HOME » NEWS » National-international » RAJASTHAN RURAL LOCAL BODY ELECTION RESULTS SNVS

Rajasthan Elections - ರೈತರ ಪ್ರತಿಭಟನೆ ಮಧ್ಯೆ ರಾಜಸ್ಥಾನ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿ ಗೆಲುವು

ರಾಜಸ್ಥಾನದಲ್ಲಿ ಚುನಾವಣೆಯಾದ 4,371 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 1,836, ಕಾಂಗ್ರೆಸ್ 1,718ರಲ್ಲಿ ಗೆಲುವು ಪಡೆದಿದೆ. 636 ಜಿಲ್ಲಾಪರಿಷದ್ ಸ್ಥಾನಗಳ ಪೈಕಿ ಬಿಜೆಪಿ 323 ಮತ್ತು ಕಾಂಗ್ರೆಸ್ 246 ಸ್ಥಾನಗಳನ್ನ ಜಯಿಸಿದೆ.

news18-kannada
Updated:December 9, 2020, 4:03 PM IST
Rajasthan Elections - ರೈತರ ಪ್ರತಿಭಟನೆ ಮಧ್ಯೆ ರಾಜಸ್ಥಾನ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿ ಗೆಲುವು
ರಾಜಸ್ಥಾನ ಚುನಾವಣೆ
  • Share this:
ಜೈಪುರ(ಡಿ. 09): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೇಶದ ಹಲವೆಡೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಅದರಲ್ಲೂ ಪಂಜಾಬ್ ಮತ್ತು ಹರಿಯಾಣದ ರೈತರ ಪ್ರತಿಭಟನೆ ತಾರಕದಲ್ಲಿದೆ. ಇದೇ ಹೊತ್ತಲ್ಲೇ ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜಸ್ಥಾನದಲ್ಲಿ ವಿಪಕ್ಷವಾಗಿರುವ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನ ಗೆದ್ದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ. ರಾಜಸ್ಥಾನದ 33 ಜಿಲ್ಲೆಗಳ ಪೈಕಿ 21 ಜಿಲ್ಲೆಗಳ 4371 ಪಂಚಾಯತ್ ಸಮಿತಿ ಮತ್ತು 636 ಜಿಲ್ಲಾ ಪರಿಷದ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. 4,371 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 1,836 ಸ್ಥಾನಗಳನ್ನ ಗೆದ್ದಿದೆ. ಕಾಂಗ್ರೆಸ್ ಪಕ್ಷ 1,718ರಲ್ಲಿ ಗೆಲುವು ಪಡೆದಿದೆ. 420 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷ, ಬಿಎಸ್​ಪಿ ಸೇರಿ ಇತರೆ ಪಕ್ಷಗಳು 20ಕ್ಕಿಂತ ಹೆಚ್ಚು ಪಂಚಾಯಿತಿ ಸಮಿತಿ ಸ್ಥಾನಗಳನ್ನ ಗೆದ್ದಿವೆ. ಇನ್ನು, 636 ಜಿಲ್ಲಾ ಪರಿಷದ್ ಸ್ಥಾನಗಳ ಪೈಕಿ ಬಿಜೆಪಿ 323 ಮತ್ತು ಕಾಂಗ್ರೆಸ್ 246 ಸ್ಥಾನಗಳನ್ನ ಜಯಿಸಿವೆ. ಇನ್ನೂ ಕೆಲ ಸ್ಥಾನಗಳ ಫಲಿತಾಂಶ ಬರಬೇಕಿದೆ.

ಇಂದಿನ ಮತ ಎಣಿಕೆ ಪ್ರಾರಂಭವಾಗಿ ಮೊದಲ ಕೆಲ ಸುತ್ತುಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಹೊಂದಿತ್ತು. ಆದರೆ, ನಂತರದ ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಗಳಿಸಿ ಅಧಿಕ ಸ್ಥಾನಗಳನ್ನ ಜಯಿಸಿದ್ದಾರೆ. ಇನ್ನೂ 300ಕ್ಕೂ ಪಂಚಾಯತ್ ಸಮಿತಿಗಳ ಫಲಿತಾಂಶ ಬರಬೇಕಿದೆ. ಅಗ್ರಸ್ಥಾನದಲ್ಲಿ ಏರುಪೇರಾಗಬಹುದಾದರೂ ಎರಡು ಪಕ್ಷಗಳ ಮಧ್ಯೆ ಹೆಚ್ಚು ಅಂತರವಂತೂ ಇರುವುದಿಲ್ಲ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು: ಸುಪ್ರೀಂ‌ ಆದೇಶ

ರಾಜಸ್ಥಾನದ ಅಜ್ಮೇರ್, ಬಾರ್ಮರ್, ಭಿಲವಾರ, ಬಿಕಾನೆರ್, ಚಿತ್ತೋರಗಡ್, ದುಂಗರ್​ಪುರ್, ಹನುಮಾನ್​ಗಡ್, ಜೈಸಲ್ಮೇರ್, ಪ್ರತಾಪ್​ಗಡ್, ಸಿಕಾರ್, ಟೋಂಕ್, ಉದೈಪುರ್ ಸೇರಿದಂತೆ 21 ಜಿಲ್ಲೆಗಳಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ನ. 23, 27, ಡಿ. 1 ಮತ್ತು 5 ಹೀಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೂರು ಹಂತಗಳ ಮತದಾನದ ವೇಳೆ ರಾಜಸ್ಥಾನದ ಪಕ್ಕದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗ್ರಾಮೀಣ ಚುನಾವಣೆ ರೈತರ ಅಭಿಪ್ರಾಯ ಸೂಚಿ ಎಂದೇ ಪರಿಗಣಿಸಲಾಗಿತ್ತು.

ಕಳೆದ ತಿಂಗಳು ನಡೆದ ರಾಜಸ್ಥಾನದ 6 ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. 560 ವಾರ್ಡ್​​ಗಳ ಪೈಕಿ ಕಾಂಗ್ರೆಸ್ 261, ಬಿಜೆಪಿ 242 ಸ್ಥಾನಗಳನ್ನ ಗೆದ್ದಿದ್ದವು. ಈ ಗೆಲುವಿನ ಆತ್ಮವಿಶ್ವಾಸದಲ್ಲಿ ಗ್ರಾಮೀಣ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವಿನ ಹುಮ್ಮಸ್ಸಿನಲ್ಲಿತ್ತು. ಅತ್ತ ಬಿಜೆಪಿಯೊಳಗೆ ಒಡಕುಗಳಿಂದ ದುರ್ಬಲದ ಸ್ಥಿತಿಯಲ್ಲಿತ್ತು. ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟವು ಬಿಜೆಪಿಯ ಮಿತ್ರಪಕ್ಷಗಳೂ ತಿರುಗಿಬೀಳುವಂತೆ ಮಾಡಿತ್ತು. ಈ ಸಂಕಷ್ಟದ ಸಮಯದಲ್ಲೂ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವುದು ಗಮನಾರ್ಹ ವಿಷಯ.

ಇದನ್ನೂ ಓದಿ: ಫೋರ್ಬ್ಸ್​ ಪಟ್ಟಿ ಬಿಡುಗಡೆ: ವಿಶ್ವದ ನೂರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ನಿರ್ಮಲಾ ಸೀತಾರಾಮನ್

ಇತ್ತೀಚೆಗೆ ನಡೆದ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಅಚ್ಚರಿ ಗೆಲುವು ಸಾಧಿಸಿತ್ತು. ಕಳೆದ ಬಾರಿ 4 ವಾರ್ಡ್ ಗೆದ್ದಿದ್ದ ಬಿಜೆಪಿ ಈ ಬಾರಿ 48 ವಾರ್ಡ್ ಗೆದ್ದು ಮಿಂಚು ಹರಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ಬಿಜೆಪಿ ಈಗ ಪಶ್ಚಿಮ ಬಂಗಾಳ ಚುನಾವಣೆಗೆ ಅಣಿಯಾಗುತ್ತಿದೆ.
Published by: Vijayasarthy SN
First published: December 9, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories