‘ನೇತಾ ಅಭಿನೇತಾ’: ಭವ್ಯ ಕನಸಿನೊಂದಿಗೆ ರಾಷ್ಟ್ರೀಯ ಪಕ್ಷ ಕಟ್ಟಿದ್ದ ದೇವಾನಂದ್ ಅವರ ಯತ್ನ ವಿಫಲವಾಗಿದ್ಹೇಗೆ?

Vijayasarthy SN
Updated:October 1, 2018, 5:46 PM IST
‘ನೇತಾ ಅಭಿನೇತಾ’: ಭವ್ಯ ಕನಸಿನೊಂದಿಗೆ ರಾಷ್ಟ್ರೀಯ ಪಕ್ಷ ಕಟ್ಟಿದ್ದ ದೇವಾನಂದ್ ಅವರ ಯತ್ನ ವಿಫಲವಾಗಿದ್ಹೇಗೆ?
ರಷೀದ್ ಕಿದ್ವಾಯಿ ಬರೆದ ನೇತಾ ಅಭಿನೇತಾ ಪುಸ್ತಕ
  • Share this:
ಅದು 1977ರ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಸಂದರ್ಭ. ಇಂದಿರಾ ಗಾಂಧಿಯವರ ಕಟು ಟೀಕಾಕಾರ ಎಂದನಿಸಿದ್ದ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ದೇವ್ ಆನಂದ್ ಅವರಿಗೆ ಜನತಾ ಪಕ್ಷ ಸೇರುವಂತೆ ಆಹ್ವಾನ ಕೊಡುತ್ತಾರೆ. ಜನತಾ ಪಕ್ಷದ ಮೂಲಕ ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ದೇವ್ ತಮ್ಮ ಮನೆಯ ಗಾರ್ಡನ್​ನಲ್ಲಿ ಶತಪಥ ಹೆಜ್ಜೆ ಹಾಕುತ್ತಾ ಇಡೀ ರಾತ್ರಿ ಯೋಚನಾಮಗ್ನರಾಗುತ್ತಾರೆ. ಕೊನೆಗೂ ಹಾಸಿಗೆಗೆ ಉರುಳುವ ಅವರು ಮಾರನೇ ದಿನ ಬೆಳಗ್ಗೆ ಎಚ್ಚರವಾಗುವಷ್ಟರಲ್ಲಿ ಒಂದು ನಿರ್ಧಾರಕ್ಕೆ ಬಂದಿರುತ್ತಾರೆ. ತಾನು ಬಹಳ ಗೌರವ ಕೊಡುವ ಮೊರಾರ್ಜಿ ದೇಸಾಯಿ ಮತ್ತು ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ದೇವ್ ಒಪ್ಪಿಕೊಳ್ಳುತ್ತಾರೆ. ಇಂದಿರಾ ಗಾಂಧಿ ಅವರನ್ನು ಖಂಡಿಸಿ ಚುಟುಕು ಭಾಷಣವನ್ನೂ ಮಾಡುತ್ತಾರೆ. ಆದರೆ, ಜನತಾ ಪಕ್ಷದ ಆ ಪ್ರಯೋಗ ಮಾತ್ರ ಬಹಳ ಬೇಗ ನಿರಾಸೆ ತರುತ್ತದೆ.

ಮೊರಾರ್ಜಿ ದೇಸಾಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಬಳಿಕ ಕಾಂಗ್ರೆಸ್(ಐ) ನೆರವಿನಿಂದ ಚರಣ್ ಸಿಂಗ್ ಸರಕಾರ ರಚಿಸುತ್ತಾರೆ. ಆದರೆ ಹೆಚ್ಚು ಕಾಲ ಬಾಳುವುದಿಲ್ಲ. ಇಂದಿರಾ ಗಾಂಧಿ ಬೆಂಬಲ ಹಿಂಪಡೆದುಕೊಳ್ಳುವುದರೊಂದಿಗೆ ಚರಣ್ ಸಿಂಗ್ ಸರಕಾರ ಪತನಗೊಂಡು 1980ರ ಚುನಾವಣೆಗೆ ಎಡೆ ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಪಾಠ ಕಲಿಸಲು ನಿರfಧರಿಸಿದ ದೇವ್ ಆನಂದ್ ಅವರು ನ್ಯಾಷನಲ್ ಪಾರ್ಟಿ ಆಫ್ ಇಂಡಿಯಾ (ಎನ್​ಪಿಐ) ಎಂಬ ತನ್ನದೇ ಪಕ್ಷವೊಂದನ್ನು ಹುಟ್ಟುಹಾಕುತ್ತಾರೆ. ದೇಶದ ಗಣ್ಯ ಜನರನ್ನು ಸೇರಿಸಿಕೊಂಡು ಪಕ್ಷ ಬೆಳೆಸುವ ಕನಸು ಕಟ್ಟುತ್ತಾರೆ. “ಎಂಜಿಆರ್ ಅವರು ತಮಿಳುನಾಡಿನಲ್ಲಿ ಮ್ಯಾಜಿಕ್ ಸೃಷ್ಟಿಸುವುದಾದರೆ ಇಡೀ ದೇಶಕ್ಕೆ ಮಾಡಲು ಯಾಕೆ ಸಾಧ್ಯವಿಲ್ಲ?” ಎಂದು ದೇವ್ ಆನಂದ್ ಅವರು ತಮ್ಮ ಬೆಂಬಲಿಗರನ್ನು ಕೇಳುತ್ತಾರೆ. “ಬುದ್ಧಿವಂತ, ತಿಳಿವಳಿಕೆ ಇರುವ ಜನರು ಸಂಸತ್​ನಲ್ಲಿ ಜನರನ್ನು ಪ್ರತಿನಿಧಿಸುವ ಸಂದರ್ಭ ಬಂದಿದೆ,” ಎಂದು ಅವರು ಹೇಳುತ್ತಾರೆ. ಆಗಿನ ಬಾಂಬೆಯ ಐತಿಹಾಸಿಕ ಶಿವಾಜಿ ಪಾರ್ಕ್​ನಲ್ಲಿ ಸಮಾವೇಶ ನಡೆಯುತ್ತದೆ. ಭರ್ತಿ ಜನರು ಸೇರುತ್ತಾರೆ. ತನ್ನೊಂದಿಗೆ ಕೈ ಜೋಡಿಸುವಂತೆ ಕೋರಿ ಇಂದಿರಾ ಗಾಂಧಿ ಅವರು ಮಧ್ಯವರ್ತಿಯೊಬ್ಬರನ್ನು ದೇವ್ ಆನಂದ್ ಬಳಿ ಕಳುಹಿಸುತ್ತಾರೆ. ಆದರೆ, ದೇವ್ ಇದಕ್ಕೆ ಒಪ್ಪುವುದಿಲ್ಲ. “ಒಬ್ಬ ಸರ್ವಾಧಿಕಾರಿಯೊಂದಿಗೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ,” ಎಂಬುದು ದೇವ್ ಅಭಿಪ್ರಾಯ. 1980ರ ಚುನಾವಣೆ ಸಮೀಪಿಸುತ್ತಿದ್ದಂತೆಯೇ ದೇವ್ ಆನಂದ್ ದೊಡ್ಡ ಕನಸು ಕಾಣಲು ಆರಂಭಿಸುತ್ತಾರೆ. ಹೊಸ ಹೊಸ ಚಿಂತನೆಗಳು ಅವರ ಮನಸ್ಸನ್ನು ಎಡೆತಾಕುತ್ತಿರುತ್ತವೆ. “ಪ್ರಾಚೀನ ನಾಗರಿಕತೆ ಮತ್ತು ಆಧುನಿಕ ಭಾರತವನ್ನು ಬೆಸೆಯುವಂತಹ ಒಂದು ದೊಡ್ಡ ಹೆಜ್ಜೆ ಇಡಬೇಕಿತ್ತು. ಪ್ರತಿಯೊಂದು ಹಳ್ಳಿಯೂ ವಿದ್ಯುತ್, ನೀರಿನ ಸೌಲಭ್ಯಗಳಿರುವ ಸುಂದರ ಪುಟ್ಟ ಪಟ್ಟಣಗಳಾಗಿ ಮಾರ್ಪಾಡದರೆ ಹೇಗಿದ್ದೀತು..! ಪ್ರತಿಯೊಬ್ಬರೂ ಇಂಗ್ಲೀಷ್ ಕಲಿಯುವಂತಾದರೆ; ರೈತರು, ಕೂಲಿಗಳು, ಕಾರ್ಮಿಕರು, ದೊಡ್ಡ ಉದ್ಯೋಗಿಗಳು ಎಲ್ಲರೂ ಕಾರುಗಳಲ್ಲಿ ಓಡಾಡುತ್ತಾ, ಪರಸ್ಪರ ಸ್ನೇಹಪೂರ್ವಕವಾಗಿ ಕೈ ಬೀಸುತ್ತಿದ್ದರೆ ಹೇಗಿದ್ದೀತು..! ರಾಜಕಾರಣಕ್ಕೆ ಕಾಲಿಟ್ಟರೆ ಇಂಥದ್ದೊಂದು ಅದ್ಭುತ ಕನಸನ್ನು ನನಸು ಮಾಡಬೇಕು,” ಎಂದು ದೇವ್ ಆನಂದ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದರು. ದೇವಾನಂದ್ ಅವರ 84ನೇ ಜನ್ಮದಿನವಾದ 2007ರ ಸೆಪ್ಟೆಂಬರ್ 26ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಆತ್ಮಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ. ಕಾಕತಾಳೀಯವೆಂಬಂತೆ ಅಂದು ಮನಮೋಹನ್ ಸಿಂಗ್ ಅವರದ್ದು 75ನೇ ಜನ್ಮದಿನವಾಗಿತ್ತು. ಆ ಕಾರ್ಯಕ್ರಮದಲ್ಲಿ ದೇವಾನಂದ್ ಅವರು “ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಈ ದೇಶವನ್ನು ಆಗಸದೆತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರಲ್ಲಿದೆ,” ಎಂದು ಹೊಗಳುತ್ತಾರೆ.

ದೇವಾನಂದ್ ಪ್ರಾರಂಭಿಸಿದ ನ್ಯಾಷನಲ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಕೆಲವೇ ತಿಂಗಳಲ್ಲಿ ಬಾಗಿಲು ಹಾಕಿಕೊಳ್ಳುತ್ತದೆ. ಖ್ಯಾತ ನ್ಯಾಯವಾದಿ ನಾನಿ ಪಾಲ್ಖಿವಾಲಾ ಮತ್ತು ನೆಹರೂ ಸೋದರಿ ವಿಜಯಲಕ್ಷ್ಮೀ ಪಂಡಿತ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂಸರಿಯುತ್ತಾರೆ. ತಾನು ರಾಜ್ಯಸಭೆಯ ಮೂಲಕ ಸಂಸತ್ತಿಗೆ ಹೋಗಬಯಸುವುದಾಗಿ ತಿಳಿಸುವ ಪಾಲ್ಖೀವಾಲ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ. ದೇವಾನಂದ್ ಅವರು ತನ್ನ ಪಕ್ಷದ ಪ್ರಣಾಳಿಕೆಯನ್ನು ರಚಿಸಿದ್ದರಾದರೂ, ಅವರ ಪಕ್ಷದ ಇತರ ಸದಸ್ಯರು ಅವರ ಕೆಲ ಪ್ರಮುಖ ಸಲಹೆಗಳಿಗೆ ಮಾರ್ಪಾಡು ತರುತ್ತಾರೆ. ಅಷ್ಟೇ ಅಲ್ಲ, 500 ಲೋಕಸಭೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಹುಡುಕುವುದೂ ಒಂದು ದೊಡ್ಡ ತಲೆನೋವಾಗಿತ್ತು. ದೇವ್ ಆನಂದ್ ಅವರ ಮಾತಿನಲ್ಲೇ ಹೇಳುವುದಾದರೆ, “ಆರಂಭದಲ್ಲಿ ಉತ್ಸಾಹದ ಚಿಲುಮೆಗಳಂತಿದ್ದ ಜನರಲ್ಲಿ ಒಂದು ರೀತಿಯ ಔದಾಸೀನ್ಯತೆ ತುಂಬಿಹೋಗಿತ್ತು. ಇದು ನನ್ನ ಉತ್ಸಾಹವನ್ನು ಕುಂದಿಸಿತು… ಒಂದು ರಾಷ್ಟ್ರೀಯ ಪಕ್ಷದ ಅಂತ್ಯ ಅದಾಗಿತ್ತು. ಶುರುವಿನಲ್ಲೇ ಕಮರಿ ಹೋದ ಒಂದು ಶ್ರೇಷ್ಠ ಪ್ರಯತ್ನವಾಗಿತ್ತದು.”

ಮಧ್ಯಪ್ರದೇಶದ ಭೋಪಾಲ್ ಮೂಲದ ಪತ್ರಕರ್ತ ಹಾಗೂ ಸಿನಿಮಾ ಇತಿಹಾಸಕಾರ ರಾಜಕುಮಾರ್ ಕೇಸವಾನಿ ಅವರ ಪ್ರಕಾರ ದೇವಾನಂದ್ ನೇತೃತ್ವದ ಪಕ್ಷವು ಒಳ್ಳೆಯ ಉದ್ದೇಶದ ಸೋಲಾಗಿತ್ತು. 2014ರ ಏಪ್ರಿಲ್​ನಲ್ಲಿ ಔಟ್​ಲುಕ್ ಮ್ಯಾಗಜಿನ್​ನಲ್ಲಿ “ಒನ್ ರೀಲ್ ಫಾರ್ ಪೊಲಿಟಿಕ್ಸ್” ಎಂಬ ಲೇಖನದಲ್ಲಿ ರಾಜಕುಮಾರ್ ಕೇಸ್ವಾನಿ ನೇರವಾಗಿ ಈ ರೀತಿ ಬರೆಯುತ್ತಾರೆ: “ಇದು ವಿಚಿತ್ರವಾದರೂ ಭಾರತದ ರಾಜಕೀಯ ಇತಿಹಾಸದಲ್ಲಿನ ಒಂದು ನೈಜ ಬೆಳವಣಿಗೆಯಾಗಿತ್ತು. ದೇಶದ ಭ್ರಷ್ಟ ರಾಜಕಾರಣಿಗಳ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸುತ್ತಿದೆ ಎಂದು ದೇವ್ ಹಾಗೂ ಅವರ ಸಂಗಡಿಗರು ಬಣ್ಣಿಸಿದರು. ಈ ಹೋರಾಟಗಾರರು ಸಿನಿಮಾ ದಿಗ್ಗಜರೇ ಎಂಬುದು ಇಲ್ಲಿ ವಿಶೇಷ. ರಾಜಕಾರಣಿಗಳಿಗೆ ಒಂದು ಪಾಠ ಕಲಿಸಹೊರಟಿದ್ದರು. ರಾಜಕಾರಣಿಗಳೆಂದರೆ ಇವರ ಪಾಲಿಗೆ ದುರಾಸೆಯ ಮೂರ್ಖರು, ಸ್ವಾರ್ಥಿಗಳಾಗಿದ್ದರು.”

1979ರ ಸೆಪ್ಟೆಂಬರ್ 14ರಂದು ಲ್ಲಿ ಬಾಂಬೆಯ ತಾಜ್ ಹೋಟೆಲ್​ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕೇಸ್ವಾನಿ ಉಪಸ್ಥಿತರಿದ್ದರು. ಅದೇ ಸ್ಥಳದಲ್ಲಿ ದೇವ್ ಆನಂದ್ ತಮ್ಮ ನ್ಯಾಷನಲ್ ಪಾರ್ಟಿ ಆಫ್ ಇಂಡಿಯಾ ಸ್ತಾಪಿಸಿ ಅದರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದರು. ದೇವಾನಂದರ ಹೊಸ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದ ಭಾರತೀಯ ಚಿತ್ರರಂಗದ ಆಗಿನ ಘಟಾನುಘಟಿಗಳಾದ ವಿ. ಶಾಂತಾರಾಮ್, ರಮಾನಂದ ಸಾಗರ್, ಜಿ.ಪಿ. ಸಿಪ್ಪಿ, ಶ್ರೀರಾಮ್ ಬೋಹ್ರಾ, ಆತ್ಮಾರಾಮ್, ಐ.ಎಸ್. ಜೋಹಾರ್, ಹೇಮಮಾಲಿನಿ, ಶತ್ರುಘ್ನ ಸಿನ್ಹ, ಸಂಜೀವ್ ಕುಮಾರ್ ಮತ್ತಿತರರು ಅಂದು ನೆರೆದಿದ್ದರು. “ಪಕ್ಷದ ಸಂವಿಧಾನವನ್ನು ರಚಿಸಲು, ಸದಸ್ಯತ್ವ ಸಂಗ್ರಹಿಸಲು, ಚುನಾವಣೆ ಪ್ರಣಾಳಿಕೆ ತಯಾರಿಸಲು ದೇವ್ ಹಾಗೂ ಸಂಗಡಿಗರು ಸೇರಿಕೊಂಡು ಹಲವು ತಂಡಗಳನ್ನು ಕಟ್ಟಿದರು,” ಎಂದು ಕೇಸ್ವಾನಿ ಬರೆಯುತ್ತಾರೆ. ದೇವ್ ಅವರೇ ಖುದ್ದಾಗಿ ಭಾರೀ ಆತ್ಮವಿಶ್ವಾಸದಲ್ಲಿದ್ದರು. “ನಾವು ಪ್ರೀತಿಸುವ ದೇಶಕ್ಕೋಸ್ಕರ ಈ ಕೊಳಕು ವ್ಯವಸ್ಥೆಯನ್ನು ಸರಿಪಡಿಸಿ, ಹಿರಿ ಪರದೆಯ ಮೇಲೆ ತೋರುವಷ್ಟು ಭವ್ಯ ಭಾರತ ಕಟ್ಟುವ ಕೆಲಸ ಯಾಕಾಗಬಾರದು?” ಎಂದು ದೇವ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದರು. ಸದಸ್ಯತ್ವ ಸಂಗ್ರಹಿಸುವುದು ಸಮಸ್ಯೆಯೇನಲ್ಲ. ಕೇಸವಾನಿ ಪ್ರಕಾರ, ದೇವಾನಂದರ ಪಕ್ಷದ ಸದಸ್ಯತ್ವ ಸಂಗ್ರಹದ ಕಾರ್ಯಕ್ಕೆ ದೇಶಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. “ಮೆಂಬರ್​ಶಿಪ್ ಶುಲ್ಕವಾಗಿ ಒಂದು ರೂಪಾಯಿ ಕೊಡುವ ಮೂಲಕ ತಾವು ಸಿನಿಮಾ ತಾರೆಯರ ಸಾಂಗತ್ಯ ಹೊಂದುತ್ತೇವೆಂದು ಎಲ್ಲರೂ ಯೋಚಿಸಿದರು. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವ ವೇಳೆ ಅಕ್ಷರಶಃ ಆ್ಯಂಗ್ರಿ ಯಂಗ್ ಮ್ಯಾನ್​ನಂತೆ ತೋರುತ್ತಿದ್ದ ದೇವ್ ಆನಂದ್ ಅವರು ತಾನೊಂದು ಮಹದ್ ಹೋರಾಟ ಪ್ರಾರಂಭಿಸುತ್ತಿದ್ದೇವೆಂದು ಮಾಧ್ಯಮಗಳಿಗೆ ತಿಳಿಸುತ್ತಾರೆ. ಬಡತನ, ನಿರುದ್ಯೋಗ, ನಿರಕ್ಷರತೆ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋಆಟವಿದು. ಸಂಪದ್ಭರಿತ ಹಾಗೂ ಅಭಿವೃದ್ಧಿನಿರತ ಸಮಾಜಕ್ಕೆ ಉತ್ತೇಜಿಸುವ ಒಂದು ಪಕ್ಷ ಎಂದು ಪ್ರಣಾಳಿಕೆಯಲ್ಲಿ ಬರೆದಿರುತ್ತಾರೆ.”

ಅವರ ಅಂದಿನ ಭಾಷಣವು ಒಂದು ರೀತಿಯಲ್ಲಿ ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಮಿಶ್ರಣದಂತಿತ್ತು. ಆ ಸಂದರ್ಭದಲ್ಲಿ ಮಾಧ್ಯಮಗಳ ಗಮನ ಸೆಳೆಯಲು ವಿಫಲವಾಗಿತ್ತು. ಯಾವುದೋ ಚಿತ್ರವೊಂದರ ಪ್ರಚಾರವೆಂಬಂತೆ ಪರಿಗಣಿಸಲಾಗಿತ್ತು.

(ಇದು ರಷೀದ್ ಕಿದ್ವಾಯಿ ಅವರು ಬರೆದಿರುವ ‘ನೇತಾ ಅಭಿನೇತಾ’ ಪುಸ್ತಕದಿಂದ ಆಯ್ದ ಒಂದು ಭಾಗವಾಗಿದೆ)
First published: October 1, 2018, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading