HOME » NEWS » National-international » RAJYA SABHA ELECTIONS TODAY IN 7 STATES FOR 18 SEATS SNVS

Rajya Sabha Elections: ಇಂದು ಏಳು ರಾಜ್ಯಗಳಲ್ಲಿ 18 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಗುಜರಾತ್, ಮ.ಪ್ರ., ರಾಜಸ್ಥಾನದಲ್ಲಿ ಪೈಪೋಟಿ

ಈ ವರ್ಷ ಒಟ್ಟು 55 ರಾಜ್ಯಸಭಾ ಸ್ಥಾನಗಳು ಖಾಲಿ ಬಿದ್ದಿವೆ. ಅದರಲ್ಲಿ 37 ಸ್ಥಾನಗಳು ಚುನಾವಣೆಯಿಲ್ಲದೆ ಅವಿರೋಧವಾಗಿ ಆಯ್ಕೆ ಆಗಿವೆ. ಉಳಿದ 18 ಸ್ಥಾನಗಳಿಗೆ ಇವತ್ತು ಚುನಾವಣೆ ನಡೆಯುತ್ತಿರುವುದು.

Vijayasarthy SN | news18
Updated:June 19, 2020, 12:39 PM IST
Rajya Sabha Elections: ಇಂದು ಏಳು ರಾಜ್ಯಗಳಲ್ಲಿ 18 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಗುಜರಾತ್, ಮ.ಪ್ರ., ರಾಜಸ್ಥಾನದಲ್ಲಿ ಪೈಪೋಟಿ
ಇವಿಎಂ ಮೆಷೀನ್
  • News18
  • Last Updated: June 19, 2020, 12:39 PM IST
  • Share this:
ಬೆಂಗಳೂರು(ಜೂನ್ 19): ಕೊರೋನಾ ವೈರಸ್ ಪಿಡುಗು ವಕ್ಕರಿಸಿದ ಬಳಿಕ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಇವತ್ತು ಏಳು ರಾಜ್ಯಗಳಲ್ಲಿ 18 ರಾಜ್ಯಸಭಾ ಸ್ಥಾನಗಳಿಗೆ ಸ್ಪರ್ಧೆ ಇದೆ. ಗುಜರಾತ್ ಮತ್ತು ಆಂಧ್ರ ಪ್ರದೇಶದಲ್ಲಿ ತಲಾ ನಾಲ್ಕು ಸ್ಥಾನಗಳು; ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ತಲಾ ಮೂರು ಸ್ಥಾನಗಳು, ಜಾರ್ಖಂಡ್​ನಲ್ಲಿ ಎರಡು ಹಾಗೂ ಮಣಿಪುರ, ಮಿಜೋರಾಂನಲ್ಲಿ ಮತ್ತು ಮೇಘಾಲಯದಲ್ಲಿ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಆಯಾ ರಾಜ್ಯಗಳ ವಿಧಾನಸಭೆಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಸಂಜೆ 5ಗಂಟೆಗೆ ಮತ ಎಣಿಕೆ ಆಗಿ ತತ್​ಕ್ಷಣವೇ ವಿಜೇತರ ಘೋಷಣೆಯಾಗಲಿದೆ.

ಗುಜರಾತ್, ಮಧ್ಯ ಪ್ರದೇಶ ಮತ್ತು ರಾಜಸ್ಥಾನದ 10 ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನಿಕಟ ಪೈಪೋಟಿ ನಿರೀಕ್ಷಿಸಲಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯ ಸವಾಲಾಗಿದೆ. ಹಾಗೆಯೇ, ರಾಜ್ಯಸಭೆಯಲ್ಲಿ ಬಲ ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಆಡಳಿತ ಪಕ್ಷ ಮತ್ತು ವಿಪಕ್ಷಗಳಿಗೆ ಇದು ಮಹತ್ವದ ಚುನಾವಣೆಯಾಗಿದೆ.

ಮಧ್ಯ ಪ್ರದೇಶದ ಮೂರು ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 2 ಅಭ್ಯರ್ಥಿಗಳನ್ನ ನಿಲ್ಲಿಸಿವೆ. ಈಗಿರುವ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ 2 ಸ್ಥಾನ ಗೆಲ್ಲುವ ಅವಕಾಶ ಇದೆ. ಕಾಂಗ್ರೆಸ್ ಒಂದೇ ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು. ಬಿಜೆಪಿಯಿಂದ ಜ್ಯೋತಿರಾದಿತ್ಯ ಸಿಂಧ್ಯ ಮತ್ತು ಕಾಂಗ್ರೆಸ್​ನಿಂದ ದಿಗ್ವಿಜಯ ಸಿಂಗ್ ಅವರು ಪ್ರತಿಷ್ಠಿತ ಅಭ್ಯರ್ಥಿಗಳೆನಿಸಿದ್ದಾರೆ.

ಗುಜರಾತ್​ನ ನಾಲ್ಕು ಸ್ಥಾನಗಳಿಗೆ ಬಿಜೆಪಿಯಿಂದ ಮೂವರು ಮತ್ತು ಕಾಂಗ್ರೆಸ್​ನಿಂದ ಇಬ್ಬರು ಕಣಕ್ಕಿಳಿದಿದ್ಧಾರೆ. ಕಾಂಗ್ರೆಸ್​ನ ಒಳಬೇಗುದಿಯನ್ನ ಉಪಯೋಗಿಸಿಕೊಂಡು ಬಿಜೆಪಿಯು ಮೂರು ಸ್ಥಾನಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ. ಆಡಳಿತಾರೂಢ ಪಕ್ಷವಾಗಿರುವುದೂ ಬಿಜೆಪಿಗೆ ಇಲ್ಲಿ ಲಾಭ ತಂದುಕೊಡಬಹುದು.

ರಾಜಸ್ಥಾನದಲ್ಲಿ ರಾಜಕೀಯ ಸಂಚಲನವೇ ನಡೆಯುತ್ತಿದೆ. ಮಧ್ಯ ಪ್ರದೇಶ ಮಾದರಿಯಲ್ಲಿ ಬಿಜೆಪಿ ರಾಜಸ್ಥಾನದಲ್ಲಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನೇರ ಆರೋಪ ಮಾಡುತ್ತಿದೆ. ಇಲ್ಲಿ ಖಾಲಿ ಇರುವ 3 ಸ್ಥಾನಗಳಿಗೆ ಎರಡೂ ಪಕ್ಷಗಳು ತಲಾ ಇಬ್ಬರು ಅಭ್ಯರ್ಥಿಗಳನ್ನ ನಿಲ್ಲಿಸಿವೆ. ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಅಲ್ಲಿ ಒಬ್ಬ ಕಾಂಗ್ರೆಸ್ ಅಭ್ಯರ್ಥಿಯಾಗಿದ್ಧಾರೆ. ಆದರೆ, ರಾಜಸ್ಥಾನದ ಕಾಂಗ್ರೆಸ್​ನೊಳಗೆ ಹೊಗೆಯಾಡುತ್ತಿರುವ ಅಸಮಾಧಾನವನ್ನು ಬಳಸಿಕೊಂಡು ಬಿಜೆಪಿ 2 ಸ್ಥಾನಗಳನ್ನ ಗೆಲ್ಲುವ ಎಣಿಕೆಯಲ್ಲಿದೆ.

ಜಾರ್ಖಂಡ್​ನಲ್ಲಿ ಎರಡು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳು ಸೆಣಸುತ್ತಿದ್ದಾರೆ. ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಕೂಟದಿಂದ ಇಬ್ಬರು ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಶಿಬು ಸೊರೇನ್ ಗೆಲ್ಲುವುದು ಖಚಿತವಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಜಾರ್ಖಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ದೀಪಕ್ ಪ್ರಕಾಶ್ ಮತ್ತೊಂದು ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ.ಮಣಿಪುರದಲ್ಲಿ ಒಂದು ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸೆಣಸುತ್ತಿವೆ. ನಿನ್ನೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಮಿತ್ರರನ್ನು ಮತ್ತು ಸ್ವಪಕ್ಷೀಯರನ್ನು ಕಳೆದುಕೊಂಡು ಅಲ್ಪಸಂಖ್ಯಾತವಾಗಿದೆ. ಈ ಹಿನ್ನೆಲೆಯಲ್ಲಿ ಇವತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚು.

ಮೇಘಾಲಯದ ಒಂದು ಸ್ಥಾನಕ್ಕೆ ಎನ್​ಪಿಪಿ ಮತ್ತು ಕಾಂಗ್ರೆಸ್ ಪೈಪೋಟಿ ನಡೆಸಿವೆ. ಇಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇಲ್ಲ.

ಇದನ್ನೂ ಓದಿ: ಟಿಬೆಟ್​ಗೆ ಆದ ಗತಿ ನಿಮಗೂ ಆಗುತ್ತೆ, ಹುಷಾರ್..! ಚೀನಾ ಬಗ್ಗೆ ಭಾರತವನ್ನು ಎಚ್ಚರಿಸಿದ ಟಿಬೆಟಿಯನ್ ಮುಖಂಡ

ಕೊರೋನಾ ವೈರಸ್ ಬಿಕ್ಕಟ್ಟು ಶುರುವಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಎಂಬುದು ವಿಶೇಷ. ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲಿ ಪರಿಷತ್ ಚುನಾವಣೆ ನಡೆದಿತ್ತಾದರೂ ಇಡೀ ಪ್ರಕ್ರಿಯೆಯಲ್ಲಿ ಯಾರೂ ಪ್ರತ್ಯಕ್ಷವಾಗಿ ವೋಟಿಂಗ್ ನಡೆಸಿರಲಿಲ್ಲ.

ಈ ವರ್ಷ ಒಟ್ಟು 55 ರಾಜ್ಯಸಭಾ ಸ್ಥಾನಗಳು ಖಾಲಿ ಬಿದ್ದಿವೆ. ಅದರಲ್ಲಿ 37 ಸ್ಥಾನಗಳು ಚುನಾವಣೆಯಿಲ್ಲದೆ ಅವಿರೋಧವಾಗಿ ಆಯ್ಕೆ ಆಗಿವೆ. ಉಳಿದ 18 ಸ್ಥಾನಗಳಿಗೆ ಇವತ್ತು ಚುನಾವಣೆ ನಡೆಯುತ್ತಿರುವುದು.

ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಇವತ್ತೇ ಚುನಾವಣೆ ನಡೆಯಬೇಕಿತ್ತು. ಆದರೆ, ನಾಲ್ವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಬಿಜೆಪಿಯಿಂದ ಅಶೋಕ್ ಗಸ್ತಿ, ಈರಣ್ಣ ಕಡಾಡಿ, ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್​ನಿಂದ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭೆ ಪ್ರವೇಶ ಗಿಟ್ಟಿಸಿದ್ಧಾರೆ. ಅರುಣಾಚಲ ಪ್ರದೇಶದಲ್ಲೂ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
First published: June 19, 2020, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories