HOME » NEWS » National-international » RAJASTHAN PRIEST DIES AFTER BEING SET ON FIRE BY FIVE MEN AS KIN DEMAND ACTION AGAINST SHO SNVS

ರಾಜಸ್ಥಾನದಲ್ಲಿ ದೇವಸ್ಥಾನ ಅತಿಕ್ರಮಣಕ್ಕಾಗಿ ಅರ್ಚಕನ ಸಜೀವ ದಹನ

ದೇವಸ್ಥಾನದ ಜಾಗದ ವಿಚಾರವಾಗಿ ಐವರು ವ್ಯಕ್ತಿಗಳು ಅರ್ಚಕನ ಮೇಲೆ ಪೆಟ್ರೋಲ್ ಸುರಿದು ಸಜೀವವಾಗಿ ದಹಿಸಿದ್ದಾರೆ. ನಿನ್ನೆ ಈ ಅರ್ಚಕ ಮೃತಪಟ್ಟಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರಾಜಸ್ಥಾನದ ಕರೋಲಿ ಜಿಲ್ಲೆಯ ಬುಕ್ನಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

Vijayasarthy SN | news18
Updated:October 9, 2020, 4:37 PM IST
ರಾಜಸ್ಥಾನದಲ್ಲಿ ದೇವಸ್ಥಾನ ಅತಿಕ್ರಮಣಕ್ಕಾಗಿ ಅರ್ಚಕನ ಸಜೀವ ದಹನ
ಸಾಂದರ್ಭಿಕ ಚಿತ್ರ
  • News18
  • Last Updated: October 9, 2020, 4:37 PM IST
  • Share this:
ಜೈಪುರ(ಅ. 09): ದೇವಸ್ಥಾನವೊಂದನ್ನು ಅತಿಕ್ರಮಿಸುವ ಉದ್ದೇಶದಿಂದ ಐವರು ವ್ಯಕ್ತಿಗಳು ಅರ್ಚಕನನ್ನು ಸಜೀವವಾಗಿ ದಹಿಸಿ ಕೊಂದ ದಾರುಣ ಘಟನೆ ರಾಜಸ್ಥಾನದ ಕರೋಲಿ ಜಿಲ್ಲೆಯಲ್ಲಿ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಇಲ್ಲಿಯ ಬುಕ್ನಾ ಗ್ರಾಮದ ದೇವಸ್ಥಾನದ ಅರ್ಚಕ ಬಾಬು ಲಾಲ್ ವೈಷ್ಣವ್ ಎಂಬುವವರ ಮೇಲೆ ಐವರು ವ್ಯಕ್ತಿಗಳು ಮೊನ್ನೆ ಬುಧವಾರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪೂಜಾರಿಯನ್ನು ಜೈಪುರದ ಎಸ್​ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಗುರುವಾರ ರಾತ್ರಿ ವೈಷ್ಣವ್ ಮೃತಪಟ್ಟಿರುವುದು ತಿಳಿದುಬಂದಿದೆ. ಐವರು ಆರೋಪಿಗಳ ಪೈಕಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದೇವಸ್ಥಾನದ ಜಾಗವನ್ನು ಅತಿಕ್ರಮಿಸುವ ಉದ್ದೇಶದಿಂದ ಅವರು ಈ ಕೃತ್ಯ ಎಸಗಿರುವುದು ಅವರಿಬ್ಬರ ವಿಚಾರಣೆಯಿಂದ ಗೊತ್ತಾಗಿದೆ ಎಂದು ಕರೋಲಿ ಜಿಲ್ಲೆಯ ಎಸ್​ಪಿ ಮೃದುಲ್ ಕಚ್ಛಾವ ತಿಳಿಸಿದ್ದಾರೆ.

ಮೊನ್ನೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದೀಗ ವೈಷ್ಣವ್ ಮೃತಪಟ್ಟ ಬಳಿಕ ಕೊಲೆ ಪ್ರಕರಣವೆಂದು ಎಫ್​ಐಆರ್ ಬದಲಿಸಲಾಗಿದೆ. ಈ ಪ್ರಕರಣ ರಾಜಕೀಯ ಜಿದ್ದಾಜಿದ್ದಿಗೆ ಎಡೆ ಮಾಡಿಕೊಟ್ಟಿದ್ದು, ವಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: Nobel Peace Prize - ವಿಶ್ವಸಂಸ್ಥೆಯ ಆಹಾರ ವಿಭಾಗಕ್ಕೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ

ಕಾಂಗ್ರೆಸ್ ಆಡಳಿತದಲ್ಲಿ ಅಪರಾಧಿಗಳು ಕಾನೂನಿನ ಭಯ ಇಲ್ಲದೆ ಮುಕ್ತವಾಗಿದ್ದಾರೆ. ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ಗೃಹ ಇಲಾಖೆಯನ್ನ ನಿರ್ವಹಿಸುತ್ತಿದ್ದರೂ ಈ ಪರಿಸ್ಥಿತಿ ಇದೆ ಎಂದು ರಾಜಸ್ಥಾನ ಘಟಕದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೆ ಸಿಂಧ್ಯ ಅವರು ಈ ಘಟನೆಯನ್ನು ಬಲವಾಗಿ ಖಂಡಿಸಿದ್ಧಾರೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಏರುತ್ತಿರುವುದನ್ನು ಗಮನಿಸಿದರೆ ಇಲ್ಲಿ ಯಾವ ಹೆಣ್ಣು, ಮಗು, ಹಿರಿಯರು ಅಥವಾ ದಲಿತರು ಸುರಕ್ಷಿತವಾಗಿದ್ದಾರೆಂದು ಅನಿಸುವುದಿಲ್ಲ ಎಂದು ಸಿಂಧ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ಹಣಕಾಸು ವರ್ಷ ದೇಶದ ಜಿಡಿಪಿ ಶೇ. 9.5 ಕುಸಿತ: ಆರ್​ಬಿಐ ಅಧಿಕೃತ ಅಂದಾಜು

ಕಾಂಗ್ರೆಸ್ ಸರ್ಕಾರ ಈಗಲಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ. ಆರೋಪಿಗಳಿಗೆ ಕಠಿಣ ಸಜೆ ವಿಧಿಸುವಂತೆ ಮಾಡಿ ಅರ್ಚಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ ಎಂದು ವಸುಂಧರಾ ಆಗ್ರಹಿಸಿದ್ಧಾರೆ. ಇದೇ ವೇಳೆ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರ ಅವರು ಪ್ರತಿಕ್ರಿಯಿಸಿದ್ದು, ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನು, ಮೃತ ಅರ್ಚಕ ವೈಷ್ಣವ್ ಅವರ ಕುಟುಂಬ ಸದಸ್ಯರು ಕರೋಲಿ ಪೊಲೀಸ್ ಠಾಣೆಯ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಡಿಎಸ್​ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಬೇಕು. ಹಾಗೂ ಕುಟುಂಬ ಸದಸ್ಯರಿಗೆ ಉದ್ಯೋಗ ಹಾಗೂ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
Published by: Vijayasarthy SN
First published: October 9, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories