ಚೆನ್ನೈ (ಜನವರಿ 11); ನಟ ರಜನಿಕಾಂತ್ ಡಿಸೆಂಬರ್ 31 ರಂದು ತಾವು ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತೇನೆ, ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ಹಲವು ದಿನಗಳ ಹಿಂದೆಯೇ ಆಶ್ವಾಸನೆ ನೀಡಿದ್ದರು. ಆದರೆ, ಡಿಸೆಂಬರ್ ಕೊನೆ ವಾರದಲ್ಲಿ ತಾವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂಬಂಧ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಪತ್ರವೊಂದನ್ನು ಬರೆದು ಅದನ್ನು ಟ್ವೀಟ್ ಸಹ ಮಾಡಿದ್ದರು. ಆದರೆ, ನಟ ರಜನೀಕಾಂತ್ ಅವರ ತೀರ್ಮಾನದಿಂದ ಬೇಸತ್ತಿರುವ ಅವರ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರು ಕಳೆದ ಮೂರು ವಾರಗಳಿಂದ ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಲೇಬೇಕು ಎಂದು ಎಲ್ಲೆಡೆ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಇಂದು ಮತ್ತೆ ಟ್ವೀಟ್ ಮಾಡಿರುವ ರಜನೀಕಾಂತ್, "ನಾನು ಮತ್ತೆ ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ. ದಯವಿಟ್ಟು ಅಭಿಮಾನಿಗಳು ನನ್ನ ಮೇಲೆ ಒತ್ತಡ ಹೇರಬೇಡಿ" ಎಂದು ಮನವಿ ಮಾಡಿದ್ದಾರೆ.
"ಪ್ರತಿಭಟನೆಯಲ್ಲಿ ಭಾಗವಹಿಸದಿದ್ದಕ್ಕಾಗಿ ನನ್ನ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರನ್ನು ನಾನು ಪ್ರಶಂಸಿಸುತ್ತೇನೆ. ಆದರೆ, ಕಳೆದ ತಿಂಗಳು ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ವಿವರಿಸಿದರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಬಗ್ಗೆ ನನಗೆ ಬೇಸರ ಮತ್ತು ಚಿಂತೆ ಇದೆ" ಎಂದು ರಜನಿಕಾಂತ್ ಹೇಳಿದ್ದಾರೆ.
— Rajinikanth (@rajinikanth) January 11, 2021
ಇದನ್ನೂ ಓದಿ: ಕೃಷಿ ಕಾಯ್ದೆ ಸ್ಥಗಿತಗೊಳಿಸುತ್ತೀರೋ, ನಾವೇ ಕ್ರಮ ತೆಗೆದುಕೊಳ್ಳಲೋ? ಕೇಂದ್ರಕ್ಕೆ ಸುಪ್ರೀಂ ಚಾಟಿ
ನಟ ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸದ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನೂರಾರು ರಜನೀಕಾಂತ್ ಅಭಿಮಾನಿಗಳು ಭಾನುವಾರ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ನೆರೆದಿದ್ದರು. ಆದರೆ, ಇದರಿಂದ ರಜನಿಗೆ ಸಾಕಷ್ಟು ನೋವಾಗಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ