ರಾಂಚಿ (ಮೇ. 28): ಜಾರ್ಖಂಡ್‌ನಲ್ಲಿ ಹೊಸದಾಗಿ ನಿರ್ಮಿಸಿದ್ದ ಸೇತುವೆಯೊಂದು ಕುಸಿದಿದೆ. ಯಾಸ್ ಚಂಡಮಾರುತದ ಅಬ್ಬರದ ಹಿನ್ನಲೆ ಈ ದುರ್ಘಟನೆ ನಡೆದಿತ್ತು ಎನ್ನಲಾಗಿತ್ತು. ಆದರೆ ಇದಕ್ಕೆ ಕಾರಣ ಅಕ್ರಮ ಗಣಿಗಾರಿಕೆ ಎಂಬುದು ಬಯಲಾಗಿದೆ. ರಾಜ್ಯ ರಾಜಧಾನಿ ರಾಂಚಿಯಿಂದ ಕೇವಲ 70 ಕಿಮೀ ದೂರದ ಹೊಸ ಸೇತುವೆ ಕುಸಿದಿದೆ. ಈ ಸೇತುವೆ ಕುಸಿತಕ್ಕೆ ವರ್ಷಗಳ ಕಾಲ ನಡೆದ ಅಕ್ರಮ ಗಣಿಗಾರಿಕೆ ಕಾರಣ ಎಂಬುದು ಬಯಲಾಗಿದೆ. ಗಣಿಗಾರಿಕೆಯಿಂದ ಸೇತುವೆಯ ಪಿಲ್ಲರ್ ಕುಸಿದಿದ್ದರೆ, ಪಕ್ಕದಲ್ಲಿನ ಇತರ ಎರಡು ಸ್ತಂಭಗಳು ಸಹ ಕುಸಿಯುವ ಭೀತಿಯಲ್ಲಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೇತುವೆಗೆ ತಕ್ಷಣದ ದುರಸ್ತಿ ಅಗತ್ಯವಿದೆ. ಇಲ್ಲದಿದ್ದರೆ ಸಂಪೂರ್ಣ ಸೇತುವೆ ಕುಸಿಯಬಹುದು ಎಂದು ಸ್ಥಳೀಯ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.
ಯಾಸ್ ಚಂಡಮಾರುತದಿಂದಾದ ಗಾಳಿ, ಮಳೆಯಿಂದಾಗಿ ಜಾರ್ಖಂಡ್ ರಾಜಧಾನಿ ತಮರ್ ಪ್ರದೇಶದಲ್ಲಿದ್ದ ಈ ದುರ್ಬಲಗೊಂಡಿದ್ದ ಬ್ರಿಡ್ಜ್ ಕುಸಿದುಬಿದ್ದಿದೆ ಎನ್ನಲಾಗಿತ್ತು. ಆದರೆ ರಾಜ್ಯದಲ್ಲಿಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಇದು ಯಾವುದೇ ಸಮಯದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಈ ಪ್ರದೇಶದ ಜನರು ಹೇಳಿಕೊಳ್ಳುತ್ತಾರೆ. ಈ ಸೇತುವೆ ಬುಂಡುವನ್ನು ಹಾಗೂ ತಮರ್ ಪ್ರದೇಶವನ್ನು ಸಂಪರ್ಕಿಸುತ್ತದೆ.
ಇನ್ನೊಂದೆಡೆ, ಯಾಸ್ ಚಂಡಮಾರುತದಿಂದಾಗಿ ಉಂಟಾದ ನಿರಂತರ ಮಳೆಯಿಂದ ಮನೆ ಕುಸಿದು ರಾಂಚಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನೆರೆಯ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದ ಚಂಡಮಾರುತ ಜಾರ್ಖಂಡ್‌ನಲ್ಲೂ ಸಾಕಷ್ಟು ಹಾನಿ ಮಾಡಿದೆ
ಜಾರ್ಖಂಡ್‌ನ ಪೂರ್ವ ಸಿಗ್‌ಭೂಮ್‌ನಲ್ಲಿ ಅಪಾಯದ ಗುರುತಿಗಿಂತ ಮೇಲೆ ಹರಿಯುವ ನದಿಗಳ ಸಮೀಪವಿರುವ ತಗ್ಗು ಪ್ರದೇಶಗಳಿಂದ ಕನಿಷ್ಠ 5,000 ಜನರನ್ನು ಸ್ಥಳಾಂತರಿಸಲಾಯಿತು; ಇನ್ನೂ 15,000 ಜನರನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಯಿತು.
ಇದನ್ನು ಓದಿ: ಸೋಮವಾರದಿಂದ ದೆಹಲಿಯಲ್ಲಿ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ; ಸಿಎಂ ಅರವಿಂದ್ ಕೇಜ್ರಿವಾಲ್
"ರಾಂಚಿಯಲ್ಲಿ ಅತಿಯಾದ ಮಳೆಯಿಂದಾಗಿ ಇಬ್ಬರು ಮನೆ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ. ತಮರ್‌ನ ಪ್ರಮುಖ ಸೇತುವೆಯೇ ಕುಸಿದಿದೆ'' ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಅಮಿತಾಬ್ ಕೌಶಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇನ್ನು, "ಅನೇಕ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಮುಳುಗಿವೆ, ಮತ್ತು ನಾವು ಹೆಚ್ಚು ನೀರು ತುಂಬಿಕೊಂಡಿರುವ ಪ್ರದೇಶಗಳಿಂದ ಜನರನ್ನು ಬಲವಂತವಾಗಿ ಸ್ಥಳಾಂತರಿಸುತ್ತಿದ್ದೇವೆ. ತುರ್ತು ಪ್ರಕರಣಗಳು ಮತ್ತು ಅಗತ್ಯ ಸೇವೆಗಳಿಗೆ ಕೆಲವು ವಿಶ್ರಾಂತಿ ನೀಡುವ ಮೂಲಕ ನಾವು ಸಂಪೂರ್ಣ ಲಾಕ್ ಡೌನ್ ವಿಧಿಸಿದ್ದೇವೆ” ಎಂದು ಪೂರ್ವ ಸಿಂಗ್‌ಭೂಮ್ ಜಿಲ್ಲಾಧಿಕಾರಿ ಸೂರಜ್ ಕುಮಾರ್ ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತವಾಗಿ ಬದಲಾಗಿದ್ದು, ಗುಜರಾತ್, ಮಹಾರಾಷ್ಟ್ರದ, ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್ ಸೇರಿ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕೃತ ಎಚ್ಚರಿಕೆ ಹೊರಡಿಸಿದೆ. ಇದರ ಪ್ರಭಾವ ದಿಂದ ಗಾಳಿಯ ವೇಗ ಹೆಚ್ಚಾಗಿ ಮೇ 26ರವರೆಗೆ ಅಂಡಮಾನ್ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ