ಚೆನ್ನೈ (ಡಿಸೆಂಬರ್ 15); ಬಹು ನಿರೀಕ್ಷಿತ ತಮಿಳುನಾಡಿನ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಈ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಡಿಎಂಕೆ ಪಕ್ಷಗಳು ಗೆಲ್ಲುವ ಫೇವರಿಟ್. ಆದರೆ, ತಮಿಳುನಾಡಿನ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪಕ್ಷವನ್ನು ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಟ ರಜನಿಕಾಂತ್ ಸಹ ಡಿಸೆಂಬರ್ 31 ರಂದು ತಾವು ಪಕ್ಷವನ್ನು ಸ್ಥಾಪಿಸುವ ಕುರಿತು ಬಹಿರಂಗಪಡಿಸುವುದಾಗಿ ತಿಳಿಸಿದ್ದರು. ಈ ನಡುವೆ ತಮಿಳುನಾಡಿನಲ್ಲಿ "ಮಕ್ಕಳ್ ಸೇವಯ್ ಕಚ್ಚಿ" (MSK) ಎಂಬ ಹೆಸರಿನಲ್ಲಿ ಹೊಸ ಪಕ್ಷವೊಂದನ್ನು ನೊಂದಾಯಿಸಲಾಗಿದ್ದು, "ಆಟೋ ರಿಕ್ಷಾ"ವನ್ನು ಪಕ್ಷಕ್ಕೆ ಚಿಹ್ನೆಯನ್ನಾಗಿ ನೀಡಲಾಗಿದೆ. ಹೀಗಾಗಿ ಈ ಪಕ್ಷ ನಟ ರಜನಿಯವರೇ ನೋಂದಾಯಿಸಿದ್ದು, ಅವರು ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂಬ ಸುದ್ದಿಗಳು ತಮಿಳುನಾಡಿನಲ್ಲಿ ಹರಿದಾಡುತ್ತಿದೆ.
1995 ರಲ್ಲಿ ಬಿಡುಗಡೆಯಾದ 'ಬಾಷಾ' ನಟ ರಜಿನಿಯವರ ಸಿನಿಮಾ ಕೆರಿಯರ್ ಅನ್ನೇ ಬದಲಿಸಿದ ಬ್ಲಾಕ್ಬಸ್ಟರ್ ಚಿತ್ರ. ಈ ಚಿತ್ರದಲ್ಲಿ ರಜಿನಿಕಾಂತ್ ಆಟೋ ರಿಕ್ಷಾ ಚಾಲಕನಾಗಿ ನಟಿಸಿ ಜನಮನ ಗೆದ್ದಿದ್ದರು. ಜನರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವ ಕಾರಣ ಈ ಚಿಹ್ನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ಈಗಲೂ ತಮಿಳುನಾಡಿನ ತಳವರ್ಗ ಮತ್ತು ಆಟೋ ರಿಕ್ಷಾ ಚಾಲಕರ ಪಾಲಿಗೆ ರಜಿನಿಯವರೇ ನೆಚ್ಚಿನ ನಾಯಕನಾಗಿದ್ದು, ಅವರನ್ನು ಆರಾಧಿಸುವ ಜನರಿಗೂ ಕಡಿಮೆ ಏನಿಲ್ಲ. ಹೀಗಾಗಿ ಈ ಪಕ್ಷ ರಜಿನಿಯವರದ್ದೇ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಪಕ್ಷವನ್ನು ನೋಂದಾಯಿಸಿದ ಅರ್ಜಿದಾರನು ತೂತುಕುಡಿಯಲ್ಲಿರುವ ರಜಿನಿ ಮಕ್ಕಲ್ ಮಂದಿರಂ (ಆರ್ಎಂಎಂ) ನ ಹಿರಿಯ ಕಾರ್ಯಕಾರಿಣಿಯಾಗಿದ್ದು, ರಜನಿಕಾಂತ್ ಅವರ ಸೂಚನೆಯ ಮೇರೆಗೆ ಇನ್ನೊಬ್ಬ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮಾಡಲಾಗಿದೆ. ಆದರೆ, ಅರ್ಜಿದಾರರ ವಿವರಗಳೂ ಇನ್ನೂ ಬಹಿರಂಗವಾಗಿಲ್ಲ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.
ನಟ ರಜಿನಿಕಾಂತ್ ಈ ಹಿಂದೆ ತಮ್ಮ ಪಕ್ಷವನ್ನು "ಅನೈತ್ತಿಂದಿಯ ಮಕ್ಕಳ್ ಶಕ್ತಿ ಕಳಗಮ್" ಎಂದು ನಮೂದಿಸಿದ್ದು ಪಕ್ಷದ ಚಿಹ್ನೆಯಾಗಿ ಅವರ ಬಾಬಾ ಸಿನಿಮಾದ ಬಾಬಾ ಮುದ್ರೆಯನ್ನು ಕೋರಿದ್ದಾರೆ ಎನ್ನಲಾಗಿತ್ತು.
1996ರಲ್ಲಿ ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತ ವಿರುದ್ಧ ರಜಿನಿಕಾಂತ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಅವರು ಕಾಂಗ್ರೆಸ್ ಡಿಎಂಕೆ ಮೈತ್ರಿಗೆ ಬೆಂಬಲ ಸೂಚಿಸಿ "ತಮ್ಮ ಅಭಿಮಾನಿಗಳು ಡಿಎಂಕೆಗೆ ಮತ ಚಲಾಯಿಸಬೇಕು. ಒಂದು ವೇಳೆ ಜಯಲಲಿತಾ ಅವರಿಗೆ ಮತ ಚಲಾಯಿಸಿದರೆ ಇಡೀ ತಮಿಳುನಾಡು ಸ್ಮಶಾನವಾಗುತ್ತದೆ" ಎಂದ್ದಿದ್ದರು. ಪರಿಣಾಮ ಈ ಚುನಾವಣೆಯಲ್ಲಿ ಜಯಲಲಿತಾ ಅವರ ಎಡಿಎಂಕೆ ಪಕ್ಷ ಹೇಳ ಹೆಸರಿಲ್ಲದಂತಾಗಿತ್ತು. ಇದು ತಮಿಳುನಾಡು ರಾಜಕಾರಣ ಅಖಾಡದಲ್ಲಿ ರಜಿನಿಯವರ ಮೊದಲ ಪ್ರವೇಶ ಎಂದೇ ಬಣ್ಣಿಸಲಾಗಿತ್ತು.
ಇದನ್ನೂ ಓದಿ : ಜಿಲ್ಲಾ ಪಂಚಾಯತ್ ಗೆಲುವಿನೊಂದಿಗೆ ಗೋವಾದಲ್ಲಿ ಖಾತೆ ತೆರೆದ ಎಎಪಿ; ವಿಧಾನಸಭಾ ಚುನಾವಣೆಗೆ ಸಿದ್ದರಾಗಲು ಕೇಜ್ರಿವಾಲ್ ಕರೆ
ಆನಂತರ ಎರಡು ದಶಕಗಳಿಂದ ಅವರು ರಾಜಕೀಯಕ್ಕೆ ಅಧೀಕೃತವಾಗಿ ಎಂಟ್ರಿ ಕೊಡುವ ಕುರಿತ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಈವರೆಗೆ ಈ ಕುರಿತು ರಜಿನಿ ತುಟಿ ಬಿಚ್ಚಿರಲಿಲ್ಲ. ಸ್ಪಷ್ಟತೆ ನೀಡಿರಲಿಲ್ಲ. ಆದರೆ, ಡಿಸೆಂಬರ್ 31 ರಂದುತಾವು ಪಕ್ಷವನ್ನು ಘೋಷಿಸುವುದಾಗಿ ಅವರು ತಿಳಿಸಿರುವುದು ತಮಿಳುನಾಡಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಏತನ್ಮಧ್ಯೆ, 2021 ರ ವಿಧಾನಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷ ಸಹ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿದೆ. ಹೀಗಾಗಿ ಈ ಬಾರಿಯ ತಮಿಳುನಾಡಿನ ಚುನಾವಣಾ ಅಖಾಡ ಹಿಂದೆಂದಿಗಿಂತಲೂ ಹೆಚ್ಚು ವರ್ಣ ರಂಜಿತವಾಗಿರಲಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ