ರಾಜಸ್ಥಾನದಲ್ಲಿನ್ನು ಮಾಸ್ಕ್​ ಧರಿಸುವುದು ಕಾನೂನಾತ್ಮಕವಾಗಿ ಕಡ್ಡಾಯ; ಹೊಸ ಕಾನೂನು ಜಾರಿಗೆ ತಂದ ಸಿಎಂ ಅಶೋಕ್ ಗೆಹ್ಲೋಟ್

ರಾಜ್ಯದಲ್ಲಿ ಕೊರೋನಾ ವೈರಸ್​ ವಿರುದ್ದ ನಡೆಯುತ್ತಿರುವ ಸಾರ್ವಜನಿಕ ಆಂದೋಲನದ ಜೊತೆಗೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂಬ ಕಾನೂನನ್ನು ಇಂದಿನಿಂದಲೇ ರಾಜಸ್ಥಾನ ಸರ್ಕಾರ ಜಾರಿಗೆ ತರುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ಅಶೋಕ್ ಗೆಹ್ಲೋಟ್.

ಅಶೋಕ್ ಗೆಹ್ಲೋಟ್.

 • Share this:
  ರಾಜಸ್ಥಾನ (ನವೆಂಬರ್​ 02);  ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಈಗಾಗಲೇ ಸುಮಾರು 8,229,313 ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ,  122,607 ಜನ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಾದ್ಯಂತ ಹೊರಡಿಸಲಾಗಿದ್ದ ಲಾಕ್​ಡೌನ್​ ಅನ್ನು ತೆಗೆದ ನಂತರ ಸೋಂಕಿತರ ಸಂಖ್ಯೆ ಏರುತ್ತಿದೆ ಎಂಬುದು ತಜ್ಞರ ಆರೋಪ. ಈ ನಡುವೆ ಕೇಂದ್ರ ಸರ್ಕಾರ ಜನ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಅರಿವು ಮೂಡಿಸಲು ಮುಂದಾದರೂ ಸಹ ಜನ ಕೆಲವು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ಕಾರಣಕ್ಕೆ ರಾಜಸ್ಥಾನ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಮಾಸ್ಕ್​ ಧರಿಸುವುದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲು ಹೊರಟಿದೆ.

  ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಡೀ ದೇಶಕ್ಕೆ ಮಾದರಿಯಾಗಬಲ್ಲ ಹೊಸ ಕಾನೂನನ್ನು ಜಾರಿಗೊಳಿಸಿದ್ದು, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಘೋಷಿಸಿದ್ದಾರೆ. ಈ ಮೂಲಕ ಕೊರೋನಾ ವಿರುದ್ದ ಹೋರಾಡಲು ಈ ರೀತಿಯ ಕಾನೂನು ತಂದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ.  ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಸಿಎಂ ಅಶೋಕ್​ ಗೆಹ್ಲೋಟ್, "ರಾಜ್ಯದಲ್ಲಿ ಕೊರೋನಾ ವೈರಸ್​ ವಿರುದ್ದ ನಡೆಯುತ್ತಿರುವ ಸಾರ್ವಜನಿಕ ಆಂದೋಲನದ ಜೊತೆಗೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂಬ ಕಾನೂನನ್ನು ಇಂದಿನಿಂದಲೇ ರಾಜಸ್ಥಾನ ಸರ್ಕಾರ ಜಾರಿಗೆ ತರುತ್ತಿದೆ" ಎಂದು ತಿಳಿಸಿದ್ದಾರೆ.

  ಇನ್ನು ದೀಪಾವಳಿ ಹಬ್ಬಕ್ಕೂ ದಿನಗಣನೆ ಆರಂಭವಾಗಿದೆ. ಭಾರತದಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಸಾಮಾನ್ಯವಾಗಿ ಅಧಿಕವಾಗಿರುತ್ತದೆ. ಇದು ಶ್ವಾಸಕೋಶ ಸಂಬಂಧಿ ಖಾಯಿಲೆ ಇರುವವರಿಗೆ ಸಮಸ್ಯೆಗೂ ಕಾರಣವಾಗಿದೆ. ಹೀಗಾಗಿ ಈ ಕುರಿತು ಎಚ್ಚರಿಕೆ ಮತ್ತು ಕೆಲವು ಸೂಚನೆಗಳನ್ನು ನೀಡಿರುವ ಅಶೋಕ್​ ಗೆಹ್ಲೋಟ್,  "ಕೊರೋನಾ ಸೋಂಕಿತ ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಪಟಾಕಿಗಳಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಸಾರ್ವಜನಿಕರನ್ನು ರಕ್ಷಿಸುವ  ಸಲುವಾಗಿ ಜನ ಈ ಭಾರಿ ಪಟಾಕಿಗಳನ್ನು ಸಿಡಿಸುವುದರಿಂದ ದೂರ ಇರಬೇಕು. ಅಲ್ಲದೆ, ಹೊಸ ಪಟಾಕಿ ಅಂಗಡಿಗಳಿಗೆ ಪರವಾನಗಿ ನೀಡದಿರುವ ಮತ್ತು ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ನಿಯಂತ್ರಿಸುವಂತೆ ಹಾಗೂ ನಿಯಮ ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ" ಎಂದು ಅಶೋಕ್ ಗೆಹ್ಲೋಟ್​ ತಿಳಿಸಿದ್ದಾರೆ.

  ಇನ್ನು ಕೊರೋನಾ ಸವಾಲನ್ನು ಎದುರಿಸಲು ರಾಜ್ಯದಲ್ಲಿ 2 ಸಾವಿರ ಹೊಸ ವೈದ್ಯರ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯವು ತ್ವರಿತಗೊಳಿಸಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ : Accident: ಆಂಧ್ರಪ್ರದೇಶದ ಕಡಪ ಬಳಿ ಭೀಕರ ಅಪಘಾತ; ಕಾರಿನಲ್ಲಿದ್ದ ನಾಲ್ವರು ಸಜೀವ ದಹನ  ಕೊರೋನಾ ಸೋಂಕು ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಆರ್ಥಿಕತೆಗಿಂತ ಜನರ ಜೀವ ಮುಖ್ಯ ಎಂದು ಪರಿಗಣಿಸಿರುವ ಹಲವಾರು ದೇಶಗಳು ಇದೀಗ ಎರಡನೇ ಹಂತದ ಲಾಕ್​ಡೌನ್ ಕುರಿತು ಯೋಚಿಸುತ್ತಿವೆ. ಭಾರತದಲ್ಲೂ ಸಹ ಮತ್ತೆ ಲಾಕ್​ಡೌನ್ ಅನ್ನು ಘೋಷಿಸಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ರಾಜಸ್ಥಾನ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮ ಅಭಿನಂದಾರ್ಹ ಎಂದು ಹಲವು ತಜ್ಞರು ಪ್ರಶಂಸಿಸುತ್ತಿದ್ದಾರೆ.

  ರಾಜಸ್ಥಾನದಲ್ಲಿ ಇದುವರೆಗೂ ಕೊರೊನಾ ಸಂಬಂಧಿಸಿದ ಒಟ್ಟು ಸಾವುಗಳ ಸಂಖ್ಯೆ 1,917 ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ 1,98,747 ಕ್ಕೆ ಏರಿದ್ದು, ಪ್ರಸ್ತುತ ರಾಜ್ಯದಲ್ಲಿ 15,255 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
  Published by:MAshok Kumar
  First published: