ನಿಮ್ಮನ್ನು ತುಳಿದಷ್ಟೂ ಪುಟಿದೇಳುವ ಅವಕಾಶ ನಿಮ್ಮ ಕೈಯಲ್ಲೇ ಇದೆ: ಕ್ರೀಡಾ ಸಚಿವ ರಾಜ್ಯವರ್ಧನ್

ನನ್ನ ಜೀವನದಲ್ಲಿ ನನ್ನನ್ನು ತುಳಿಯಲು ಯತ್ನಿಸಿದ ಜನರಿಗೆ ನಾನು ಋಣಿಯಾಗಿದ್ದೇನೆ. ಅವರು ನನ್ನನ್ನು ತುಳಿಯದೇ  ಹೋಗಿದ್ದರೆ ನಾನು ಈ ಹಂತಕ್ಕೆ ಬರುತ್ತಿರಲಿಲ್ಲ ಎಂದು ರಾಜ್ಯವರ್ಧನ್ ಹೇಳುತ್ತಾರೆ.

Vijayasarthy SN
Updated:October 27, 2018, 7:13 PM IST
ನಿಮ್ಮನ್ನು ತುಳಿದಷ್ಟೂ ಪುಟಿದೇಳುವ ಅವಕಾಶ ನಿಮ್ಮ ಕೈಯಲ್ಲೇ ಇದೆ: ಕ್ರೀಡಾ ಸಚಿವ ರಾಜ್ಯವರ್ಧನ್
ರಾಜ್ಯವರ್ಧನ್ ಸಿಂಗ್ ರಾಥೋಡ್
  • Share this:
- ನ್ಯೂಸ್18 ಕನ್ನಡ

ನವದೆಹಲಿ(ಅ. 27): ಕೇಂದ್ರ ಸರಕಾರದ ಸಂಪುಟದಲ್ಲಿ ಎಲ್ಲರ ಗಮನ ಸೆಳೆಯುವ ಸಚಿವರ ಪೈಕಿ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ಒಬ್ಬರು. ದೇಶದ ಕ್ರೀಡಾ ವ್ಯವಸ್ಥೆಗೆ ಒಂದು ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ರಾಜ್ಯವರ್ಧನ್ ಮಹತ್ವದ ಹೆಜ್ಜೆಗಳನ್ನ ಹಾಕಿದ್ದಾರೆ. ಒಲಿಂಪಿಕ್ಸ್​ನಲ್ಲಿ ದೇಶಕ್ಕೆ ಹೆಚ್ಚೆಚ್ಚು ಪದಕ ಗೆಲ್ಲಲು ಸಾಧ್ಯವಾಗುವಂಥ ಯೋಜನೆಗಳನ್ನ ಅವರು ಪ್ರಾರಂಭಿಸಿದ್ದಾರೆ. 2004ರ ಒಲಿಂಪಿಕ್ಸ್​ನ ಶೂಟಿಂಗ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದ ರಾಜ್ಯವರ್ಧನ್ ಅವರು ಈಗ ಇಡೀ ಕ್ರೀಡಾ ವ್ಯವಸ್ಥೆಯ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿದ್ದಾರೆ. ಒಬ್ಬ ಕ್ರೀಡಾಪಟುವಾಗಿ ಈಗ ಕ್ರೀಡಾ ಸಚಿವರಾಗುವ ಹಂತಕ್ಕೆ ಅವರು ಬೆಳೆದಿರುವುದು ಸುಮ್ಮನೆ ಅಲ್ಲ. ಕಾರ್ಯಕ್ಷಮತೆ, ದಿಟ್ಟತನಕ್ಕೆ ಹೆಸರಾದ ರಾಜ್ಯವರ್ಧನ್ ಅವರ ಈ ಯಶಸ್ಸಿಗೆ ಏನು ಕಾರಣ?

ನೀವು ಯಶಸ್ಸು ಪ್ರಾಪ್ತಗೊಳಿಸಲು ಮುಖ್ಯವಾಗಿ ಬೇಕಿರುವುದು ನಿಮ್ಮಲ್ಲಿರುವ ಹಸಿವು. ಸಾಧಿಸಬೇಕೆನ್ನುವ ತುಡಿತ, ಹಸಿವು ನಿಮ್ಮಲ್ಲಿರಬೇಕು. ಈ ಹಸಿವು ಎಷ್ಟಿದೆ ಎಂಬುದರ ಮೇಲೆ ನಿಮ್ಮ ಯಶಸ್ಸು ಅಡಗಿದೆ ಎಂದು ರಾಜ್ಯವರ್ಧನ್ ಸಿಂಗ್ ಯುವ ಸಮುದಾಯಕ್ಕೆ ಯಶಸ್ಸಿನ ಮಂತ್ರ ಕಲಿಸಿಕೊಡುತ್ತಾರೆ.

ನ್ಯೂಟನ್ ಚಲನೆಯ 3ನೇ ನಿಯಮ:

ಕೇಂದ್ರ ಕ್ರೀಡಾ ಸಚಿವರು ತಮ್ಮ ಯಶಸ್ಸಿಗೆ ನ್ಯೂಟನ್​ ಚಲನೆಯ 3ನೇ ನಿಯಮವನ್ನು ತಾಳೆ ಹಾಕುತ್ತಾರೆ. “ನಾವು ಮುನ್ನಡೆಯಲು ನಮಗೆ ಒಂದು ಶಕ್ತಿ, ಒಂದು ಇಂಧನದ ಅಗತ್ಯವಿದೆ. ಆ ಪ್ರೇರಕ ಶಕ್ತಿ ಯಾವುದು ಎಂದು ನೀವು ಗೊತ್ತು ಮಾಡಬೇಕು. ನನಗೆ ಭೌತಶಾಸ್ತ್ರದಲ್ಲಿರುವ ನ್ಯೂಟನ್ 3ನೇ ನಿಯಮ ಮಾತ್ರ ಮನದಲ್ಲಿದೆ. ನನ್ನನ್ನು ನೀವು ಅದುಮಿದಷ್ಟೂ ನಾನು ಅಷ್ಟೇ ತೀವ್ರತೆಯಲ್ಲಿ ಪುಟಿದೇಳುತ್ತೇನೆ,” ಎಂದು ಮಾಜಿ ಶೂಟಿಂಗ್ ಕ್ರೀಡಾಪಟುವೂ ಆಗಿರುವ ರಾಜ್ಯವರ್ಧನ್ ಹೇಳುತ್ತಾರೆ.

ಇದನ್ನೂ ಓದಿ: ಧೂಮಪಾನಿಗಳೇ ಎಚ್ಚರ..! ಇ-ಸಿಗರೇಟ್ ಕೂಡ ಹಾನಿಕರ

ಚಲನೆ ಸಿದ್ಧಾಂತದ ವಿಚಾರವಾಗಿ ನ್ಯೂಟನ್ ತಿಳಿಸಿದ ಮೂರು ನಿಯಮಗಳಲ್ಲಿ ಮೂರನೆಯದ್ದು ಬಹಳ ಖ್ಯಾತವಾಗಿದೆ. ಈ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಗೆ ಅದಕ್ಕೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ("Every action has equal and opposite reaction").“ನನ್ನ ಜೀವನದಲ್ಲಿ ನನ್ನನ್ನು ತುಳಿಯಲು ಯತ್ನಿಸಿದ ಜನರಿಗೆ ನಾನು ಋಣಿಯಾಗಿದ್ದೇನೆ. ಅವರು ನನ್ನನ್ನು ತುಳಿಯದೇ  ಹೋಗಿದ್ದರೆ, ನನ್ನನ್ನು ಅಣಕಿಸದೇ ಹೋಗಿದ್ದರೆ ನಾನು ಈ ಹಂತಕ್ಕೆ ಬರುತ್ತಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ತುಂಬಾ ನೋವಾಗಿತ್ತು. ನಾನು ಪ್ರಮಾಣ ಮಾಡಿ ಹೇಳುತ್ತೇನೆ, ಆಗೇನಾದರೂ ಅವರು ನನ್ನನ್ನು ತುಳಿಯದೇ ಹೋಗಿದ್ದರೆ ಯಾವುದೇ ಸವಾಲು ಇಲ್ಲವೆಂದು ನಿರುಮ್ಮಳನಾಗಿ ಎಲ್ಲೋ ಒಂದೆಡೆ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದೆ,” ಎಂದು ರಾಜ್ಯವರ್ಧನ್ ವಿವರ ನೀಡುತ್ತಾರೆ.

ಸವಾಲುಗಳೇ ಶಕ್ತಿ: 

ಆತ್ಮಗೌರವಕ್ಕೆ ಧಕ್ಕೆ ಬಂದಾಗಲೆಲ್ಲಾ ನಿಮ್ಮೊಳಗಿನ ಚಾಂಪಿಯನ್ ನಿಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎನ್ನುವ ಅವರು, ಸವಾಲುಗಳಿಗೆ ಹೆದರಬಾರದೆಂದು ಕಿವಿಮಾತು ಹೇಳುತ್ತಾರೆ.

“ಸವಾಲುಗಳಿಗೆ ಅಂತ್ಯವೇ ಇಲ್ಲ. ಯಾವುದೇ ಸಂದರ್ಭದಲ್ಲಾದರೂ ಸರಿ ನಿಮಗೆ ಸವಾಲು ಇದೆ ಎಂದು ಅನಿಸಿದರೆ ನೀವು ಬೆಳೆಯುತ್ತಿದ್ದೀರಿ ಎಂದರ್ಥ. ನಿಮಗೆ ಸವಾಲು ಬಂದಾಗೆಲ್ಲಾ ನಾನು ಮುನ್ನಡೆಯುತ್ತಿದ್ದೇನೆ ಎಂದು ಭಾವಿಸಿರಿ,” ಎಂದು ಕೇಂದ್ರ ಸಚಿವರು ಮತ್ತೊಂದು ಬುದ್ಧಿಮಾತು ತಿಳಿಸುತ್ತಾರೆ.

ಇದನ್ನೂ ನೋಡಿ: ಬಿಸಿಲ ತಾಪ: ದಾಹ ತಣಿಸುವ ಎಳನೀರಿನಲ್ಲಿದೆ ಹಲವು ಸಮಸ್ಯೆಗಳಿಗೆ ಪರಿಹಾರ

“ಯಾವಾಗಲೂ ಸಕರಾತ್ಮಕ ಮನೋಭಾವದಲ್ಲಿರುವುದನ್ನು ರೂಢಿಸಿಕೊಳ್ಳಿ. ನಿಮ್ಮ ಸುತ್ತ ಋಣಾತ್ಮಕತೆ ಇದ್ದೇ ಇರುತ್ತದೆ. ಈ ನೆಗಟಿವಿಟಿಯಿಂದಾಗಿ ಜನರು ಪ್ರಗತಿ ಹೊಂದುವುದಿಲ್ಲ. ಆದರೆ ನೀವು ಸಕರಾತ್ಮಕ ಧೋರಣೆ ಹೊಂದಿದರೆ ಜೀವನದಲ್ಲಿ ಮುನ್ನಡೆಯಬಹುದು,” ಎಂದು ರಾಜ್ಯವರ್ಧನ್ ಸಿಂಗ್ ರಾಥೋಡ್ ದೇಶದ ಯುವಜನತೆಗೆ ಅಮೂಲ್ಯ ಸಲಹೆಗಳನ್ನು ಕೊಡುತ್ತಾರೆ.
First published:October 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ