ಇಲಿ ಮಾಂಸಕ್ಕಾಗಿ ಸಂಡೇ ಮಾರ್ಕೆಟ್​ನಲ್ಲಿ ನೂಕುನುಗ್ಗಲು

ಇಲಿಯನ್ನು ಆಹಾರ ಮಾಡಿಕೊಂಡಿರುವ ಈ ಅಸ್ಸಾಮೀ ಜನರಿಗೆ ಒಂದು ಕಡೆ ತಮ್ಮ ಬೆಳೆ ಕಾಪಾಡಿಕೊಳ್ಳುವ ಕೆಲಸವಾಯಿತು, ಮತ್ತೊಂದು ಕಡೆ ಒಳ್ಳೆಯ ಆಹಾರವಾಯಿತು, ಜೊತೆಗೆ ವರಮಾನಮೂಲವೂ ಆಯಿತು.

Vijayasarthy SN | news18
Updated:December 26, 2018, 7:11 PM IST
ಇಲಿ ಮಾಂಸಕ್ಕಾಗಿ ಸಂಡೇ ಮಾರ್ಕೆಟ್​ನಲ್ಲಿ ನೂಕುನುಗ್ಗಲು
ಇಲಿ ಮಾಂಸ
Vijayasarthy SN | news18
Updated: December 26, 2018, 7:11 PM IST
ನವದೆಹಲಿ(ಡಿ. 26): ರೈತರ ಬೆಳೆಗಳನ್ನೇ ಆಹಾರವನ್ನಾಗಿ ಮಾಡಿಕೊಳ್ಳುವ ಇಲಿಗಳೇ ಈಗ ಜನರಿಗೆ ಆಹಾರವಾಗುತ್ತಿದೆ. ಹಾವು, ಜಿರಲೆಗಳನ್ನ ತಿನ್ನುವ ಚೀನಾದ ಕಥೆಯಲ್ಲ ಇದು. ಭಾರತದ ಈಶಾನ್ಯ ರಾಜ್ಯ ಅಸ್ಸಾಮ್​ನ ಒಂದು ಹಳ್ಳಿಯ ಜನರ ಪಾಲಿಗೆ ಇಲಿಯೇ ಫೇವರಿಟ್ ಆಹಾರವಾಗಿದೆ. ನಲ್ಬಾರಿ ಜಿಲ್ಲೆಯ ತಮುಲ್​ಪುರ್ ಪಟ್ಟಣ ಸಮೀಪದ ಕುಮಾರಿಕಟ ಎಂಬ ಊರಿನ ಭಾನುವಾರದ ಸಂತೆಯಲ್ಲಿ ಜನರು ಇಲಿಗಳಿಗೆ ಮುಗಿಬೀಳುತ್ತಿದ್ದಾರಂತೆ. ಇದರೊಂದಿಗೆ ರೈತರಿಗೆ ತಮ್ಮ ಬೆಳೆಗಳನ್ನ ರಕ್ಷಿಸಿಕೊಳ್ಳುವುದರ ಜೊತೆಗೆ ಇಲಿಗಳೇ ಒಂದು ಆದಾಯಮೂಲವಾಗಿಬಿಟ್ಟಿದೆ. ಇಲ್ಲಿಯ ಸ್ಥಳೀಯ ಬುಡಕಟ್ಟು ಕುಟುಂಬದ ಜನರಿಗೆ ಇಲಿ ಹಿಡಿಯುವುದು ಒಂದು ಪಾರ್ಟ್ ಟೈಮ್ ಕೆಲಸವಾಗಿದೆ.

ಈ ಸಂಡೆ ಮಾರ್ಕೆಟ್​ನಲ್ಲಿ ಒಂದು ಕಿಲೋ ಇಲಿಗೆ ಕಡಿಮೆ ಎಂದರೂ 200 ರೂಪಾಯಿ ಬೆಲೆ ಇದೆ. ಆಗಷ್ಟೇ ಕೊಂದ ಇಲಿಗಳು, ಚರ್ಮಸುಲಿದ ಇಲಿಗಳು ಇಲ್ಲಿಯ ಅಂಗಡಿಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಸುತ್ತಮುತ್ತಲಿನ ಗ್ರಾಮದ ಜನರು ಇಲಿ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಹಂದಿ ಮತ್ತು ಕೋಳಿ ಮಾಂಸವು ಈ ಪ್ರದೇಶದಲ್ಲಿ ಜನಪ್ರಿಯ ಆಹಾರವಾದರೂ ಈಗ ಇಲಿಯ ಮಾಂಸವು ಟ್ರೆಂಡಿಂಗ್ ಆಗಿದೆ. ಕೋಳಿಯಂತೆಯೇ ನೀರಿನಲ್ಲಿ ಕುದಿಸಿ, ಚರ್ಮಸುಲಿದು ನಂತರ ಮಸಾಲೆ ಸಾಂಬಾರಿನಲ್ಲಿ ಇಲಿಗಳನ್ನು ಬೇಯಿಸಲಾಗುತ್ತದೆ. ಇದು ಬಹಳ ಸ್ವಾದಿಷ್ಟವಾಗಿರುತ್ತದೆ ಎಂಬುದು ಇಲ್ಲಿನವರ ಅಭಿಪ್ರಾಯ.

ಅಸ್ಸಾಮ್​ನಲ್ಲಿ ರೈತರು ಹೆಚ್ಚಾಗಿ ಟೀ ಮತ್ತು ಭತ್ತ ಬೆಳೆಯುತ್ತಾರೆ. ಸಾಮಾನ್ಯ ರೈತರಿಗೆ ಭತ್ತವೇ ಜೀವನಾಧಾರ. ಆದರೆ, ಇಲಿ, ಹೆಗ್ಗಣಗಳು ಭತ್ತದ ಫಸಲನ್ನೇ ನಾಶ ಮಾಡಿ ರೈತರಿಗೆ ತಲೆನೋವು ತರುತ್ತವೆ. ಈಗ ಇಲಿಗಳ ಮಾಂಸಕ್ಕೆ ಬೇಡಿಕೆ ಹೆಚ್ಚಿರುವುದರಿಂದ ರೈತರು ಬಹಳ ಮುತುವರ್ಜಿಯಿಂದ ಇಲಿಗಳನ್ನ ಹಿಡಿಯಲು ವಿವಿಧ ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಬಿದಿರಿನಿಂದ ಬೋನು ನಿರ್ಮಿಸಿ ರಾತ್ರಿಯ ಹೊತ್ತು ಗದ್ದೆಗಳಲ್ಲಿರುವ ಇಲಿಯ ಬಿಲಗಳ ಬಳಿ ಇಡುತ್ತಾರೆ. ಹೊರಗೆ ಬರುವ ಇಲಿ, ಹೆಗ್ಗಣಗಳು ಬೋನಿಗೆ ಸಿಲುಕಿಕೊಳ್ಳುತ್ತವೆ. ಬೋನಿಗೆ ಸಿಕ್ಕ ಇಲಿಗಳನ್ನು ಬೇರಾವುದಾದರೂ ಪ್ರಾಣಿಗಳು ತಿನ್ನುವ ಸಾಧ್ಯತೆ ಇರುವುದರಿಂದ ರೈತರು ರಾತ್ರಿಯಿಡೀ ಕಾದುಕೂತು ಬೋನಿಗೆ ಸಿಕ್ಕ ಇಲಿಗಳನ್ನು ಸಂಗ್ರಹಿಸುತ್ತಾರೆ.

ಒಟ್ಟಿನಲ್ಲಿ, ಅಸ್ಸಾಮ್​ನ ಜನರಿಗೆ ಒಂದು ಕಡೆ ತಮ್ಮ ಬೆಳೆ ಕಾಪಾಡಿಕೊಳ್ಳುವ ಕೆಲಸವಾಯಿತು, ಮತ್ತೊಂದು ಕಡೆ ಒಳ್ಳೆಯ ಆಹಾರವಾಯಿತು, ಜೊತೆಗೆ ವರಮಾನಮೂಲವೂ ಆಯಿತು.

ವಿಡಿಯೋ: 
ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ 18 ವರ್ಷದ ವೇಗಿ ರೆಕ್ಸ್ ಸಿಂಗ್
First published:December 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ