Rajinikanth: ಪೆರಿಯಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳೋ ಮಾತೇ ಇಲ್ಲ ಎಂದ ರಜನಿಕಾಂತ್

ಪೆರಿಯಾರ್ 1971ರಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳ ಮೆರವಣಿಗೆ ನಡೆಸಿದ್ದರು. ಆ ಫೋಟೋಗಳಿಗೆ ಚಪ್ಪಲಿಗಳ ಹಾರ ಹಾಕಿ ಮೌಢ್ಯತೆಯ ವಿರುದ್ಧ ಹೋರಾಡಿದ್ದರು ಎಂದು ಸೂಪರ್​ಸ್ಟಾರ್ ರಜನಿಕಾಂತ್ ಹೇಳಿಕೆ ನೀಡಿದ್ದರು.

ರಜನಿಕಾಂತ್

ರಜನಿಕಾಂತ್

  • Share this:
ಚೆನ್ನೈ (ಜ. 21): ಸಮಾಜ ಪರಿವರ್ತಕ ಪೆರಿಯಾರ್ ರಾಮಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸೂಪರ್​ಸ್ಟಾರ್ ರಜನಿಕಾಂತ್ ಬೇಷರತ್ ಕ್ಷಮೆ ಯಾಚಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಆದರೆ, ಈ ವಿಚಾರವಾಗಿ ಕ್ಷಮೆ ಕೇಳಲು ಸಾಧ್ಯವೇ ಇಲ್ಲ ಎಂದು ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.

ದ್ರಾವಿಡ ಚಳವಳಿಯ ಪಿತಾಮಹ ಎಂದೇ ಕರೆಯಲಾಗುವ ಪೆರಿಯಾರ್ ಅವರ ವರ್ಚಸ್ಸಿಗೆ ಧಕ್ಕೆ ಬರುವಂತಹ ಹೇಳಿಕೆಯನ್ನು ರಜನಿಕಾಂತ್ ನೀಡಿದ್ದಾರೆ ಎಂದು ಆರೋಪಿಸಿ ದ್ರಾವಿಡರ್ ವಿದುತಲೈ ಕಳಗಂ ಎಂಬ ಸಂಘಟನೆಯ ಸದಸ್ಯರು ದೂರು ನೀಡಿದ್ದರು.

ರಜನಿಕಾಂತ್ ಹೇಳಿದ್ದೇನು?:

ತಮಿಳು ನಿಯತಕಾಲಿಕೆಯ 50ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ರಜನಿಕಾಂತ್, ಪೆರಿಯಾರ್ 1971ರಲ್ಲಿ ಮೌಢ್ಯತೆಯ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಇದಕ್ಕಾಗಿ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಿದ್ದರು. ಆ ಫೋಟೋಗಳಿಗೆ ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ನಡೆಸಿದ್ದರು. ಆದರೆ, ಆ ಬಗ್ಗೆ ಯಾವ ಪತ್ರಿಕೆಗಳೂ ಸುದ್ದಿ ಪ್ರಕಟಿಸಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ದೇಶದ್ರೋಹಿ ಮುಸ್ಲಿಮರು ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸುತ್ತಾರೆ; ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ಈ ಮೂಲಕ ತಮಿಳುನಾಡಿನ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ರಜನಿಕಾಂತ್​ ಅವರ ವಿರುದ್ಧ ದೂರು ದಾಖಲಾಗಿತ್ತು. ಪೆರಿಯಾರ್ ಅವರ ಬಗ್ಗೆ ಸುಳ್ಳು ಸುದ್ದಿ ಹರಡಿರುವ ರಜನಿಕಾಂತ್ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ಕುರಿತು ಬೇಷರತ್ ಕ್ಷಮಾಪಣೆ ಕೋರಬೇಕು. ಇಲ್ಲದಿದ್ದರೆ ರಜನಿಕಾಂತ್ ಮನೆ ಮುಂದೆ ಗೇರಾವ್ ಹಾಕಲಾಗುವುದು ಎಂದು ದ್ರಾವಿಡರ್ ವಿದುತಲೈ ಕಳಗಂ ಸಂಘಟನೆಯವರು ಎಚ್ಚರಿಕೆ ನೀಡಿದ್ದರು.

ರಜನಿಕಾಂತ್ ಹೇಳಿಕೆಯನ್ನು ಖಂಡಿಸಿ ದ್ರಾವಿಡರ್ ವಿದುತಲೈ ಕಳಗಂ ಸಂಘಟನೆ ಸದಸ್ಯರು ನಿನ್ನೆ ರಜನಿಕಾಂತ್ ಮನೆ ಮುಂದೆ ಗಲಾಟೆಯೆಬ್ಬಿಸಿ, ರಜನಿಕಾಂತ್ ಪ್ರತಿಕೃತಿ ಸುಟ್ಟಿಹಾಕಿದ್ದರು. ಈ ಪ್ರಕರಣದಲ್ಲಿ ಒಟ್ಟು 50 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕ್ಷಮೆ ಕೇಳಲ್ಲ ಎಂದು ರಜನಿಕಾಂತ್:

ಇದರ ಬೆನ್ನಲ್ಲೇ ಇಂದು ತಮ್ಮ ನಿಲುವನ್ನು ಪ್ರಕಟಿಸಿರುವ ರಜನಿಕಾಂತ್, 'ಕ್ಷಮೆ ಯಾಚಿಸಿದರೆ ನಾನು ಹೇಳಿದ್ದು ಸುಳ್ಳು ಎಂಬಂತಾಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವುದಿಲ್ಲ. ಪೆರಿಯಾರ್ ಮೆರವಣಿಗೆಯಲ್ಲಿ ಸೀತಾ-ರಾಮರ ನಗ್ನ ಫೋಟೋಗಳನ್ನು ಪ್ರದರ್ಶಿಸಿದ್ದು ಸತ್ಯ ಸಂಗತಿ. ಅದು ವಿವಾದಕ್ಕೆ ಕಾರಣವಾಗಿದೆ ಎಂಬ ಕಾರಣಕ್ಕೆ ನನ್ನ ಹೇಳಿಕೆಯನ್ನು ಹಿಂಪಡೆಯಲು ಸಾಧ್ಯವಿಲ್ಲ. ನಾನು ಕಲ್ಪಿಸಿಕೊಂಡು ಯಾವ ವಿಷಯವನ್ನೂ ಹೇಳಿಲ್ಲ. ನಾನು ನೋಡಿದ್ದನ್ನು ನಾನು ಹೇಳಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

(ವರದಿ: ಪೂರ್ಣಿಮಾ ಮುರಳಿ)
First published: