Rajiv Gandhi Photo Exhibition: ದೆಹಲಿಯಲ್ಲಿ ರಾಜೀವ್ ಗಾಂಧಿ ಕುರಿತ ಅಪರೂಪದ ಛಾಯಾಚಿತ್ರ ಪ್ರದರ್ಶನ

ರಾಜೀವ್ ಗಾಂಧಿ ಅವರ ಅಪರೂಪದ ಚಿತ್ರಗಳು

ರಾಜೀವ್ ಗಾಂಧಿ ಅವರ ಅಪರೂಪದ ಚಿತ್ರಗಳು

'ದಿ ಫಾದರ್ ಅಂಡ್ ಸನ್' ಮತ್ತು ''ದಿ ಫ್ಯಾಮಿಲಿ ಮ್ಯಾನ್, ಎಂಬ ವಿಭಾಗಗಳಲ್ಲಿ ರಾಜೀವ್ ಗಾಂಧಿ ಅವರ ಸುಖಿ ಕುಟುಂಬ ನೋಡುಗರಲ್ಲಿ ಖುಷಿ ಉಂಟು ಮಾಡದೆ ಇರದು.

  • Share this:

ನವದೆಹಲಿ, ಆ. 24: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಸದಾ ಭಿನ್ನ ಭಿನ್ನವಾಗಿ ಪ್ರತಿಭಟನೆ ಮಾಡಿ ಗಮನ ಸೆಳೆಯುವ, ಕೊರೊನಾ (Corona) ಮತ್ತು ಲಾಕ್ಡೌನ್ (Lockdown) ನಂತಹ ಕಡು ಕಷ್ಟದ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಹಲವು ಬಗೆಯಲ್ಲಿ ಸಹಾಯಹಸ್ತ ಚಾಚಿದ ಕನ್ನಡಿಗ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಈಗ ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿ (Rajiv Gandhi) ಅವರ ಜೀವನಾಧಾರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಕಚೇರಿ ಆವರಣದಲ್ಲಿ 'ದಿ ಆರ್ಕಿಟೆಕ್ಟ್ ಆಫ್ ಮಾಡರ್ನ್ ಇಂಡಿಯಾ' (The Architect of Modern India) ಎಂಬ ಹೆಸರಿನ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದು ಪ್ರತಿದಿನ ಸಾವಿರಾರು ಜನ ವೀಕ್ಷಣೆ ಮಾಡುತ್ತಿದ್ದಾರೆ.


ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವಾದ ಆಗಸ್ಟ್ 20ರಂದು ಅವರ ಪುತ್ರ, ಸಂಸದ, ಅಖಿಲ ಭಾರತ ರಾಷ್ಟ್ರೀಯ ಸಮಿತಿ ಮಾಜಿ ಅಧ್ಯಕ್ಷರೂ ಆದ ರಾಹುಲ್ ಗಾಂಧಿ (Rahul Gandhi) ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ ಮಾಡಿದರು. ಆಗಸ್ಟ್ 26ರವರೆಗೆ ಛಾಯಾಚಿತ್ರ ಪ್ರದರ್ಶನ ಇರಲಿದ್ದು ಹಿರಿಯ ಕಾಂಗ್ರೆಸ್ ನಾಯಕರು ಕೂಡ ಆಗಮಿಸಿ ರಾಜೀವ್ ಗಾಂಧಿ ಅವರ ಜೀವನಚರಿತ್ರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.


Rajiv Gandhi rare photos exhibition in Delhi
ಫೋಟೋ ಪ್ರದರ್ಶನ ನಡೆದ ಸ್ಥಳದ ಚಿತ್ರ


Youth Congress President BV Srinivas seeing the Rajiv Gandhi photo exhibition
ರಾಜೀವ್ ಗಾಂಧಿ ಫೋಟೋ ಪ್ರದರ್ಶನ ಆಯೋಜಿಸಿದ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿ ವಿ


ಹುಟ್ಟು-ಸಾವಿನ ನಡುವೆ


1944 ಆಗಸ್ಟ್ 20 ರಾಜೀವ್ ಗಾಂಧಿ ಜನನವಾದಾಗಿನಿಂದ 1991ರ ಮೇ 21ರಂದು ಹತ್ಯೆಯಾದವರೆಗಿನ ಎಲ್ಲಾ ಮಾಹಿತಿಗಳನ್ನು ಪ್ರಸ್ತುತ ಪಡಿಸಲಾಗಿದೆ. ರಾಜೀವ್ ಗಾಂಧಿ ಅವರು ಬಾಲ್ಯಾವಸ್ಥೆಯ ದಿನಗಳನ್ನು, ಅವರ ತಾಯಿ ಇಂದಿರಾ ಗಾಂಧಿ ಜೊತೆಗೆ, ಹಾಗೆಯೇ ಮಡದಿ ಸೋನಿಯಾ ಗಾಂಧಿ (Sonia Gandhi), ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಛಾಯಾಚಿತ್ರ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಪ್ರಸ್ತುತಪಡಿಸಿದೆ. 'ದಿ ಫಾದರ್ ಅಂಡ್ ಸನ್' (The Father and Son) ಮತ್ತು ''ದಿ ಫ್ಯಾಮಿಲಿ ಮ್ಯಾನ್, (The Family Man) ಎಂಬ ವಿಭಾಗಗಳಲ್ಲಿ ರಾಜೀವ್ ಗಾಂಧಿ ಅವರ ಸುಖಿ ಕುಟುಂಬ ನೋಡುಗರಲ್ಲಿ ಖುಷಿ ಉಂಟು ಮಾಡದೆ ಇರದು.




ರಾಜೀವ್ ಗಾಂಧಿ ಮತ್ತು ಮದರ್ ಥೆರಸಾ


'ವುಮನ್ ಎಂಪವರ್ಮೆಂಟ್' (Woman Empowerment) ಎಂಬ ವಿಭಾಗದಲ್ಲಿ ರಾಜೀವ್ ಗಾಂಧಿ ಅವರು ಮದರ್ ಥೆರಸಾ ಅವರನ್ನು ಭೇಟಿ ಮಾಡಿರುವ ಫೋಟೋ ಗಮನಸೆಳೆಯದೆ ಇರದು. ಅದೇ ರೀತಿ 'ದಿ ಲೆಗಸಿ ಹಿ ಲೆಫ್ಟ್ ಬಿಹಾಂಡ್' (The Legacy He Left Behind), 'ಎ ಮ್ಯಾನ್ ವಿತ್ ಔಟ್ ಬಾರ್ಡರ್ಸ್' (A Man Without Borders), 'ಎ‌ ನ್ಯೂ ಡಿಮೆನ್ಷನ್ ಟು ಡೆವೆಲಪ್ಮೆಂಟ್' (A New Dimension To Development) ಎಂಬ ವಿಭಾಗಗಳಲ್ಲಿ ರಾಜೀವ್ ಗಾಂಧಿ ಅವರ ಅಭಿವೃದ್ಧಿ ಬಗೆಗಿನ ದೂರದೃಷ್ಟಿಯ ಅನಾವರಣ ಆಗಿದೆ.


ಇಂದಿರಾಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ


ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ ಅವರನ್ನೇ ಹೋಲುವ ಪ್ರಿಯಾಂಕಾ ಗಾಂಧಿ ಅವರ ಫೋಟೋ ಅಚ್ಚರಿ ಮೂಡಿಸುತ್ತದೆ. ಅದೇ ರೀತಿ ಉಕ್ಕಿನ ಮಹಿಳೆ, ದುರ್ಗೆ ಎಂಬಿತ್ಯಾದಿ ಪ್ರಖ್ಯಾತಿ ಗಳಿಸಿದ್ದ ಇಂದಿರಾ ಗಾಂಧಿ ಅವರು ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಜೊತೆಗಿರುವ ಫೋಟೋಗಳು ಛಾಯಾಚಿತ್ರ ಪ್ರದರ್ಶನಕ್ಕೆ ಮತ್ತೊಂದು ರೀತಿಯ ಮೆರುಗು ನೀಡಿವೆ.


ವರದಿ: ಧರಣೀಶ್ ಬೂಕನಕೆರೆ

Published by:Vijayasarthy SN
First published: