30 ಸಾವಿರ ಕೋಟಿ ಆರ್​ಬಿಐ ಲಾಭಾಂಶ ಕೋರಿದ ಕೇಂದ್ರ; ಈ ವಿಚಾರದ ಬಗ್ಗೆ ಅರಿವೇ ಇಲ್ಲವೆಂದ ಆರ್​ಬಿಐ ಗವರ್ನರ್

2017-18 ರಲ್ಲೂ ಸಹ ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕಿನ ಮಧ್ಯಂತರ ಲಾಭಾಂಶದಿಂದ ಸುಮಾರು 10,000 ಕೋಟಿ ಹಣವನ್ನು ಪಡೆದಿತ್ತು.

MAshok Kumar | news18-kannada
Updated:October 4, 2019, 3:53 PM IST
30 ಸಾವಿರ ಕೋಟಿ ಆರ್​ಬಿಐ ಲಾಭಾಂಶ ಕೋರಿದ ಕೇಂದ್ರ; ಈ ವಿಚಾರದ ಬಗ್ಗೆ ಅರಿವೇ ಇಲ್ಲವೆಂದ ಆರ್​ಬಿಐ ಗವರ್ನರ್
ಆರ್​ಬಿಐ ಗವರ್ನರ್​ ಶಕ್ತಿಕಾಂತ್ ದಾಸ್.
  • Share this:
ಮುಂಬೈ (ಅಕ್ಟೋಬರ್ 04); ಕೇಂದ್ರ ಸರ್ಕಾರದ ಆದಾಯ ಕೊರತೆಯನ್ನು ನೀಗಿಸಲು ಕಳೆದ ಸೆಪ್ಟೆಂಬರ್ 30 ರಂದು ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರದ ಖಜಾನೆಗೆ 30 ಸಾವಿರ ಕೋಟಿ ಹಣ ವರ್ಗಾವಣೆ ಮಾಡಿದೆ ಎಂದು ಸುದ್ದಿಯಾಗಿತ್ತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಇದನ್ನು ತಳ್ಳಿಹಾಕಿರುವ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್, “ಈ ಸುದ್ದಿಯನ್ನು ನಾನು ಮಾಧ್ಯಮದಲ್ಲೇ ನೋಡಿದ್ದೇನೆಯೇ ಹೊರತು, ಈ ಕುರಿತ ಯಾವುದೇ ಪ್ರಸ್ತಾವನೆ ಆರ್​ಬಿಐ ಎದುರು ಇಲ್ಲ. ಹಾಗೂ 30 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

“ಈ ಹಣಕಾಸು ವರ್ಷಾಂತ್ಯದ ವೇಳೆಗೆ ಹಣಕಾಸಿನ ಕೊರತೆಯ ಗುರಿಯನ್ನು 3.3 ರಷ್ಟು ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರ ಆರ್​ಬಿಐನಿಂದ ಸುಮಾರು 30,000 ಕೋಟಿ ಮಧ್ಯಂತರ ಲಾಭಾಂಶವನ್ನು ಪಡೆಯುವ ಸಾಧ್ಯತೆ ಇದೆ. ಆದರೆ, ಪ್ರಸ್ತುತ ಈಗಲೇ ಹಣ ನೀಡಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಮತ್ತು ಸದ್ಯಕ್ಕೆ ಆರ್​ಬಿಐ ಎದುರು ಇಂತಹ ಯಾವುದೇ ಪ್ರಸ್ತಾವನೆ ಇಲ್ಲ” ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಕಳೆದ ಆಗಸ್ಟ್ 25 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ತನ್ನ ಲಾಭಾಂಶ ಮತ್ತು ಹೆಚ್ಚುವರಿ ಮೀಸಲಿನ 1.76 ಲಕ್ಷ ಕೋಟಿ ಹಣವನ್ನು ಬೃಹತ್ ತೆರಿಗೆ ಕಡಿತದ ನಂತರ ಕೇಂದ್ರ ಸರ್ಕಾರಕ್ಕೆ ಉಂಟಾಗುವ ಆದಾಯದ ಕೊರತೆಯನ್ನು ನೀಗಿಸಲು ಕೇಂದ್ರದ ಖಜಾನೆಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಸಹ ಆರ್​ಬಿಐ 30,000 ಕೋಟಿ ಹಣವನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಿದೆ ಎಂಬ ಸುದ್ದಿ ರಾಷ್ಟ್ರಾದಾದ್ಯಂತ ಹರಡಿತ್ತು.

2017-18 ರಲ್ಲೂ ಸಹ ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕಿನ ಮಧ್ಯಂತರ ಲಾಭಾಂಶದಿಂದ ಸುಮಾರು 10,000 ಕೋಟಿ ಹಣವನ್ನು ಪಡೆದಿತ್ತು.

2018-19ನೇ ವರ್ಷದ ಹೆಚ್ಚುವರಿ ಹಣವಾದ 1,23,414 ಕೋಟಿ ಮತ್ತು ಆರ್ಥಿಕ ಚೌಕಟ್ಟಿನ ಪ್ರಕಾರ ಗುರುತಿಸಲಾದ ಹೆಚ್ಚುವರಿ ನಿಬಂಧನೆಗಳ (ಇಸಿಎಫ್) 52,637 ಕೋಟಿ ಹಣವನ್ನು ಒಟ್ಟು ಸೇರಿಸಿ 1,76,051 ಕೋಟಿ ಹಣವನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಲು ಕಳೆದ ತಿಂಗಳೇ ಬಿಮಲ್ ಜಲನ್ ನೇತೃತ್ವದ ಆರ್​ಬಿಐ ಕೇಂದ್ರ ಮಂಡಳಿ ಅನುಮತಿ ನೀಡಿತ್ತು.

2019ರ ಆರ್ಥಿಕ ವರ್ಷದಲ್ಲಿನ ಹೆಚ್ಚುವರಿ ನಿವ್ವಳ ಆದಾಯದ ಹಣವಾದ 1,23,414 ಕೋಟಿಯಲ್ಲಿ ಆರ್​ಬಿಐ ಈಗಾಗಲೇ 28, 000 ಕೋಟಿಯನ್ನು ಮಧ್ಯಂತರ ಲಾಭಾಂಶವಾಗಿ ಸರ್ಕಾರಕ್ಕೆ ವರ್ಗಾಯಿಸಿದೆ ಎಂದು ಈ ಸಮಿತಿ ಮಾಹಿತಿ ನೀಡಿದೆ.

ಇದನ್ನೂ ಓದಿ : ಶೇ. 5ರ ಜಿಡಿಪಿ ದರ ಅನಿರೀಕ್ಷಿತ; ದೇಶದ ಆರ್ಥಿಕತೆ ಕುಸಿಯುತ್ತಿರುವುದು ನಿಜ: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್
First published:October 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...