ನವದೆಹಲಿ(ಆ. 06): ಆರ್ಥಿಕ ಅಧಃಪತನವನ್ನು ತಪ್ಪಿಸಲು ರೆಪೋ ದರ ಇನ್ನಷ್ಟು ಇಳಿಯಬಹುದು ಎಂಬ ಉದ್ಯಮಪಂಡಿತರ ನಿರೀಕ್ಷೆ ಇವತ್ತು ಹುಸಿಯಾಗಿದೆ. ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಪಾಲನೆ ಮಾಡಲು ಆರ್ಬಿಐ ನಿರ್ಧರಿಸಿದೆ. ಹಣಕಾಸು ಚಲನೆಗೆ ಪ್ರಮುಖ ಪಾತ್ರ ವಹಿಸುವ ರೆಪೋ ದರ ಶೇ. 4ರಲ್ಲಿ ಮುಂದುವರಿಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ಮಾಧ್ಯಮಗಳಿಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಚಟುವಟಿಕೆ ಬಹಳ ಸೂಕ್ಷ್ಮ ಸ್ಥಿತಿಯಲ್ಲೇ ಮುಂದುವರಿದಿದೆ. ಆದರೆ, ಜಾಗತಿಕ ಹಣಕಾಸು ಮಾರುಕಟ್ಟೆಗಳು ಆಶಾದಾಯಕವೆನಿಸಿವೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
ಈ ಬಾರಿಯ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಬಹುದು ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೆ. 75ರಷ್ಟು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದರು. ಈ ತ್ರೈಮಾಸಿಕವಷ್ಟೇ ಅಲ್ಲ ಮುಂದಿನ ತ್ರೈಮಾಸಿಕದಲ್ಳೂ 25 ಬೇಸಿಸ್ ಪಾಯಿಂಟ್ ಇಳಿಕೆಯಾಗಿ ರೆಪೋ ದರ ಶೇ 3.5ಕ್ಕೆ ಇಳಿಕೆಯಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದರು. ಆದರೆ, ಎಂಪಿಸಿ ಸಭೆಯಲ್ಲಿ ಯಥಾಸ್ಥಿತಿ ಪಾಲನೆಯ ನಿರ್ಧಾರದೊಂದಿಗೆ ದೇಶದ ಅರ್ಥಶಾಸ್ತ್ರಜ್ಞರ ನಿರೀಕ್ಷೆ ಹುಸಿಯಾದಂತಾಗಿದೆ.
ಇದನ್ನೂ ಓದಿ: Hiroshima Day - ಹಿರೋಶಿಮಾ ಅಣು ಬಾಂಬ್ ದಾಳಿಗೆ 75 ವರ್ಷ; ಅಂದು ಆಗಿದ್ದೇನು? ಅದರ ಭೀಕರತೆ ಹೇಗಿತ್ತು?
ಏನಿದು ರೆಪೋ (Repo) ದರ?
ರೆಪೋ ದರ ಎಂಬುದು ಆರ್ಬಿಐ ತನ್ನ ಅಧೀನದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಇನ್ನು, ರಿವರ್ಸ್ ರೆಪೋ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್ಬಿಐನಲ್ಲಿ ಠೇವಣಿ ಇರಿಸುವ ಹಣಕ್ಕೆ ನೀಡಲಾಗುವ ಬಡ್ಡಿ ದರವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ಗೆ ಈಗ ಹಣಕಾಸು ಸ್ಥಿರತೆ ಸಾಧಿಸುವುದೇ ತಲೆನೋವಿನ ಕಾರ್ಯವಾಗಿದೆ. ವಾರ್ಷಿಕ ಚಿಲ್ಲರೆ ಹಣದುಬ್ಬರ (Retail Inflation) ಕೂಡ ಆರ್ಬಿಐ ಲೆಕ್ಕಾಚಾರ ಮೀರಿ ಬೆಳೆದಿದೆ. ಮಾರ್ಚ್ನಲ್ಲಿ ಶೇ. 5.84ರಷ್ಟಿದ್ದ ರೀಟೇಲ್ ಇನ್ಫ್ಲೇಷನ್ ಜೂನ್ನಲ್ಲಿ ಶೇ. 6.09ಕ್ಕೆ ಏರಿಕೆಯಾಗಿದೆ.
ಮಾರ್ಚ್ನಿಂದ ಎರಡು ತಿಂಗಳ ಕಾಲ ದೇಶವ್ಯಾಪಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಲಾಕ್ಡೌನ್ನ ಪರಿಣಾಮ ದೀರ್ಘ ಕಾಲ ಇರಲಿದೆ. ದೇಶದ ಜಿಡಿಪಿ ಬೆಳವಣಿಗೆಯಾಗುವ ಬದಲು ಶೇ. 5ಕ್ಕಿಂತ ಹೆಚ್ಚು ಕುಸಿತ ಕಾಣುವ ಸಾಧ್ಯತೆ ಇದೆ. ಈ ವರ್ಷ ಭಾರತದ ಜಿಡಿಪಿ ದರ ಮೈನಸ್ 5.1 ಇರಬಹುದು ಎಂದು ವಿವಿಧ ವಿಶ್ಲೇಷಣಾ ಸಂಸ್ಥೆಗಳು ಅಂದಾಜು ಮಾಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ