ಮೊಮ್ಮಗನಿಗೆ 40 ಕೋಟಿ ರೂ. ಆಸ್ತಿಯನ್ನು ಉಡುಗೊರೆ ನೀಡಿದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಪತ್ನಿ ಬಿಂದು

ಯೆಸ್​ ಬ್ಯಾಂಕ್​ನಲ್ಲಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಬ್ಯಾಂಕ್​ ಸಂಸ್ಥಾಪಕ ರಣಾ ಕಪೂರ್​ ಅವರನ್ನು ಕಳೆದ ಮಾರ್ಚ್​ನಲ್ಲಿ ಪೊಲೀಸರು ಬಂದಿಸಿದ್ದರು.

ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು.

ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು.

 • Share this:
  ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ರಾಣಾ ಕಪೂರ್ ಅವರು ನವದೆಹಲಿಯ ಜೋರ್ ಬಾಗ್‌ನಲ್ಲಿರುವ ತಮ್ಮ ಒಂಬತ್ತು ತಿಂಗಳ ಮೊಮ್ಮಗ ಆಶಿವ್ ಖನ್ನಾ ಅವರಿಗೆ 40 ಕೋಟಿ ರೂ ಮೌಲ್ಯದ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ನೋಂದಣಿ ದಾಖಲೆಗಳೊಂದಿಗೆ Zapkey.com ವರದಿ ಮಾಡಿದೆ. ಉಡುಗೊರೆ ಪತ್ರವನ್ನು ದಾಖಲೆಗಳ ಪ್ರಕಾರ ಜುಲೈ 31, 2021 ರಂದು ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ. ಆಶಿವ್ ಖನ್ನಾ ಅವರ ತಾಯಿ ರಾಧಾ ಕಪೂರ್ ಖನ್ನಾ ಅವರ ಮೂಲಕ ಸ್ವಾಭಾವಿಕ ಪೋಷಕರಾಗಿ ಉಡುಗೊರೆ ಪತ್ರವನ್ನು ಕಾರ್ಯಗತಗೊಳಿಸಲು ರೂ .36.90 ಲಕ್ಷ ಮುದ್ರಾಂಕ ಶುಲ್ಕವನ್ನು ಪಾವತಿಸಲಾಗಿದೆ ಎಂದು ದಾಖಲೆಗಳು ತಿಳಿಸಿವೆ.

  ಉಡುಗೊರೆಯಾಗಿ ನೀಡಲಾಗಿರುವ ಆಸ್ತಿಯು ಜೋರ್ ಬಾಗ್‌ನಲ್ಲಿ 369.40 ಚದರ ಮೀಟರ್ ವಿಸ್ತೀರ್ಣದಲ್ಲಿದೆ ಮತ್ತು 2BHK ವಾಸದ ಮನೆಯಾಗಿದ್ದು, ಒಂದು ಪಾರ್ಕಿಂಗ್ ಸ್ಲಾಟ್ ಹಾಗೂ ಇತರ ಸೌಲಭ್ಯಗಳ ಜೊತೆಗೆ ನೆಲ ಮಹಡಿಯಲ್ಲಿದೆ. ನೆಲ ಮಹಡಿ 161.5 ಚದರ ಮೀಟರ್ ಅಳತೆ ಹೊಂದಿದೆ ಎಂದು ದಾಖಲೆಗಳು ಹೇಳಿವೆ.

  ಬಿಂದು ರಾಣಾ ಕಪೂರ್ 2004 ರಲ್ಲಿ ತನ್ನ ತಂದೆಯ ಆಸ್ತಿಯಲ್ಲಿ ಈ ಪಾಲನ್ನು ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, ರಾಣಾ ಕಪೂರ್‌ ಪುತ್ರಿ ರಾಧಾ ಕಪೂರ್ ಖನ್ನಾ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

  ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ದಲ್ಲಾಳಿಗಳ ಪ್ರಕಾರ, ಆಸ್ತಿಯ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಇದರ ಪಕ್ಕದಲ್ಲೇ ಇರುವ 375 ಚದರ ಗಜಗಳಷ್ಟು ವಿಸ್ತೀರ್ಣದ  ಮತ್ತೊಂದು ಆಸ್ತಿಯನ್ನು ಜುಲೈ 24, 2021 ರಂದು 43.5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.

  ಇದನ್ನೂ ಓದಿ: Afghanistan Crisis: ಹುಡುಕಿದ ಪತ್ರಕರ್ತ ಸಿಕ್ಕಿಲ್ಲವೆಂದು ಆತನ ಸಂಬಂಧಿಗಳನ್ನು ಕೊಂದ ತಾಲಿಬಾನಿಗಳು!

  ಯೆಸ್​ ಬ್ಯಾಂಕ್​ನಲ್ಲಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಬ್ಯಾಂಕ್​ ಸಂಸ್ಥಾಪಕ ರಣಾ ಕಪೂರ್​ ಅವರನ್ನು ಕಳೆದ ಮಾರ್ಚ್​ನಲ್ಲಿ ಪೊಲೀಸರು ಬಂದಿಸಿದ್ದರು. ಆದರೆ, ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಇದರ ಅನ್ವಯ ತನಗೆ ಜಾಮೀನು ನೀಡಬೇಕು ಎಂದು ಕಳೆದ ಜುಲೈ 21 ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದಲ್ಲಿ ರಾಣಾ ಕಪೂರ್​ ಅರ್ಜಿ ಸಲ್ಲಿಸಿದ್ದರು. ಆದರೆ, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿತ್ತು.

  ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಆದ್ದರಿಂದ ಅವರನ್ನು ಜೈಲಿನಲ್ಲಿಡಲು ಯಾವುದೇ ಕಾರಣವಿಲ್ಲ. ಅಲ್ಲದೆ, ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಆರೋಪಿಗಳಿಂದ ತಿರುಚಲು ಸಾಧ್ಯವಿಲ್ಲ ಎಂದು ರಾಣಾ ಕಪೂರ್ ಅವರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ವಿಶೇಷ ನ್ಯಾಯಾಧೀಶ ಪಿ.ಪಿ. ರಾಜವೈದ್ಯ ಕಪೂರ್ ಮನವಿಯನ್ನು ತಿರಸ್ಕರಿಸಿದ್ದರು.

  ಇದನ್ನೂ ಓದಿ: ತಾಲಿಬಾನ್​ ಪ್ರಮುಖ ನಾಯಕ ಶೇರ್​ ಮೊಹಮ್ಮದ್​ಗೆ ಭಾರತದ ನಂಟು; ನೆನಪು ಹಂಚಿಕೊಂಡ ಮಿಲಿಟರಿ ಸ್ನೇಹಿತರು

  ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ರಾಣಾ ಕಪೂರ್ ಅವರನ್ನು ಮಾರ್ಚ್ ನಲ್ಲಿ ಮನಿ ಲಾಂಡರಿಂಗ್ ತಡೆ ಕಾಯಿದೆ (ಪಿಎಂಎಲ್ ಎ) ಅಡಿಯಲ್ಲಿ ಬಂಧಿಸಲಾಯಿತು. ಜಾರಿ ನಿರ್ದೇಶನಾಲಯವು (ಇಡಿ) ಪ್ರಾಥಮಿಕವಾಗಿ ಕಪೂರ್, ಆತನ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು 600 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಹಣ ದುರ್ಬಳಕೆ ಸಂಬಂಧ ತನಿಖೆ ನಡೆಸುತ್ತಿದೆ. ಆದರೆ, ತನಿಖೆ ನಡುವೆಯೇ ರಾಣಾ ಕಪೂರ್ ಪತ್ನಿ ಬಿಂದು ಕಪೂರ್ ದುಬಾರಿ ಮೌಲ್ಯದ ಆಸ್ತಿಯನ್ನು ಉಡುಗೊರೆಯನ್ನಾಗಿ ನೀಡಿರುವ ಸುದ್ದಿ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: