ರಾಜಸ್ಥಾನ (ಜುಲೈ 13); ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಈಗಾಗಲೇ ಬಂಡಾಯದ ಬಾವುಟ ಹಾರಿಸಿ ಕೇಂದ್ರ ಬಿಜೆಪಿ ನಾಯಕರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸುವ ಸಲುವಾಗಿ ದೆಹಲಿಗೆ ತಲುಪಿದ್ದಾರೆ. ಆದರೆ, ಈ ಬೆಳವಣಿಗೆಗಳ ಬೆನ್ನಿಗೆ ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಮೂರು ಜನ ಶಾಸಕರು ಭಾನುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ, "ತಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆನ್ನಿಗೆ ನಿಲ್ಲುತ್ತೇವೆ" ಎಂದು ಘೋಷಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಮಧ್ಯಪ್ರದೇಶದ ಬೆನ್ನಿಗೆ ರಾಜಸ್ಥಾನದಲ್ಲೂ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಇದರ ಭಾಗವಾಗಿ ಸಚಿನ್ ಪೈಲಟ್ ಈಗಾಗಲೇ ಬಿಜೆಪಿ ನಾಯಕರ ಜೊತೆಗೆ ಪಕ್ಷಾಂತರ ಮಾಡುವ ಸಲುವಾಗಿ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿನ್ ಪೈಲಟ್ ಜೊತೆಗೆ ರೋಹಿತ್ ಬೊಹ್ರಾ, ಡ್ಯಾನಿಶ್ ಅಬ್ರಾರ್ ಹಾಗೂ ಚೇತನ್ ದುಡಿ ಎಂಬ ಮೂವರು ಶಾಸಕರೂ ಸಹ ಕಳೆದ ಶನಿವಾರ ದೆಹಲಿಗೆ ಪ್ರಯಾಣಿಸಿದ್ದರು.
ಆದರೆ, ಸಚಿನ್ ಪೈಲಟ್ ಜೊತೆಗೆ ಶನಿವಾರ ದೆಹಲಿಗೆ ತೆರಳಿದ್ದ ಈ ಮೂವರೂ ಶಾಸಕರು, ಭಾನುವಾರ ಮಧ್ಯಾಹ್ನದ ಹೊತ್ತಿಗೆ ಜೈಪುರಕ್ಕೆ ಹಿಂದಿರುಗಿ ಸಂಜೆ ವೇಳೆಗೆ ಯೂ-ಟರ್ನ್ ತೆಗೆದುಕೊಂಡಿರುವುದು ಇದೀಗ ಹಲವಾರು ಅನುಮಾನಗಳಿಗೂ ಕಾರಣವಾಗಿದೆ.
ತಮ್ಮ ದೆಹಲಿ ಪ್ರವಾಸದ ಕುರಿತು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿರುವ ಶಾಸಕ ರೋಹಿತ್ ಬೊಹ್ರಾ, “ನನ್ನ ಕೆಲವು ವ್ಯಯಕ್ತಿಕ ಕೆಲಸಗಳಿಗಾಗಿ ನಾನು ದೆಹಲಿಗೆ ಭೇಟಿ ನೀಡಿದ್ದೆ. ಅಲ್ಲೇ ಉಳಿದ ಇಬ್ಬರೂ ಶಾಸಕರನ್ನೂ ಭೇಟಿಯಾಗಿದ್ದೆ. ಅಲ್ಲದೆ, ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹೀಗಾಗಿ ಪಕ್ಷಕ್ಕೆ ನಿಷ್ಠರಾಗಿರಲಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಉರುಳಿಸಲು ನಾವು ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದ್ದಾರೆ.
2018ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದ ಜೊತೆಗೆ ಅಧಿಕಾರದ ಗದ್ದುಗೆಗೆ ಏರಿತ್ತು. ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅನುಭವಿ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಸ್ಥಾನ ನೀಡಿತ್ತು. ಅಲ್ಲದೆ, ಸಚಿನ್ ಪೈಲಟ್ ಅವರನ್ನು ಸಮಾಧಾನಪಡಿಸುವ ಸಲುವಾಗಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಆದರೆ, ಇದರಿಂದ ಮುನಿಸಿಕೊಂಡಿದ್ದ ಸಚಿನ್ ಪೈಲಟ್ ಇದೀಗ ಬಿಜೆಪಿಗೆ ಪಕ್ಷಾಂತರ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಪ್ರಸ್ತುತ ಸಚಿನ್ ಪೈಲಟ್ ಬೆನ್ನಿಗೆ 19 ಶಾಸಕರ ಬಲವಿದೆ. 16ಜನ ಕಾಂಗ್ರೆಸ್ ಶಾಸಕರು ಹಾಗೂ ಮೂವರು ಸ್ವತಂತ್ಯ್ರ ಶಾಸಕರು ಸಚಿನ್ ಪೈಲಟ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಇಷ್ಟು ಸಂಖ್ಯೆ ಇದ್ದ ಮಾತ್ರಕ್ಕೆ ಸಚಿನ್ ಪೈಲಟ್ ಅವರಿಗೆ ಸಿಎಂ ಸ್ಥಾನ ನೀಡಲು ಬಿಜೆಪಿ ಮುಂದಾಗಲಾರದು. ಬಿಜೆಪಿ ಪಕ್ಷದ ಆಂತರಿಕ ನಾಯಕತ್ವ ಇದಕ್ಕೆ ಸಹಮತ ನೀಡುವುದಿಲ್ಲ. ಒಂದು ವೇಳೆ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆಗೆ ಏರಿದರೂ ಸಹ ವಸುಂಧರಾ ರಾಚೆ ಅವರೇ ಸಿಎಂ ಸ್ಥಾನದ ಮೊದಲ ಆಯ್ಕೆ ಎಂದೂ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ಈ ನಡುವೆ ಇಂದು ರಾಜಸ್ಥಾನ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ಸಭೆ ಕರೆದಿದ್ದು, ಅಶೋಕ್ ಗೆಹ್ಲೋಟ್ ಪಾಲಿಗೆ ಇಂದೊಂದು ಮಹತ್ವದ ಸಭೆ ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಯಾವೆಲ್ಲ ಶಾಸಕರು ಸಚಿನ್ ಪೈಲಟ್ ಪರವಾಗಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮಧ್ಯೆ ಸಭೆಗೆ ಹಾಜರಾಗದೆ ಇರುವವರಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ