ಸದಸ್ಯರ ಗಲಾಟೆಗೆ ವೆಂಕಯ್ಯ ನಾಯ್ಡು ಕಿಡಿ; ಲೋಕಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ದೇವಸ್ಥಾನದ ಗರ್ಭಗುಡಿಗೆ ಭಕ್ತರು ಪ್ರವೇಶಿಸುವುದಿಲ್ಲ. ಹಾಗೆಯೇ ಈ ಮನೆಯಲ್ಲೂ ಒಂದು ನಿಯಮ ಇದೆ. ಸದನದ ಬಾವಿಗೆ ಇಳಿಯುವುದೇ ತಪ್ಪು. ಕೆಲವರು ಟೇಬಲ್ ಮೇಲೆ ಹತ್ತಿ ಗಲಾಟೆ ಮಾಡಿದರು. ಇದು ನಾಚಿಕೆಗೇಡು ಎಂದು ರಾಜ್ಯಸಭಾ ಛೇರ್ಮನ್ ವೆಂಕಯ್ಯ ನಾಯ್ಡು ಸಿಡುಕಿದ್ದಾರೆ.

ಲೋಕಸಭೆ

ಲೋಕಸಭೆ

  • Share this:
ನವದೆಹಲಿ, ಆ. 11: ನೂತನ ಕೃಷಿ ಕಾಯ್ದೆಗಳು, ಪೆಗಾಸಸ್ ಸ್ಪೈವೇರ್ ಪ್ರಕರಣವನ್ನ ಮುಂದಿಟ್ಟುಕೊಂಡು ವಿಪಕ್ಷಗಳ ಸದಸ್ಯರು ತಮ್ಮ ಪ್ರತಿಭಟನೆಗಳನ್ನ ಮುಂದುವರಿಸಿದ್ದಾರೆ. ನಿನ್ನೆ ಸದನದಲ್ಲಿ ದೊಡ್ಡ ಗದ್ದಲವೇ ನಡೆಯಿತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸಭಾ ಛೇರ್ಮನ್ ವೆಂಕಯ್ಯ ನಾಯ್ಡು ಅವರು ನಿನ್ನೆ ದಾಂದಲೆ ನಡೆಸಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇಂದು ರಾಜ್ಯಸಭೆಯ ಕಲಾಪ ಅರಂಭಿಸಿದ ವೆಂಕಯ್ಯ ನಾಯ್ಡು ಮೊದಲು ಪ್ರಸ್ತಾಪಿಸಿದ್ದೇ ನಿನ್ನೆಯ ಗದ್ದಲ ವಿಚಾರವನ್ನು. “ಕೆಲ ಸದಸ್ಯರು ಸದನದ ಬಾವಿಗಿಳಿದು ಕೆಲ ಸದಸ್ಯರು ಟೇಬಲ್ ಹತ್ತಿ ಗಲಾಟೆ ಮಾಡಿದರು. ಅವರಿಂದ ಈ ಸದನದ ಎಲ್ಲಾ ಪಾವಿತ್ರ್ಯತೆ ನಿನ್ನೆ ಹಾಳಾಗಿ ಹೋಯಿತು” ಎಂದು ಉಪ ರಾಷ್ಟ್ರಪತಿಗಳೂ ಆದ ಅವರು ಬೇಸರ ವ್ಯಕ್ತಪಡಿಸಿದರು.

“ಈ ಕೃತ್ಯಗಳನ್ನ ಖಂಡಿಸಲು ಮತ್ತು ನನ್ನ ಕೋಪವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ… ಸದನದಲ್ಲಿ ಈ ಕೃತ್ಯ ಎಸಗಲು ಪ್ರಚೋದನೆಯಾದರೂ ಏನು ಎಂದು ಕಾರಣ ಕಂಡುಹಿಡಿಯಲು ನನಗೆ ಆಗಲಿಲ್ಲ. ನಿನ್ನೆ ಇಡೀ ರಾತ್ರಿ ನಿದ್ರೆಯೇ ಮಾಡಲಿಲ್ಲ” ಎಂದು ವೆಂಕಯ್ಯ ನಾಯ್ಡು ಹೇಳಿದರು. ದೇವಸ್ಥಾನಗಳಲ್ಲಿ ಭಕ್ತರಾದವರು ಗರ್ಭಗುಡಿ ಒಳಗೆ ಪ್ರವೇಶ ಮಾಡುವುದಿಲ್ಲ. ಅದು ದೇವಸ್ಥಾನದ ಪಾವಿತ್ರ್ಯತೆ. ಹಾಗೆಯೇ, ಈ ಮನೆಯ ಗರ್ಭಗುಡಿಯಾಗಿರುವ ಸದನದ ಬಾವಿಗೆ ಸದಸ್ಯರು ನುಗ್ಗುವುದು ಸದನಕ್ಕೆ ಮಾಡುವ ಅಪಚಾರವಾಗಿದೆ. ಇಂಥ ಘಟನೆಗಳು ಹಲವು ವರ್ಷಗಳಿಂದ ನಡೆಯುತ್ತಾ ಬಂದಿವೆ. ಕೆಲ ಸದಸ್ಯರು ಬಾವಿಗೆ ಇಳಿದಿದ್ದಲ್ಲದೇ ಟೇಬಲ್ ಮೇಲೆ ಹತ್ತಿ ನಿಂತು ಫೈಲ್ ಅನ್ನು ಅಧ್ಯಕ್ಷರತ್ತ ಎಸೆದು ದುರ್ವರ್ತನೆ ತೋರಿದರು. ಸದನದ ಕಲಾಪ ಎಂಥ ಸ್ಥಿತಿಗೆ ಬಂದಿದೆ ನೋಡಿ ಎಂದು ವೆಂಕಯ್ಯ ನಾಯ್ಡು ಭಾವುಕರಾದರು.

ನಿನ್ನೆ ಸದನದಲ್ಲಿ ಚರ್ಚೆ ನಡೆಯುವ ವೇಳೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಕೆಲ ಸದಸ್ಯರು ಘೋಷಣೆಗಳನ್ನ ಕೂಗುತ್ತಾ ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಟೇಬಲ್ ಹತ್ತಿ ಅಧಿಕೃತ ಕಡತವನ್ನ ಅಧ್ಯಕ್ಷರತ್ತ ಎಸೆಯುವ ಕೆಲಸವನ್ನೂ ಮಾಡಿದರು. ಛೇರ್ಮನ್ ಕೂರುವ ಸ್ಥಳದ ಕೆಳಗೆ ಅಧಿಕಾರಿಗಳಿಗಾಗಿ ಹಾಕಲಾಗಿರುವ ಟೇಬಲ್ ಮೇಲೆ ಈ ಘಟನೆ ನಡೆದದ್ದು. ಈ ಘಟನೆ ಬಳಿಕ ಮಾತನಾಡಿದ ಬಾಜ್ವಾ ತಮ್ಮ ನಡತೆಯನ್ನ ಸಮರ್ಥಿಸಿಕೊಂಡರು. ಸರ್ಕಾರ ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಲಿಲ್ಲವೆಂದರೆ ಇಂಥ ಕೆಲಸವನ್ನು ಇನ್ನೂ ನೂರು ಬಾರಿ ಬೇಕಾದರೂ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Porn Case | ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾ ಜಾಮೀನಿಗೆ ಮುಂಬೈ ಪೊಲೀಸರ ಆಕ್ಷೇಪ; ಕಾರಣವೇನು ಗೊತ್ತಾ?

ಇದೇ ವೇಳೆ ಆಗಸ್ಟ್ 13ರವರೆಗೆ ನಡೆಯಬೇಕಿದ್ದ ಮುಂಗಾರು ಅಧಿವೇಶನ ಎರಡು ದಿನ ಮುಂಚೆಯೇ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ನಿನ್ನೆ ಲೋಕಸಭೆ ಕಲಾಪವನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲೋಕಸಭೆಯಲ್ಲಿ ಅನುಮೋದನೆಯಾಗಿದ್ದ ಒಬಿಸಿ ಮಸೂದೆ ಇಂದು ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳುವ ಸಾಧ್ಯತೆ ಇದೆ. ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಎಂದು ಕರೆಯಲಾಗುವ ಒಬಿಸಿ ಬಿಲ್ ವಿಚಾರದಲ್ಲಿ ಸರ್ಕಾರಕ್ಕೆ ಬೆಂಬಲ ನೀಡಲು ವಿಪಕ್ಷಗಳು ನಿರ್ಧರಿಸಿವೆ. ಲೋಕಸಭೆಯಲ್ಲಿ ಒಂದೂ ವಿರೋಧ ಇಲ್ಲದೇ ಅನುಮೋದನೆ ಪಡೆದಿತ್ತು. ರಾಜ್ಯಸಭೆಯಲ್ಲೂ ಅವಿರೋಧವಾಗಿ ಬಿಲ್ ಪಾಸ್ ಆಗುವ ನಿರೀಕ್ಷೆ ಇದೆ. ಈ ಬಿಲ್ ಪಾಸ್ ಆದ ಬಳಿಕ ರಾಜ್ಯಸಭೆಯನ್ನೂ ಅನಿರ್ದಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: