ನವದೆಹಲಿ (ಜು. 13): ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಕ್ಷಣಕ್ಷಣಕ್ಕೂ ಬಿರುಸುಪಡೆದುಕೊಳ್ಳುತ್ತಿವೆ. ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡು ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಜೊತೆ ಕೈ ಜೋಡಿಸಿದ್ದ ಕೆಲವು ಕಾಂಗ್ರೆಸ್ ಶಾಸಕರು ಪಕ್ಷ ತೊರೆಯಲು ನಿರ್ಧರಿಸಿದ್ದರು. ಇದರಿಂದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುವ ಭೀತಿಯನ್ನು ಎದುರಿಸುತ್ತಿದೆ. ಇದರ ನಡುವೆ ಇಂದು ಸಿಎಂ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದಿರುವ ಸಭೆಯಲ್ಲಿ ಕಾಂಗ್ರೆಸ್ನ 102 ಶಾಸಕರು ಪಾಲ್ಗೊಳ್ಳುವ ಮೂಲಕ ತಮ್ಮ ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಶಾಸಕರ ಪೈಕಿ ಸಚಿನ್ ಪೈಲಟ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಶಾಸಕರೂ ಇರುವುದರಿಂದ ಸಚಿನ್ ಪೈಲಟ್ ಬೆಂಬಲಿಗ ಶಾಸಕರ ಸಂಖ್ಯೆ ಕಡಿಮೆಯಾದಂತಾಗಿದೆ.
ರಾಜಸ್ಥಾನದ ಕಾಂಗ್ರೆಸ್ ನಾಯಕರ ವಿರುದ್ಧ ಬಂಡಾಯವೆದ್ದಿದ್ದ ಸಚಿನ್ ಪೈಲಟ್ ಪಕ್ಷ ತೊರೆಯಲು ನಿರ್ಧರಿಸಿದ್ದರು. ಅಲ್ಲದೆ ತಮಗೆ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬೆಂಬಲವೂ ಇದೆ ಎಂದು ಘೋಷಿಸಿದ್ದರು. ಕೆಲವು ತಿಂಗಳಿನಿಂದ ಸಚಿನ್ ಪೈಲಟ್ ಬಿಜೆಪಿಯ ಸಂಪರ್ಕದಲ್ಲಿದ್ದಾರೆ, ಕಾಂಗ್ರೆಸ್ ತೊರೆದ ಬಳಿಕ ತಮ್ಮ ಬೆಂಬಲಿಗರೊಂದಿಗೆ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಅದೆಲ್ಲದಕ್ಕೂ ಸ್ಪಷ್ಟನೆ ನೀಡಿದ್ದ ಸಚಿನ್ ಪೈಲಟ್ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಸೇರುವುದಿಲ್ಲ. ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರ ರಾಜಕೀಯ ನಿಲುವುಗಳಿಂದ ಅಸಮಾಧಾನಗೊಂಡು ಪಕ್ಷ ಬಿಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.
ನನ್ನ ರೀತಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ 30 ಶಾಸಕರು ನನಗೆ ಬೆಂಬಲ ನೀಡಿದ್ದಾರೆ ಎಂದು ಸಚಿನ್ ಪೈಲಟ್ ಹೇಳಿದ್ದರು. ಆದರೆ, ಆ 30 ಶಾಸಕರ ಪೈಕಿ ಕೆಲವರು ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನೆಯಲ್ಲಿ ನಡೆದಿರುವ ಸಿಎಲ್ಪಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ, ಸಚಿನ್ ಪೈಲಟ್ ಬಣದ ಸಂಖ್ಯೆ ಕ್ಷೀಣಿಸಿದಂತಾಗಿದೆ. ಗೆಹ್ಲೋಟ್ ಸರ್ಕಾರಕ್ಕಿರುವ 107 ಕಾಂಗ್ರೆಸ್ ಶಾಸಕರ ಬೆಂಬಲದಲ್ಲಿ ಇಂದು ಸಿಎಲ್ಪಿ ಸಭೆಯಲ್ಲಿ 102 ಶಾಸಕರು ಪಾಲ್ಗೊಂಡಿರುವುದರಿಂದ ಬಂಡಾಯ ಶಾಸಕರ ಬಣದಲ್ಲಿ ಸಚಿನ್ ಪೈಲಟ್ ಸೇರಿ ಕೇವಲ ಐವರು ಕೈ ಶಾಸಕರು ಉಳಿದಂತಾಗಿದೆ.
#WATCH Rajasthan: Chief Minister Ashok Gehlot, Congress leaders and party MLAs show victory sign, as they gather at CM's residence in Jaipur.
The Congress Legislative Party meeting has begun. pic.twitter.com/FowLM7CAGA
— ANI (@ANI) July 13, 2020
ಕಾಂಗ್ರೆಸ್ ಪಕ್ಷದ ಬಾಗಿಲು ತೆರೆದೇ ಇರಲಿದೆ:
ಸಿಎಲ್ಪಿ ಸಭೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ನಾಯಕರು ಇದೀಗ ಬಂಡಾಯ ಶಾಸಕರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ಜೊತೆಗೆ ಮತ್ತೆ ಕೈಜೋಡಿಸಲು ಮನಸಿರುವ ಶಾಸಕರು ನನಗೆ ಕರೆ ಮಾಡಬಹುದು, ಪಕ್ಷದ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಆಹ್ವಾನ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ