ರೈತರ ಅನಿಸಿಕೆ ಕೇಳಲು, ಚರ್ಚಿಸಲು ಸದಾ ಸಿದ್ಧರಿದ್ದೇವೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡೇ ಕಾಯ್ದೆ ರೂಪಿಸಲಾಗಿದೆ. ಈಗ ಮತ್ತೆ ಹಳೆಯ ವ್ಯವಸ್ಥೆಗೆ ಮರಳುವುದು ಸಾಧ್ಯವೇ ಇಲ್ಲ. ಆದರೂ ಕೂಡ ನಮ್ಮ ರೈತರ ಅಭಿಪ್ರಾಯಗಳನ್ನ ಕೇಳಲು ನಾವು ಸದಾ ಸಿದ್ಧರಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

 • Share this:
  ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸರ್ಕಾರ ಅಭಯಹಸ್ತ ಚಾಚುತ್ತಿದೆ. ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿಯೇ ಮಾತೃ ಕ್ಷೇತ್ರವಾಗಿದೆ. ಇದಕ್ಕೆ ಮಾರಕವಾಗುವಂಥ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಎಫ್​ಐಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ನಿನ್ನೆ ಮಾತನಾಡಿದ ರಾಜನಾಥ್ ಸಿಂಗ್, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಂಡರು. ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡೇ ಈ ಕಾಯ್ದೆಗಳನ್ನ ರೂಪಿಸಲಾಗಿದೆ ಎಂದ ಅವರು, ಈ ಸಂಬಂಧ ಸಂವಾದ, ಚರ್ಚೆಗಳಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿದರು.

  “ಇತ್ತೀಚಿನ ಸುಧಾರಣಾ ಕ್ರಮಗಳನ್ನ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡೇ ತೆಗೆದುಕೊಳ್ಳಲಾಗಿದೆ. ಮತ್ತೆ ಹಳೆಯ ವ್ಯವಸ್ಥೆಗೆ ಮರಳುವುದು ಸಾಧ್ಯವೇ ಇಲ್ಲ. ಆದರೂ ಕೂಡ ನಮ್ಮ ರೈತರ ಅಭಿಪ್ರಾಯಗಳನ್ನ ಕೇಳಲು ನಾವು ಸದಾ ಸಿದ್ಧರಿದ್ದೇವೆ. ಕಾಯ್ದೆಗಳಿಂದ ಆಗುವ ಪ್ರಯೋಜನಗಳನ್ನ ತಿಳಿಸಿ ಅವರ ಆತಂಕ ದೂರ ಮಾಡುವ ಪ್ರಯತ್ನ ಮಾಡುತ್ತೇವೆ” ಎಂದು ರಾಜನಾಥ್ ಸಿಂಗ್ ತಿಳಿಸಿದರು.

  ಕೊರೋನಾ ಸಂಕಷ್ಟ ಎದುರಾದಾಗ ಮೈಕೊಡವಿ ನಿಂತದ್ದು ಕೃಷಿ ಕ್ಷೇತ್ರವೇ. ಸಮೃದ್ಧ ಬೆಳೆಯಾಗಿದೆ. ಉಗ್ರಾಣಗಳು ತುಂಬಿಹೋಗಿವೆ ಎಂದರು.

  ಇದನ್ನೂ ಓದಿ: Agri Reforms - ಹೊಸ ಕೃಷಿ ಕಾಯ್ದೆ ದಿಢೀರ್ ರೂಪುಗೊಂಡಿಲ್ಲ; ಇಲ್ಲಿದೆ ಎರಡು ದಶಕದ ಟೈಮ್​ಲೈನ್

  ಕೇಂದ್ರ ರೂಪಿಸಿರುವ ಮೂರು ವಿವಿಧ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ, ಅದರಲ್ಲೂ ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಎರಡು ವಾರಗಳಿಗೂ ಹೆಚ್ಚು ಕಾಲದಿಂದ ದೆಹಲಿ ಗಡಿಭಾಗಗಳಲ್ಲಿ ಪ್ರತಿಭಟಿಸುತ್ತಿರುವ ಆ ಎರಡು ರಾಜ್ಯಗಳ ರೈತರು ಕೇಂದ್ರದ ಕಾಯ್ದೆಗಳ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಎಪಿಎಂಸಿ ವ್ಯವಸ್ಥೆಯನ್ನ ರದ್ದು ಮಾಡಲಾಗುತ್ತದೆ, ಎಂಎಸ್​ಪಿ ಕ್ರಮವನ್ನ ಹಿಂಪಡೆಯಲಾಗುತ್ತದೆ ಎಂಬ ಆತಂಕ ರೈತರಿಗೆ ಇದೆ. ಆದರೆ, ಕೇಂದ್ರ ಕಾಯ್ದೆಯಿಂದ ಎಪಿಎಂಸಿ ಮಾರುಕಟ್ಟೆಗಳು ರದ್ದಾಗುವುದಿಲ್ಲ. ಬದಲಾಗಿ ಹೆಚ್ಚುವರಿ ಮತ್ತು ಪರ್ಯಾಯವಾಗಿ ಖಾಸಗಿ ಮಾರುಕಟ್ಟೆಗಳೂ ಸೃಷ್ಟಿಯಾಗುತ್ತವೆ. ಇದರಿಂದ ರೈತರಿಗೆ ವಿಸ್ತೃತ ಮಾರುಕಟ್ಟೆ ಸೌಕರ್ಯ ಸಿಗುತ್ತದೆ. ಹಾಗೆಯೇ, ಎಂಎಸ್​ಪಿಯನ್ನು ಹಿಂಪಡೆಯುವ ಬಗ್ಗೆ ಕಾಯ್ದೆಯಲ್ಲಿ ಏನೂ ಹೇಳಿಲ್ಲ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಸರ್ಕಾರ ಭರವಸೆಯನ್ನೂ ನೀಡಿದೆ. ಆದರೂ ರೈತರ ಆತಂಕ ದೂರವಾಗಿಲ್ಲ.
  Published by:Vijayasarthy SN
  First published: