ನವದೆಹಲಿ(ಫೆ.14): ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯೂ ದೇಶದ ಟೆಲಿಕಾಂ ಕಂಪನಿಗಳಿಗೆ ನೋಟಿಸ್ ನೀಡಿದೆ. ಕಟ್ಟದೆ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ರೂ. ಎಜಿಆರ್ ಹಣವನ್ನು ಇಂದು ಮಧ್ಯರಾತ್ರಿ 12 ಗಂಟೆಯೊಳಗೇ ಪಾವತಿಸುವಂತೆ ದೇಶದ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸೂಚಿಸಿದೆ.
ಇಂದು ಬೆಳಿಗ್ಗೆಯೇ ನ್ಯಾಯಾಲಯ ಆದೇಶ ಮಾಡಿದ್ದರೂ ಒಂದೂ ರೂಪಾಯಿ ದಂಡ ಕಟ್ಟದೆ ನಿರುಮ್ಮಳವಾಗಿರುವ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತಾದರೂ ಕಿಮ್ಮತ್ತು ಕೊಡದೆ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ವ್ಯಗ್ರಗೊಂಡಿರುವ ಸುಪ್ರೀಂ ಕೋರ್ಟ್ ಈ ಟೆಲಿಕಾಂ ಕಂಪನಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದೆ. ವೊಡಾಫೋನ್ ಐಡಿಯಾ, ಭಾರ್ತಿ ಏರ್ಟೆಲ್ ಮೊದಲಾದ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಸುಮಾರು ದೊಡ್ಡ ಮೊತ್ತದ ಎಜಿಆರ್ ಹಣವನ್ನು ಬಾಕಿ ಉಳಿಸಿಕೊಂಡಿರುವ ಪ್ರಕರಣ ಇದಾಗಿದೆ.
ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯ (ಡಿಓಟಿ) ಟೆಲಿಕಾಂ ಆದಾಯ ಹಂಚಿಕೆ (ಎಜಿಆರ್) ನಿಯಮದ ಪ್ರಕಾರ ವಿವಿಧ ಟೆಲಿಕಾಂ ಕಂಪನಿಗಳು 1.5 ಲಕ್ಷ ಕೋಟಿ ಮೊತ್ತದಷ್ಟು ಹಣ ಪಾವತಿಸಬೇಕಾಗುತ್ತದೆ. ಆದರೆ, ಹಲವು ವರ್ಷಗಳಿಂದ ಟೆಲಿಕಾಂ ಕಂಪನಿಗಳು ಈ ಹಣ ಕಟ್ಟದೆ ಸುಮ್ಮನಿದ್ದವು. ಕಳೆದ ವರ್ಷದ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ತೀರ್ಪು ನೀಡಿ ಟೆಲಿಕಾಂ ಕಂಪನಿಗಳಿಗೆ ಬಾಕಿ ಹಣ ಪಾವತಿಸುವಂತೆ ಆದೇಶಿಸಿತು. ಅದರಂತೆ, ವೊಡಾಫೋನ್ ಐಡಿಯಾ ಸಂಸ್ಥೆ 50,000 ಕೋಟಿ ರೂ ಹಾಗೂ ಭಾರ್ತಿ ಏರ್ಟೆಲ್ 35,586 ಕೋಟಿ ರೂ ಬಾಕಿ ಹಣ ಪಾವತಿಸಬೇಕಾಗುತ್ತದೆ.
ತಿಂಗಳುಗಾದರೂ ಹಣ ಪಾವತಿ ಮಾಡದೇ ಹೋದಾಗ ಮಾರ್ಚ್ 17ರಂದು ವಿವಿಧ ಟೆಲಿಕಾಂ ಕಂಪನಿಗಳ ಉನ್ನತಾಧಿಕಾರಿಗಳನ್ನು ಕರೆಸಿದ ಸುಪ್ರೀಂ ನ್ಯಾಯಪೀಠ, ಕೋರ್ಟ್ ಆದೇಶ ಪಾಲಿಸಲು ಇದು ಕೊನೆಯ ಅವಕಾಶ. ಪಾಲಿಸದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೂ ಕೂಡ ಟೆಲಿಕಾಂ ಕಂಪನಿಗಳು ತಮ್ಮ ಹಠ ಮುಂದುವರಿಸಿವೆ.
ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ಒಂದು ಬೆಲೆ ಬೇಡವೇ?: ಟಿಲಿಕಾಂ ಕಂಪನಿಗಳ ಮೇಲೆ ಸುಪ್ರೀಂ ಕೆಂಡಾಮಂಡಲ
ಇನ್ನು, ಟೆಲಿಕಾಂ ಕಂಪನಿಗಳ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಅನ್ವಯ ಆಗದಂತೆ ದೂರಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಡೆಯ ಆದೇಶ ಹೊರಡಿಸಿದ್ದರು. ಈ ವಿಚಾರವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಕೋಪೋದ್ರಿಕ್ತಗೊಳಿಸಿದೆ. ಆ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ನೋಟೀಸ್ ನೀಡಲಾಗಿದೆ. ತನ್ನ ವರ್ತನೆ ಬಗ್ಗೆ ಉತ್ತರ ನೀಡುವಂತೆ ಆತನಿಗೆ ಸೂಚಿಸಲಾಗಿದೆ. ಹಾಗೆಯೇ, ಸಂಜೆಯಷ್ಟರಲ್ಲಿ ಆತ ತನ್ನ ಆದೇಶ ಹಿಂಪಡೆಯದಿದ್ದರೆ ಜೈಲಿಗೆ ಹೋಗಲು ಸಿದ್ಧವಾಗಬೇಕಾಗುತ್ತದೆ ಎಂದು ನ್ಯಾ| ಎಸ್.ಎ. ನಜೀರ್ ಮತ್ತು ನ್ಯಾ| ಎಂಆರ್ ಶಾ ಅವರಿದ್ದ ನ್ಯಾಯಪೀಠವು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ.
“ನಾವು ಸರ್ವೋಚ್ಚ ನ್ಯಾಯಾಲಯವನ್ನೇ ಮುಚ್ಚಿಬಿಡಬೇಕಾ? ಈ ದೇಶದಲ್ಲಿ ಕಾನೂನು ಎಂಬುದು ಏನಾದರೂ ಉಳಿದಿದೆಯಾ? ಒಬ್ಬ ಸರ್ಕಾರಿ ಅಧಿಕಾರಿ ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆ ನೀಡುವುದು ಹೇಗೆ? ಆತನ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ?” ಎಂದು ಸುಪ್ರೀಮ್ ನ್ಯಾಯಮೂರ್ತಿಗಳು ಕೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ