ಶುಕ್ರವಾರ ಲಡಾಖ್‌ಗೆ ತೆರಳಬೇಕಿದ್ದ ರಾಜನಾಥ್‌‌ ಸಿಂಗ್ ಪ್ರವಾಸ ಮುಂದೂಡಿಕೆ; ಸರ್ಕಾರದಿಂದ ಸಿಗದ ಸ್ಪಷ್ಟತೆ

ಸಚಿವ ರಾಜ್‌ನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ.

MAshok Kumar | news18-kannada
Updated:July 2, 2020, 5:23 PM IST
ಶುಕ್ರವಾರ ಲಡಾಖ್‌ಗೆ ತೆರಳಬೇಕಿದ್ದ ರಾಜನಾಥ್‌‌ ಸಿಂಗ್ ಪ್ರವಾಸ ಮುಂದೂಡಿಕೆ; ಸರ್ಕಾರದಿಂದ ಸಿಗದ ಸ್ಪಷ್ಟತೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್
  • Share this:
ದೆಹಲಿ (ಜುಲೈ 02); ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷವಾದ ನಂತರ ಶುಕ್ರವಾರ ಮೊದಲ ಬಾರಿಗೆ ರಕ್ಷಣಾ ಸಚಿವ ರಾಜನಾಥ್‌‌ ಸಿಂಗ್ ಲಡಾಖ್‌ಗೆ ತೆರಳಲಿದ್ದಾರೆ ಎಂದು ನಿನ್ನೆ ಹೇಳಲಾಗಿತ್ತು. ಆದರೆ, ಈ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಇಂದು ಮಾಹಿತಿ ನೀಡಿದೆ.

ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥ್‌‌ ಸಿಂಗ್‌ ಶುಕ್ರವಾರ ಮುಂಜಾನೆಯೇ ಲಡಾಖ್‌ಗೆ ಭೇಟಿ ನೀಡಬೇಕಿತ್ತು. ಅಲ್ಲಿನ ಲೇಹ್ ಆಸ್ಪತ್ರೆಗೆ ತೆರಳಿ ಚೀನಾದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಸೈನಿಕರನ್ನು ಯೋಗಕ್ಷೇಮವನ್ನು ವಿಚಾರಿಸಲಿದ್ದಾರೆ. ಅಲ್ಲದೆ, ಗಡಿಯಲ್ಲಿ ಸೈನಿಕ ಕಾರ್ಯಾಚರಣೆಗೆ ಸನ್ನದ್ಧಗೊಂಡಿರುವ ಸೇನೆಯನ್ನು ಪರಿಶೀಲಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಮಹತ್ವದ ಭೇಟಿಯನ್ನು ಇದೀಗ ನಾನಾ ಕಾರಣಗಳಿಂದಾಗಿ ಮುಂದೂಡಲಾಗಿದೆ.

ಸಚಿವ ರಾಜ್‌ನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ. ಆದರೆ, ಜೂನ್ 6, 22 ಹಾಗೂ 30 ರಂದು ಎರಡೂ ದೇಶದ ಕಮಾಂಡರ್ ಮಟ್ಟದಲ್ಲಿ ಮೂರು ಸುತ್ತಿನ ಮಾತುಕತೆ ನಡೆದಿದೆ. ಗಡಿಯಲ್ಲಿ ಶಾಂತಿ ಸ್ಥಾಪಿಸುವ ಕುರಿತು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.

ಹೀಗಾಗಿ ಈ ಮಾತುಕತೆಗೆ ಅನುಗುಣವಾಗಿ ಚೀನಾ ಸೇನೆಯ ಬದ್ಧತೆಯನ್ನು ಕಾದು ನೋಡಿ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಇದೇ ಕಾರಣಕ್ಕೆ ಸಚಿವ ರಾಜನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಮುಂದೂಡಲಾಗಿದೆ ಎನ್ನಲಾಗುತಿದೆ.

.ಗಾಲ್ವಾನ್ ಘರ್ಷಣೆಯ ನಂತರ ಎರಡೂ ರಾಷ್ಟ್ರಗಳು ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ಮತ್ತು ಟ್ಯಾಂಕರ್‌ ಅನ್ನು ನಿಯೋಜಿಸಿದೆ. ಹೀಗಾಗಿ ಗಡಿಯಲ್ಲಿ ಅಕ್ಷರಶಃ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಆದರೆ, ಜೂನ್.30 ರಂದು ಎರಡೂ ದೇಶದ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಗಡಿರೇಖೆಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸುವ ಹಾಗೂ ಶಾಂತಿ ನೆಲೆಸುವ ಸಲುವಾಗಿ ಮಾತುಕತೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುದ್ಧ ಎರಡೂ ರಾಷ್ಟ್ರಕ್ಕೂ ಬೇಡವಾಗಿದೆ.

ಇಂತಹ ಸಂದರ್ಭದಲ್ಲಿ ದೇಶದ ರಕ್ಷಣಾ ಸಚಿವ ಗಡಿಗೆ ಪ್ರವಾಸ ಕೈಗೊಂಡರೆ, ಗಡಿಯಲ್ಲಿ ನಿಯೋಜಿಸಲಾಗಿರುವ ಸೈನಿಕರನ್ನು ಭೇಟಿ ಮಾಡಿದರೆ, ಸೈನಿಕರ ಮನೋಸ್ಥೈರ್ಯ ಹೆಚ್ಚುತ್ತದೆ. ಅಲ್ಲದೆ ಪರಿಸ್ಥಿತಿ ಉಲ್ಭಣಗೊಂಡರೆ ಯುದ್ಧಕ್ಕೆ ನಾವು ಸಿದ್ಧ ಎಂಬ ಸಂದೇಶವನ್ನು ವಿರೋಧಿ ರಾಷ್ಟ್ರಕ್ಕೆ ತಲುಪಿಸಲಿದೆ. ಹೀಗಾಗಿ ಊಹಾತ್ಮಕ ಮತ್ತು ಆಧಾರ ರಹಿತ ವರದಿಗಳನ್ನು ತಡೆಯುವ ಸಲುವಾಗಿ ರಾಜ್‌ನಾಥ್ ಸಿಂಗ್ ಲಡಾಖ್ ಭೇಟಿಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ
First published: July 2, 2020, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading