ಎನ್​ಕೌಂಟರ್ ಮಾಡಿ ಶಿಳ್ಳೆ ಗಿಟ್ಟಿಸಿದ ಪೊಲೀಸರಿಗೆ ಅಪರಾಧ ತಡೆಯುವ ಉತ್ಸಾಹ ಇರಲಿಲ್ಲವಾ? ಆ ಘಟನೆ ದಿನ ಆದ ಯಡವಟ್ಟುಗಳೇನು?

ಪಶುವೈದ್ಯೆಯ ಸೋದರಿ ರಾತ್ರಿ ಸುಮಾರು 9:40ಕ್ಕೆಯೇ ಆರ್​ಜಿಐಎ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿರುತ್ತಾರೆ. ಆಗಲೇ ಆ ಪೊಲೀಸ್ ಠಾಣೆಯವರು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದಿದ್ದರೆ ಪ್ರಾಯಶಃ ಪಶುವೈದ್ಯೆಯನ್ನು ಅತ್ಯಾಚಾರದಿಂದಲ್ಲವಾದರೂ ಜೀವಂತವಾಗಿಯಾದರೂ ಉಳಿಸಿಕೊಳ್ಳಬಹುದಿತ್ತು.

Vijayasarthy SN | news18
Updated:December 6, 2019, 7:38 PM IST
ಎನ್​ಕೌಂಟರ್ ಮಾಡಿ ಶಿಳ್ಳೆ ಗಿಟ್ಟಿಸಿದ ಪೊಲೀಸರಿಗೆ ಅಪರಾಧ ತಡೆಯುವ ಉತ್ಸಾಹ ಇರಲಿಲ್ಲವಾ? ಆ ಘಟನೆ ದಿನ ಆದ ಯಡವಟ್ಟುಗಳೇನು?
ಸೈಬರಾಬಾದ್ ಪೊಲೀಸರು
  • News18
  • Last Updated: December 6, 2019, 7:38 PM IST
  • Share this:
ಹೈದರಾಬಾದ್(ಡಿ. 06): ಪಶುವೈದ್ಯೆ ಮೇಲೆ ಕಾಮಪಿಶಾಚಿಗಳು ಡಿ. 4ರಂದು ರಾತ್ರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಹತ್ಯೆಗೈದು ಸುಟ್ಟುಹಾಕಿದ್ದರು. ಈ ಘಟನೆ ಸಂಬಂಧ ಬಂಧಿತರಾದ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಇಂದು ಮುಂಜಾವು ಎನ್​ಕೌಂಟರ್ ಮಾಡಿ ಸಾಯಿಸಿದ್ದಾರೆ. ಪೊಲೀಸರ ಈ ‘ಕ್ಷಿಪ್ರ’ ಕಾರ್ಯಾಚರಣೆಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ದೇಶಾದ್ಯಂತ ರೇಪಿಸ್ಟ್​​ಗಳಿಗೆ ಇಂಥದ್ದೇ ಎನ್​ಕೌಂಟರ್ ಶಿಕ್ಷೆ ಆಗಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ, ಈಗ ಪ್ರಶ್ನೆ ಇರುವುದು ಪೊಲೀಸರು ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಾಗ ಇದ್ದ ಉತ್ಸಾಹವನ್ನು ಈ ಘಟನೆಯನ್ನು ತಡೆಯುವ ನಿಟ್ಟಿನಲ್ಲಿ ಯಾಕೆ ತೋರಲಿಲ್ಲ ಎಂಬುದು.

ಸೈಬರಾಬಾದ್ ಪೊಲೀಸರು ಮಾಡಿದ ಯಡವಟ್ಟಿನ ಬಗ್ಗೆ ಓದುವ ಮುನ್ನ ಅವರು ಈ ಅಪರಾಧ ಘಟನೆಯಲ್ಲಿ ನೀಡಿರುವ ವಿವರಣೆಯನ್ನು ಪ್ರಸ್ತಾಪಿಸುತ್ತಿದ್ದೇವೆ.

ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಡಿ. 4ರಂದು ಸಂಜೆ 6ಗಂಟೆಗೆ 25 ವರ್ಷ ಪಶುವೈದ್ಯೆ ಶಂಶಾಬಾದ್​ನ ತೋಂಡುಪಲ್ಲಿ ಟೋಲ್​ಗೇಟ್ ಬಳಿ ತನ್ನ ಬೈಕ್ ಪಾರ್ಕ್ ಮಾಡುತ್ತಾರೆ. ಈಕೆ ಬೈಕ್ ನಿಲ್ಲಿಸಿ ಹೋಗಿದ್ದನ್ನು ನಾರಾಯಣ ಪೇಟ್ ಜಿಲ್ಲೆಯ ಮೊಹಮ್ಮದ್ ಅರೀಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಲ ಚನ್ನಕೇಶವುಲು ನೋಡುತ್ತಾರೆ. ಅದಾದ ಬಳಿಕ ಇವರೆಲ್ಲರೂ ಸಾರಾಯಿ ಕುಡಿಯುತ್ತಾ ಆ ಯುವತಿ ವಿರುದ್ಧ ಅಪರಾಧದ ಸಂಚು ರೂಪಿಸುತ್ತಾರೆ. ಅದರಂತೆ, ಜೊಲ್ಲು ನವೀನ್ ಎಂಬಾತ ಈಕೆಯ ಸ್ಕೂಟರ್​ನ ಹಿಂಬದಿ ಚಕ್ರದ ಗಾಳಿ ಹೊರಹಾಕಿ ಪಂಕ್ಚರ್ ಮಾಡುತ್ತಾನೆ. ಈ ಮಹಿಳೆ ವಾಪಸ್ ಬಂದು ತನ್ನ ಗಾಡಿ ಪಂಕ್ಚರ್ ಆಗಿರುವುದನ್ನು ಗಮನಿಸುತ್ತಾರೆ. ಆಗ ಮೊಹಮ್ಮದ್ ಅರೀಫ್ ಆಕೆಯ ಬಳಿ ಬಂದು ಪಂಕ್ಚರ್ ಸರಿಮಾಡಿಸಿಕೊಡುವುದಾಗಿ ಹೇಳಿ ಸಹಾಯಕ್ಕೆ ಮುಂದಾಗುತ್ತಾನೆ. ಜೊಲ್ಲು ಶಿವ ಅಲ್ಲಿಗೆ ಬಂದು ಗಾಡಿಯನ್ನು ಪಂಕ್ಚರ್ ಶಾಪ್​ಗೆ ತೆಗೆದುಕೊಂಡು ಹೋಗುತ್ತಾನೆ. ಆಗ ಮಹಿಳೆ ಟೋಲ್ ಪ್ಲಾಜಾ ಸಮೀಪ ಕಾಯುತ್ತಾ ಇರುತ್ತಾರೆ. ಕೆಲ ನಿಮಿಷಗಳ ನಂತರ ಆಕೆಯನ್ನು ಸಮೀಪದ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿ ಕೊನೆಗೆ ಸಾಯಿಸುತ್ತಾರೆ.

ಇದಾದ ಬಳಿಕ ಮೊಹಮ್ಮದ್ ಮತ್ತು ಚನ್ನಕೇಶವುಲು ಅವರು ಮಹಿಳೆಯ ಶವವನ್ನು ತಮ್ಮ ಲಾರಿಯಲ್ಲಿಟ್ಟುಕೊಂಡು ಶಾದ್​ನಗರ್ ಕಡೆ ಹೋಗುತ್ತಾರೆ. ಜೊಲ್ಲು ಶಿವ ಮತ್ತು ಜೊಲ್ಲು ನವೀನ್ ಇಬ್ಬರು ಆ ಮಹಿಳೆಯ ಸ್ಕೂಟರ್​ನಲ್ಲೇ ಕೂತು ಹಿಂಬಾಲಿಸಿ ಬರುತ್ತಾರೆ. ಈ ಇಬ್ಬರು ಯುವಕರು ವಿವಿಧ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಸಂಗ್ರಹಿಸಿಕೊಂಡು ಹೋಗುತ್ತಿರುತ್ತಾರೆ. ಶಾದ್​​ನಗರ್ ಬಳಿಯ ಅಂಡರ್​ಪಾಸ್​ವೊಂದರಲ್ಲಿ ನಾಲ್ವರು ಆರೋಪಿಗಳೂ ಒಟ್ಟು ಸೇರಿ ಶವವನ್ನು ಇಟ್ಟು ಬೆಂಕಿ ಹಚ್ಚುತ್ತಾರೆ. ಎಲ್ಲರೂ ಕೂಡಲೇ ಸ್ಥಳದಿಂದ ಹೋಗುತ್ತಾರಾದರೂ ಕೆಲ ಹೊತ್ತಿನ ಬಳಿಕ ಇಬ್ಬರು ಆರೋಪಿಗಳು ವಾಪಸ್ ಬಂದು ಶವ ಸರಿಯಾಗಿ ಸುಟ್ಟಿದೆಯೇ ಎಂದು ಪರೀಕ್ಷಿಸಿ ಹೋಗುತ್ತಾರೆ.

ಪೊಲೀಸರು ನೀಡಿರುವ ಹೇಳಿಕೆ ಪ್ರಕಾರ, ಆರೋಪಿಗಳನ್ನು ಹಿಡಿಯುವಲ್ಲಿ ಶಾದ್​ನಗರ ಮತ್ತು ಶಂಶಾಬಾದ್ ವಿಭಾಗದ ಪೊಲೀಸ್ ಸಿಬ್ಬಂದಿ ಒಳ್ಳೆಯ ಕಾರ್ಯಕ್ಷಮತೆ ತೋರಿದ್ದಾರೆ. ಬಹಳ ಕ್ಷಿಪ್ರವಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ....

ವಾಸ್ತವದಲ್ಲಿ ಪೊಲೀಸರ ಕರ್ತವ್ಯ ಲೋಪಗಳೇನು?

ಪೊಲೀಸರು ಹೇಳಿದಷ್ಟೂ ನಿಜ ಇರಬಹುದು. ಆದರೆ, ಅವರು ಒಂದು ವಿಷಯವನ್ನು ಮಾತ್ರ ಒಪ್ಪಿಕೊಂಡಿಲ್ಲ. ಮಹಿಳೆ ಶವ ಬೆಂಕಿಯಲ್ಲಿ ಬೇಯುವ ಮುಂಚೆ ನಡೆದ ಬೆಳವಣಿಗೆಗಳಲ್ಲಿ ಪೊಲೀಸರ ಯಡವಟ್ಟುಗಳ ಬಗ್ಗೆ ಮಾತ್ರ ಮಾತನಾಡಿಲ್ಲ. ಕಿರಾತಕರಿಗೆ ಬಲಿಯಾದ ಆ ಹೆಣ್ಮಗಳನ್ನು ರಕ್ಷಿಸುವ ಎಲ್ಲಾ ಸಾಧ್ಯತೆಗಳನ್ನು ಪೊಲೀಸರು ತಮ್ಮ ಕೈಯಾರೆ ದೂರ ಮಾಡಿಕೊಂಡಿದ್ದರು.ಪಶುವೈದ್ಯೆಯು ರಾತ್ರಿ 9:22ಕ್ಕೆ ತನ್ನ ಸಹೋದರಿಗೆ ಫೋನ್ ಮಾಡುತ್ತಾರೆ. ಗಾಡಿ ಪಂಕ್ಚರ್ ಆಗಿದೆ. ತಾನು ಟೋಲ್ ಪ್ಲಾಜಾದಲ್ಲಿ ಸಿಲುಕಿಬಿಟ್ಟಿದ್ದೇನೆ. ಯಾರೋ ಪಂಕ್ಚರ್ ಹಾಕಿಸಲು ಸ್ಕೂಟರ್ ತೆಗೆದುಕೊಂಡು ಹೋಗಿದ್ಧಾರೆ. ಇಲ್ಲೆಲ್ಲಾ ಟ್ರಕ್​ಗಳು ಹಾಗೂ ವಿಚಿತ್ರ ಜನರಿದ್ದಾರೆ. ತನಗೆ ಭಯವಾಗುತ್ತಿದೆ ಎಂದು ಆಕೆ ಫೋನ್​ನಲ್ಲಿ ಗಾಬರಿ ತೋಡಿಕೊಂಡಿದ್ದರು. ನೀನು ಅಲ್ಲಿರಬೇಡ. ಕೂಡಲೇ ಟೋಲ್ ಪ್ಲಾಜಾಗೆ ಹೋಗಿಬಿಡು ಎಂದು ಆ ಸೋದರಿ ಸಲಹೆ ನೀಡುತ್ತಾರೆ. ಅದಾಗಿ 15 ನಿಮಿಷಗಳ ನಂತರ ಪಶುವೈದ್ಯೆಯ ಸೋದರಿ ಫೋನ್ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿರುತ್ತಾರೆ. ಆತಂಕಗೊಂಡ ಆ ಸೋದರಿ ಅರ್ಧಗಂಟೆಯೊಳಗೆ ಶಂಶಾಬಾದ್ ಟೋಲ್ ಪ್ಲಾಜಾ ಬಳಿ ಬಂದು ನೋಡಿದಾಗ ಅವರಿರುವುದಿಲ್ಲ.

ಆ ಟೋಲ್ ಪ್ಲಾಜಾದಿಂದ ಕೆಲವೇ ನಿಮಿಷಗಳಷ್ಟು ದೂರ ಇರುವ ಆರ್​ಜಿಐಎ ಪೊಲೀಸ್ ಠಾಣೆಗೆ ಆಕೆ ಹೋಗುತ್ತಾರೆ. ಅದು ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ. ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿ ಕಳುಹಿಸುತ್ತಾರೆ. ಆ ಸೋದರಿ ಏನೇ ಮನವಿ ಮಾಡಿದರೂ ಆ ಪೊಲೀಸರ ಉತ್ತರ ಅದೇ ಆಗಿತ್ತು. ಅನಿವಾರ್ಯವಾಗಿ ಆಕೆ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಗೆ ಹೋಗುತ್ತಾರೆ. ಅಲ್ಲಿಯೂ ಕೂಡ ತಮ್ಮ ಠಾಣೆಯ ವ್ಯಾಪ್ತಿಗೆ ಆ ಟೋಲ್ ಪ್ಲಾಜಾ ಬರುವುದಿಲ್ಲ ಎಂದೇ ಹೇಳುತ್ತಾರೆ. ಕೊನೆಗೆ ಹಾಗೂ ಹೀಗೂ ಬೆಳಗಿನ ಜಾವ 3:10ಕ್ಕೆ ದೂರು ಸ್ವೀಕಾರವಾಗುತ್ತದೆ. ಅಂದರೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಬರೋಬ್ಬರಿ ನಾಲ್ಕೂವರೆ ಗಂಟೆಗಳ ಬಳಿ ದೂರು ರಿಜಿಸ್ಟರ್ ಆಗುತ್ತದೆ.

ದೂರು ಸಲ್ಲಿಕೆಯಾದ ಬಳಿಕ ಇಬ್ಬರು ಕಾನ್ಸ್​ಟೆಬಲ್​ಗಳು ಪಶುವೈದ್ಯೆಗಾಗಿ ಹುಡುಕಲು ಬರುತ್ತಾರೆ. ಎರಡು ಗಂಟೆ ನಂತರ, ಅಂದರೆ ಮುಂಜಾವು 5ಗಂಟೆಗೆ ಶಾದ್​ನಗರದ ಅಂಡರ್​ಪಾಸ್​ನಲ್ಲಿ ಹೊತ್ತಿ ಉರಿಯುತ್ತಿದ್ದ ಆಕೆಯ ಶವ ಪತ್ತೆಯಾಗುತ್ತದೆ.

ಈ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬಲ್ಲರೇ?

ಇಲ್ಲಿ ಬಹಳ ಗಮನಿಸಬೇಕಾದ ಅಂಶವೆಂದರೆ ಪಶುವೈದ್ಯೆಯ ಸೋದರಿ ರಾತ್ರಿ ಸುಮಾರು 9:40ಕ್ಕೆಯೇ ಆರ್​ಜಿಐಎ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿರುತ್ತಾರೆ. ಆಗಲೇ ಆ ಪೊಲೀಸ್ ಠಾಣೆಯವರು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದಿದ್ದರೆ ಪ್ರಾಯಶಃ ಪಶುವೈದ್ಯೆಯನ್ನು ಅತ್ಯಾಚಾರದಿಂದಲ್ಲವಾದರೂ ಜೀವಂತವಾಗಿಯಾದರೂ ಉಳಿಸಿಕೊಳ್ಳಬಹುದಿತ್ತು. ಟೋಲ್ ಪ್ಲಾಜಾ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಆ ಠಾಣೆಯವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದು ಕರ್ತವ್ಯಲೋಪವಲ್ಲದೇ ಮತ್ತೇನು ಎಂಬ ಪ್ರಶ್ನೆ ಬರುತ್ತದೆ. ತಮ್ಮ ವ್ಯಾಪ್ತಿಗೆ ಬರದ ಪ್ರದೇಶದ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುವುದು ನಿಯಮಕ್ಕೆ ವಿರುದ್ಧ ಎಂದೇ ಇಟ್ಟುಕೊಳ್ಳೋಣ. ದೂರು ಬಂದ ಕೂಡಲೇ ಅದನ್ನು ಸ್ವೀಕರಿಸಿ ತತ್​ಕ್ಷಣವೇ ಶಂಶಾಬಾದ್ ಗ್ರಾಮೀಣ ಠಾಣೆಯನ್ನು ಅಲರ್ಟ್ ಮಾಡಬಹುದಿತ್ತು. ಹಾಗೆ ಯಾಕೆ ಮಾಡಲಿಲ್ಲ? ಅಪರಾಧ ನಡೆಯುತ್ತಿರುವ ಒಂದು ಘಟನೆ ವಿಚಾರದಲ್ಲಿ ಪೊಲೀಸರು ಇಷ್ಟೊಂದು ಉದಾಸೀನ ತೋರುವುದು ತರವೇ?

ಹಾಗೆಯೇ, ಶಂಶಾಬಾದ್ ಟೋಲ್ ಪ್ಲಾಜಾ ಇರುವುದು ರಾಷ್ಟ್ರೀಯ ಹೆದ್ದಾರಿಯಲ್ಲೇ. ಟ್ರಕ್​ಗಳು ಹೆಚ್ಚಾಗಿ ನಿಲ್ಲುವ ಮತ್ತು ಸಂಚರಿಸುವ ಪ್ರದೇಶ. ಇಲ್ಲಿ ಪೊಲೀಸರನ್ನು ಬೀಟ್​ಗೆ ಕಳುಹಿಸುವುದಿಲ್ಲವಾ? ಪೊಲೀಸ್ ಪ್ಯಾಟ್ರೋಲ್ ವಾಹನ ಎಲ್ಲಿ ಹೋಗಿತ್ತು? ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬಲ್ಲರಾ? ಪೊಲೀಸರು ಜಾಗೃತರಾಗಿದಿದ್ದರೆ ಪಶುವೈದ್ಯೆ ಜೀವಂತವಾಗಿಯಾದರೂ ಇರುತ್ತಿದ್ದರು ಅಲ್ಲವಾ?

(ಕೃಪೆ: ಫಸ್ಟ್ ಪೋಸ್ಟ್)

First published: December 6, 2019, 7:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading