Farm Laws Repeal: ಸಂಸತ್ತಿನಲ್ಲಿ ಕೃಷಿ ಕಾನೂನು ಹಿಂಪಡೆದ ಬಳಿಕ ನಮ್ಮ ಹೋರಾಟ ಅಂತ್ಯ; ರಾಕೇಶ್​ ಟಿಕಾಯತ್​

ಸಂಸತ್ತಿನಲ್ಲಿ ಮಂಡಿಸಿರುವ ಈ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಕೊನೆಗೊಳಿಸುವುದಿಲ್ಲ.

ರಾಕೇಶ್ ಟಿಕಾಯತ್.

ರಾಕೇಶ್ ಟಿಕಾಯತ್.

 • Share this:
  ನವದೆಹಲಿ (ನ. 19): ದೇಶದ ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕಡೆಗೂ ಮೂರು ವಿವಾದಾತ್ಮಕ ಕಾನೂನನ್ನು (Farm Law) ಇಂದು ಹಿಂಪಡೆದಿದೆ. ಈ ಮಹತ್ವದ ನಿರ್ಧಾರ ಘೋಷಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM MOdi) ಅವರು, ಕೃಷಿ ಕಾನೂನುಗಳ ಮೂಲಕ ನಾವು ಏನು ಮಾಡಬೇಕೆಂದನ್ನು ಕೆಲವು ರೈತರಿಗೆ ಅರ್ಥವಾಗದಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು (Farm Laws Repeal) ನಿರ್ಧರಿಸಿದ್ದೇವೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಮೂರೂ ಮಸೂದೆಗಳನ್ನು ಹಿಂಪಡೆಯುತ್ತೇವೆ. ದೆಹಲಿಯ ಗಡಿಯಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟ (Farmers Protest) ಹಿಂಪಡೆಯಬೇಕು ಎಂದು ತಿಳಿಸಿದರು. ಪ್ರಧಾನ ಮಂತ್ರಿ ಅವರ ಈ ಘೋಷಣೆ ವ್ಯಕ್ತವಾಗುತ್ತಿದ್ದಂತೆ ದೇಶದ ರೈತರು ಸಂಭ್ರಮಿಸಿದ್ದಾರೆ. ಅಲ್ಲದೇ, ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದ ಹರಿಯಾಣ ಮತ್ತು ಪಂಜಾಬ್​ ರೈತರಲ್ಲಿ ಸಂಭ್ರ ದುಪ್ಪಟ್ಟಾಗಿದೆ. ಗುರುನಾನಕ್​ ಜಯಂತಿಯಂದು ಸಿಕ್ಕ ಪ್ರಜಾಪ್ರಭುತ್ವ, ಹೋರಾಟದ ಗೆಲುವು ಇದು ಎಂದು ವಿಪಕ್ಷಗಳು ರೈತರ ಹೋರಾಟಕ್ಕೆ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

  ಈಗಲೇ ಸ್ಥಳ ಬಿಟ್ಟು ಕದಲುವುದಿಲ್ಲ

  ಇನ್ನು ಈ ಘೋಷಣೆ ಹೊರಡಿಸಿದರೂ ಕೂಡ ನಾವು ಹೋರಾಟದ ಸ್ಥಳದಿಂದ ಈಗಲೇ ಹಿಂದಿರುವುದಿಲ್ಲ ಎಂದು ಹೋರಾಟದ ಪ್ರಮುಖ ಪಾತ್ರವಹಿಸಿದ್ದ ಭಾರತೀಯಾ ಕಿಸಾನ್​ ಯೂನಿಯನ್​ ನಾಯಕ ರಾಕೇಶ್​ ಟಿಕಾಯತ್​​ ಸ್ಪಷ್ಟ ಪಡಿಸಿದ್ದಾರೆ. ಸಂಸತ್ತಿನಲ್ಲಿ ಮಂಡಿಸಿರುವ ಈ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಕೊನೆಗೊಳಿಸುವುದಿಲ್ಲ. ಪ್ರಧಾನಿಗಳು ಘೋಷಿಸಿದಂತೆ ನ. 26ರೊಳಗೆ ಈ ವಿವಾದಾತ್ಮಕ ಕೃಷಿ ಕಾನೂನು ರದ್ದುಗೊಳಿಸಿದ ಬಳಿಕ ನಮ್ಮ ಹೋರಾಟ ಮುಗಿಯಲಿದೆ. ಆ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದರು

  ವರ್ಷಗಳಿಂದ ನಡೆದ ಹೋರಾಟ

  ಅನೇಕ ರೈತ ಸಂಘಟನೆಗಳು, ಸಾವಿರಾರು ರೈತರು ದೆಹಲಿಯ ಗಾಜಿಪುರ, ಟಿಕ್ರಿ ಮತ್ತು ಸಿಂಘುವಿಗಡಿಗಳಲ್ಲಿ ಕಳೆದೊಂದು ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಈ ವಿವಾದಿತ ಹೊಸ ಕಾನೂನುಗಳು ಕಾರ್ಪೊರೇಟ್‌ಗಳಿಗೆ ಲಾಭದಾಯಕವಾಗುತ್ತವೆ. ಹೊರತು ರೈತರಿಗೆ ಅಲ್ಲ. ನಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿ ಒಂದು ವರ್ಷವನ್ನು ಪೂರೈಸಿದೆ. ಸರ್ಕಾರವು ನವೆಂಬರ್ 26 ರೊಳಗೆ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಆಂದೋಲನವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

  ಇದನ್ನು ಓದಿ: ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್

  ಪ್ರಧಾನಿ ಘೋಷಣೆ ಹೊರಡಿಸುತ್ತಿದ್ದಂತೆ ಪ್ರತಿಭಟನಾ ನಿರತ ರೈತರು ತಕ್ಷಣ ಹಿಂದೆ ಸರಿಯುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ವಿಚಾರ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಸರಕಾರ ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

  ರೈತರಿಗೆ ಶುಭ ಕೋರಿದ ವಿಪಕ್ಷ ನಾಯಕರು

  ಕೃಷಿ ಕಾನೂನು ಹಿಂಪಡೆಯುವ ಪ್ರಧಾನಿ ಘೋಷಣೆಯ ಬಳಿಕ ಅನೇಕ ರೈತರು ಶುಭ ಕೋರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ದೇಶದ ರೈತರು ತಮ್ಮ ಸತ್ಯಾಗ್ರಹದಿಂದ ಅಹಂಕಾರವನ್ನು ಸೋಲಿಸಿದ್ದಾರೆ ಜೈ ಹಿಂದ್​ ಎಂದಿದ್ದಾರೆ.

  ಇದನ್ನು ಓದಿ: ಪ್ರಧಾನಿ ಮೋದಿ ಮಹತ್ವದ ಘೋಷಣೆ: ಮೂರು ಕೃಷಿ ಕಾಯ್ದೆಗಳು ರದ್ದು

  ಇನ್ನು ಕುರಿತು ಟ್ವೀಟ್​ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಯು ನಿಮ್ಮನ್ನು ನಡೆಸಿಕೊಂಡ ಕ್ರೌರ್ಯಕ್ಕೆ ಬೆಚ್ಚಿ ಬೀಳದೆ ಅವಿರತ ಹೋರಾಟ ನಡೆಸಿದ ಪ್ರತಿಯೊಬ್ಬ ರೈತನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ಗೆಲುವು. ಈ ಹೋರಾಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ನನ್ನ ಸಂತಾಪಗಳು ಎಂದಿದ್ದಾರೆ

  ಪಂಜಾಬ್‌ನಲ್ಲಿ ಮೂರು ತಿಂಗಳಲ್ಲಿ ಚುನಾವಣೆಗಳು ನಡೆಯಲಿರುವ ಹಿನ್ನಲೆ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪಿ ಚಿದಂಬರಂ ತಿಳಿಸಿದ್ದಾರೆ
  Published by:Seema R
  First published: