Ramya: ‘ರಾಹುಲ್ ಗಾಂಧಿ ತಪ್ಪು ಮಾಡಿದ್ರು ಅನ್ಸುತ್ತೆ’ - ನಾಯಕತ್ವ ಬದಲಾವಣೆ ಬಯಸಿದ ಹಿರಿಯ ಕಾಂಗ್ರೆಸ್ಸಿಗರ ಮೇಲೆ ರಮ್ಯಾ ದಾಳಿ

ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಆಗಬೇಕೆಂದು ಒತ್ತಾಯಿಸಿ ಪತ್ರ ಬರೆದವರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆಂದು ರಾಹುಲ್ ಗಾಂಧಿ ಮಾಡಿದ ಟೀಕೆಯನ್ನು ರಮ್ಯಾ ಸಮರ್ಥಿಸಿಕೊಂಡಿದ್ದಾರೆ.

ನಟಿ ರಮ್ಯಾ.

ನಟಿ ರಮ್ಯಾ.

 • News18
 • Last Updated :
 • Share this:
  ಬೆಂಗಳೂರು(ಆ. 24): ಎಐಸಿಸಿ ಅಧ್ಯಕ್ಷ ಸ್ಥಾನದ ಸುತ್ತ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ ಮತ್ತು ವಿದ್ಯಮಾನಗಳಿಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ ಹಿರಿಯ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ. ನಾಯಕತ್ವ ಬದಲಾವಣೆ ಆಗಬೇಕೆನ್ನುತ್ತಿರುವವರು ಬಿಜೆಪಿ ಏಜೆಂಟ್​ಗಳೆಂದು ಹೇಳಿದರೆನ್ನಲಾದ ರಾಹುಲ್ ಗಾಂಧಿ ಹೇಳಿಕೆಯನ್ನು ರಮ್ಯಾ ಸಮರ್ಥಿಸಿಕೊಂಡಿದ್ಧಾರೆ. ಜೊತೆಗೆ ಮಾಧ್ಯಮಗಳ ಮೇಲೂ ಎರಗಿದ್ದಾರೆ. “ರಾಹುಲ್ ಅವರು ತಪ್ಪು ಮಾಡಿದರೆಂದು ನನಗನಿಸುತ್ತದೆ. ಬಿಜೆಪಿ ಮತ್ತು ಮಾಧ್ಯಮದ ಜೊತೆ ಅವರು ಶಾಮೀಲಾಗಿದ್ದಾರೆಂದು ಹೇಳಬೇಕಿತ್ತು” ಎಂದು ರಮ್ಯಾ ಅಕಾ ದಿವ್ಯಾ ಸ್ಪಂದನ ಟ್ವೀಟ್ ಮಾಡಿದ್ದಾರೆ. ಕಪಿಲ್ ಸಿಬಲ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ರಮ್ಯಾ ಈ ಖಾರವಾದ ಪ್ರತ್ರಿಕ್ರಿಯೆ ನೀಡಿದ್ದಾರೆ.

  “ಇವರು ತಮ್ಮ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದೂ ಅಲ್ಲದೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿರುವಂತೆಯೇ ಕ್ಷಣ ಕ್ಷಣದ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತಲೇ ಇರುವುದು ಅದ್ಭುತ ವಿಚಾರ” ಎಂದು ರಮ್ಯಾ ವ್ಯಂಗ್ಯಾಸ್ತ್ರ ಬಿಟ್ಟಿದ್ದಾರೆ.

  ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಆಗಬೇಕು. ಹೆಚ್ಚು ಸಕ್ರಿಯರಾಗಿರುವವರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂದು ರಾಷ್ಟ್ರಮಟ್ಟದ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ಧಾರೆ. ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಶಶಿ ತರೂರ್ ಮೊದಲಾದವರು ನಾಯಕತ್ವ ಬದಲಾವಣೆಯ ಪರವಾಗಿದ್ದಾರೆ. ಈ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಶಾಮೀಲಾಗಿ ಈ ಪತ್ರ ಬರೆದಿದ್ದಾರೆ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ. ತಾವು ಬಿಜೆಪಿ ಜೊತೆ ಶಾಮೀಲಾಗಿರುವುದು ಸಾಬೀತು ಮಾಡಿದರೆ ಪಕ್ಷಕ್ಕೆ ರಾಜೀನಾಮೆ ಕೊಡುವೆ ಎಂದು ಆಜಾದ್ ಗುಡುಗಿದ್ದಾರೆ. ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಯಾವತ್ತೂ ಕೂಡ ಬಿಜೆಪಿಗೆ ಒಮ್ಮೆಯೂ ಬೆಂಬಲ ನೀಡಿದ್ದಿಲ್ಲ. ತಮ್ಮನ್ನು ಹೀಗೆ ಟೀಕಿಸುವುದು ಸರಿಯಲ್ಲ ಎಂದು ಸಿಬಲ್ ತಿರುಗೇಟು ನೀಡಿ ಟ್ವೀಟ್ ಮಾಡಿದ್ದರು. ಆ ಬಳಿಕ ರಾಹುಲ್ ಗಾಂಧಿ ತಾನು ಆ ರೀತಿ ಹೇಳಿಲ್ಲವೆಂದು ವೈಯಕ್ತಿಕವಾಗಿ ತನಗೆ ತಿಳಿಸಿದ್ದಾರೆ ಎಂದು ಹೇಳಿ ತಮ್ಮ ಹಿಂದಿನ ಟ್ವೀಟನ್ನು ಸಿಬಲ್ ಡಿಲೀಟ್ ಮಾಡಿದ್ದಾರೆ.

  ಇದನ್ನೂ ಓದಿ: ತಪ್ಪು ಮಾಹಿತಿಯಿಂದ ರಾಹುಲ್​ ವಿರುದ್ಧ ಸಿಬಲ್​ ಸಿಡಿಮಿಡಿ: ಬಹಿರಂಗ ಕ್ಷಮೆಯಾಚನೆ

  ಕರ್ನಾಟಕ ಬಹುತೇಕ ಕಾಂಗ್ರೆಸ್ ಮುಖಂಡರು ಗಾಂಧಿ ಕುಟುಂಬದ ಪರ ನಿಂತಿದ್ದು, ಅವರೇ ಪಕ್ಷದ ಚುಕ್ಕಾಣಿ ಹಿಡಿಯುವುದು ಸೂಕ್ತ ಎಂದಿದ್ದಾರೆ. ಖರ್ಗೆ, ಸಿದ್ದರಾಮಯ್ಯ ಆದಿಯಾಗಿ ರಾಜ್ಯದ ಎಲ್ಲಾ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷರಾಗುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  Published by:Vijayasarthy SN
  First published: