ಕೇರಳದ ಮಳೆಗೆ 8 ಸಾವಿರ ಕೋಟಿ ನಷ್ಟ; ಕೇಂದ್ರ ಗೃಹ ಸಚಿವರಿಂದ ವೈಮಾನಿಕ ಸಮೀಕ್ಷೆ; 100 ಕೋಟಿ ತುರ್ತು ಪರಿಹಾರ ಘೋಷಣೆ

news18
Updated:August 13, 2018, 11:49 AM IST
ಕೇರಳದ ಮಳೆಗೆ 8 ಸಾವಿರ ಕೋಟಿ ನಷ್ಟ; ಕೇಂದ್ರ ಗೃಹ ಸಚಿವರಿಂದ ವೈಮಾನಿಕ ಸಮೀಕ್ಷೆ; 100 ಕೋಟಿ ತುರ್ತು ಪರಿಹಾರ ಘೋಷಣೆ
news18
Updated: August 13, 2018, 11:49 AM IST
ನ್ಯೂಸ್​18 ಕನ್ನಡ

ಕೊಚ್ಚಿ (ಆ. 13): ಕೇರಳ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 37 ಜನ ಸಾವನ್ನಪ್ಪಿದ್ದು, 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ. ಒಟ್ಟಾರೆ 8 ಸಾವಿರಕ್ಕೂ ಹೆಚ್ಚು ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಒಂದು ವಾರದಿಂದ ಒಂದೇಸಮನೆ ಸುರಿಯುತ್ತಿರುವ ಮಳೆಯಿಂದಾಗಿ 8,316 ಕೋಟಿ ನಷ್ಟ ಉಂಟಾಗಿದೆ ಎಂದು ಕೇರಳ ರಾಜ್ಯಸರ್ಕಾರ ಅಂದಾಜಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್​ ಕೇರಳದಲ್ಲಿ ಪ್ರವಾಹಕ್ಕೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ 100 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ರಾಜನಾಥ ಸಿಂಗ್​ ಕೇರಳದ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಇಡುಕ್ಕಿ ಅಣೆಕಟ್ಟಿನ ಗೇಟುಗಳನ್ನು ಕೂಡ ತೆರೆದಿರುವುದರಿಂದ ಸಾಕಷ್ಟು ಕಡೆ ಪ್ರವಾಹದ ಭೀತಿ ಎದುರಾಗಿದೆ.'ಕೇರಳದ ಜನರ ಸಂಕಷ್ಟಗಳೇನು ಎಂಬುದು ನನಗೂ ಅರ್ಥವಾಗುತ್ತದೆ. ಅನಿರೀಕ್ಷಿತವಾಗಿ ಸಂಭವಿಸಿದ ಈ ಅವಘಡದಿಂದಾಗಿ ಜನರು ಪರದಾಡುವಂತಾಗಿದೆ. ಆಗಿರುವ ಹಾನಿ ಸರಿಹೋಗಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ಸಂತ್ರಸ್ತರಿಗೆ ನಾನು ಈ ಕ್ಷಣವೇ 100 ಕೋಟಿ ಹೆಚ್ಚುವರಿ ಪರಿಹಾರವನ್ನು ಘೋಷಿಸುತ್ತಿದ್ದೇನೆ' ಎಂದು ರಾಜನಾಥ್​ ಸಿಂಗ್​ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

 
Loading...
ಕೇರಳದ ಪಿಣರಾಯಿ ವಿಜಯನ್​ ಸರ್ಕಾರ 8,316 ಕೋಟಿ ನಷ್ಟವುಂಟಾಗಿರುವುದರಿಂದ 1,220 ಕೋಟಿ ಅನುದಾನ ನೀಡಬೇಕೆಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸದ್ಯಕ್ಕೆ ತುರ್ತಾಗಿ 100 ಕೋಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕೂಡ ಟ್ವೀಟ್​ ಮಾಡಿದ್ದು, ರಾಜ್ಯದಲ್ಲಿ ಸಂಭವಿಸಿದ ವಿಪತ್ತಿನಿಂದ 20 ಸಾವಿರಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಯಾಗಿದೆ. ಸುಮಾರು 10 ಸಾವಿರ ಕಿ.ಮೀ. ರಸ್ತೆಯೂ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 8316 ಕೋಟಿ ನಷ್ಟವುಂಟಾಗಿದೆ ಎಂದು ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಕೇರಳದಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಇಡುಕ್ಕಿ ಮತ್ತು ಇಡಮಲಯಾರ್​ ಡ್ಯಾಮ್​ಗಳ ನೀರಿನ ಮಟ್ಟ ಕಡಿಮೆಯಾಗಿದೆ. ಕೇರಳದಲ್ಲಿ 60 ಸಾವಿರಕ್ಕೂ ಅಧಿಕ ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.

 
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...