿದೆ. ಕೊರೊನಾ ವೈರಸ್​ನಿಂದಾಗಿ ಭಾರತದ ಪ್ರವಾಸೋದ್ಯಮದ ಮೇಲೂ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.


 ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ದಾಳಿ; 564ಕ್ಕೆ ಏರಿದ ಸಾವಿನ ಸಂಖ್ಯೆ, 24 ಗಂಟೆಯಲ್ಲಿ 70ಕ್ಕೂ ಹೆಚ್ಚು ಬಲಿ


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.


Published by:Vijayasarthy SN
First published: