Repo Rate - ಅಭಿವೃದ್ಧಿ ಪೂರಕ ನೀತಿ ಅಗತ್ಯ ಎಂದ ಆರ್​ಬಿಐ; ಬಡ್ಡಿ ದರ ಸದ್ಯ ಇಲ್ಲ ಹೆಚ್ಚಳ

ಬೆಳೆಯುತ್ತಿರುವ ಆರ್ಥಿಕತೆಗೆ ಸಹಾಯಕವಾಗಲೆಂದು ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿಯೂ ತನ್ನ ರೆಪೋ ಮತ್ತು ರಿವರ್ಸ್ ರೆಪೋ ದರವನ್ನ ಹೆಚ್ಚಳ ಮಾಡದಿರಲು ನಿರ್ಧರಿಸಿದೆ. ಇವತ್ತಿನ ಎಂಪಿಸಿ ಸಭೆಯಲ್ಲಿ ವ್ಯಕ್ತವಾದ ಅಂಶಗಳೇನು?

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

  • Share this:
    ನವದೆಹಲಿ(ಫೆ. 05): ಮುಂಬರುವ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ. 10.5ರ ದರದಲ್ಲಿ ಬೆಳವಣಿಗೆ ಸಾಧಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜು ಮಾಡಿದೆ. ಹಾಗೆಯೇ, ಅಭಿವೃದ್ಧಿಗೆ ಪೂರಕವಾಗಿ ಬಡ್ಡಿ ದರಗಳ ಯಥಾಸ್ಥಿತಿ ಮುಂದುವರಿಸಿದೆ. ಇಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ರಿಪೋ ದರ ಶೇ. 4ರಲ್ಲಿ ಮುಂದುವರಿಯಲಿದೆ. ರಿವರ್ಸ್ ರಿಪೋ ದರ ಶೇ. 3.35ರಲ್ಲಿ ಮುಂದುವರಿಯಲಿದೆ.

    ಆರು ಸದಸ್ಯರ ಎಂಪಿಸಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಂತರ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆಯ ನಿಲುವುಗಳನ್ನ ಬಹಿರಂಗಪಡಿಸಿದರು. ಕೊರೋನಾ ವೈರಸ್ ಸಂಕಷ್ಟದ ನಂತರ ದೇಶದ ಆರ್ಥಿಕತೆ ಚೇರಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿರುವಂತೆ ಹಣಕಾಸು ನೀತಿಯನ್ನ ಅಳವಡಿಸಬೇಕಿದೆ ಎಂದು ದಾಸ್ ತಿಳಿಸಿದರು. ಈ ಮೂಲಕ ಮುಂದಿನ ಹಣಕಾಸು ವರ್ಷದವರೆಗೂ ರೆಪೋ ದರದ ಯಥಾಸ್ಥಿತಿ ಮುಂದುವರಿಯುವ ಸುಳಿವನ್ನು ಅವರು ಬಿಟ್ಟುಕೊಟ್ಟಿರುವಂತಿದೆ.

    ಇದನ್ನೂ ಓದಿ: ಭಾರತ, ಅಮೆರಿಕ ಸೇರಿದಂತೆ 20 ದೇಶಗಳಿಂದ ಸೌದಿ ಅರೇಬಿಯಾ ಪ್ರವೇಶ ಬಂದ್

    ಕೊರೋನಾ ವೈರಸ್ ಲಾಕ್ ಆದ 2020ರ ಮಾರ್ಚ್ ತಿಂಗಳಿಂದ ಆರ್​ಬಿಐನ ರೆಪೋ ದರ ಏರಿಕೆಯಾಗಿಯೇ ಇಲ್ಲ. ಮಾರ್ಚ್​​ನಿಂದ ಮೇ ತಿಂಗಳವರೆಗೆ 115 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆ ಮಾಡಿತ್ತು. ಆ ನಂತರ ನಿರಂತರವಾಗಿ ಯಥಾಸ್ಥಿತಿ ಪಾಲನೆ ಮಾಡಿಕೊಂಡು ಬಂದಿದೆ. ಈಗಿರುವ ಶೇ. 4ರ ರೆಪೋ ದರ ಕಳೆದ 19 ವರ್ಷಗಳಲ್ಲೇ ಅತ್ಯಂತ ಕಡಿಮೆ ದರವಾಗಿದೆ. ಆರ್ಥಿಕತೆ ಕಳಕಚ್ಚಿದ ಹಿನ್ನೆಲೆಯಲ್ಲಿ ಆರ್​ಬಿಐ ತನ್ನ ರೆಪೋ ದರವನ್ನು ಇಷ್ಟು ತಳಕ್ಕೆ ಇಳಿಸಲು ಕಾರಣವಾಗಿದೆ.

    ರೆಪೋ ಮತ್ತು ರಿವರ್ಸ್ ರೆಪೋ ದರ ಎಂದರೇನು?

    ರೆಪೋ ದರ ಎಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ಅಧೀನ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿ ದರವಾಗಿದೆ. ಅಂದರೆ ವಾಣಿಜ್ಯ ಬ್ಯಾಂಕುಗಳು ರೆಪೋ ದರದಲ್ಲಿ ಆರ್​ಬಿಐನಿಂದ ಸಾಲ ಪಡೆದುಕೊಳ್ಳಬಹುದಾಗಿದೆ. ಇನ್ನು, ರಿವರ್ಸ್ ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಲ್ಲಿ ಠೇವಣಿ ಇರಿಸುವ ಹಣಕ್ಕೆ ಸಿಗುವ ಬಡ್ಡಿ ದರವಾಗಿದೆ. ಇದೀಗ ರೆಪೋ ದರ 4 ಪರ್ಸೆಂಟ್, ರಿವರ್ಸ್ ರಿಪೋ ದರ 3.35 ಪರ್ಸೆಂಟ್ ಇದೆ.

    ಇದನ್ನೂ ಓದಿ: Farmers Protest: ಫೆ.6ರಂದು ದೇಶಾದ್ಯಂತ ಚಕ್ಕಾ ಜಾಮ್; ದಟ್ಟಣೆಯಲ್ಲಿ ಸಿಲುಕುವ ನಾಗರಿಕರಿಗೆ ನೀರು, ಆಹಾರ ಒದಗಿಸಲು ಮುಂದಾದ ರೈತರು

    ಕೊರೋನಾ ವೈರಸ್ ಉದ್ಭವಿಸಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಣೆ ಮಾಡಿದ ನಂತರ ತಿಂಗಳುಗಳ ಕಾಲ ದೇಶದ ಆರ್ಥಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿತ್ತು. ಪರಿಣಾಮವಾಗಿ ಕಳೆದ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಆರ್ಥಿಕತೆ ಪ್ರಪಾತಕ್ಕೆ ಬಿದ್ದಿರುವ ಅಂದಾಜು ಇದೆ. ಇದೇ ಮಾರ್ಚ್​ನಲ್ಲಿ ಅಂತ್ಯವಾಗುವ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.7 ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, ಜಿಡಿಪಿ ಪಾಸಿಟಿವ್ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ. 11ರ ದರದಲ್ಲಿ ಜಿಡಿಪಿ ಹೆಚ್ಚುತ್ತದೆ ಎಂದು ಬಜೆಟ್ ಮುಂಚಿನ ಎಕನಾಮಿಕ್ ಸರ್ವೆಯಲ್ಲಿ ಅಂದಾಜು ಮಾಡಲಾಗಿದೆ. ಈಗ ಆರ್​ಬಿಐ ಕೂಡ ಜಿಡಿಪಿ ಶೇ. 10.5ರ ದರದಲ್ಲಿ ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜು ಮಾಡಿದೆ.
    Published by:Vijayasarthy SN
    First published: