ನವದೆಹಲಿ (ಜು.13): ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಒಂದೆಡೆ ಸರ್ಕಾರ ಉಳಿಸಿಕೊಳ್ಳಲು ಜೈಪುರದಲ್ಲಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇನ್ನೊಂದೆಡೆ ಬಂಡಾಯದ ಬಾವುಟ ಹಿಡಿದು ದೆಹಲಿ ತಲುಪಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ದೆಹಲಿಯಲ್ಲಿ ಇಂದು ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಷ್ಟು ಮಂದಿ ಶಾಸಕರು ಪಾಲ್ಗೊಳ್ಳುತ್ತಾರೆ ಎಂಬುದು ಕಾಂಗ್ರೆಸ್ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೆಯೇ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇ ಆದರೆ ಸರ್ಕಾರ ಬೀಳುತ್ತದೆ ಎಂಬುದು ರಾಜಕೀಯ ಪಂಡಿತರ ಮಾತು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಷ್ಟ್ರೀಯ ನಾಯಕರಾದ ಅಜಯ್ ಮಾಖನ್ ಮತ್ತು ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ ಮಹತ್ವದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಶಾಸಕರಿಂದ ಸಹಿ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಸಚಿನ್ ಪೈಲಟ್ ಬಳಿ 30 ಶಾಸಕರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರ ಪಟ್ಟಿಯ ಬಿಡುಗಡೆ ಆಗಿಲ್ಲ. 30 ಶಾಸಕರು ಯಾರು ಎಂಬುದು ತಿಳಿದುಬಂದಿಲ್ಲ. ಸಚಿನ್ ಪೈಲಟ್ ಜೊತೆ ದೆಹಲಿಗೆ ಬಂದಿದ್ದ ಮೂವರು ಶಾಸಕರು 'ತಾವು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ' ಎಂದು ಉಲ್ಟಾ ಹೊಡೆದಿದ್ದಾರೆ.
ಕುತೂಹಲ ಮೂಡಿಸಿದ ನಡ್ಡಾ ಭೇಟಿ:
ಈ ನಡುವೆ ಸಚಿನ್ ಪೈಲಟ್ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದು ಆ ಸಂದರ್ಭದಲ್ಲಿ ತಮ್ಮ ಬಳಿ ಇರುವ ಶಾಸಕರ ಸಂಖ್ಯೆ ಬಗ್ಗೆ ತಿಳಿಸಲಿದ್ದಾರೆ. ನಡ್ಡಾ ಭೇಟಿ ಬಳಿಕ ಮಾಧ್ಯಮಗಳಿಗೂ ಬಂಡಾಯ ಶಾಸಕರ ಪಟ್ಟಿ ಸಿಗುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ನಡೆದ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪರವಗಿ 109 ಶಾಸಕರು ಸಹಿ ಹಾಕಿದ್ದಾರೆ. ಕೆಲವರು ದೂರವಾಣಿ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದಲೂ ಕೆಲವು ಶಾಸಕರು ಕಾಂಗ್ರೆಸ್ ಕಡೆ ಬರಲು ಸಿದ್ಧರಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ. ಅಂತಿಮವಾಗಿ ಇಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಇಂದಿನ ಸಭೆ ಕಾಂಗ್ರೆಸ್ ಪಾಲಿಗೆ ಅತಿ ಮಹತ್ವದ್ದಾಗಿದೆ. ಅಲ್ಲದೆ, ಯಾವೆಲ್ಲ ಶಾಸಕರು ಸಚಿನ್ ಪೈಲಟ್ ಪರವಾಗಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮಧ್ಯೆ ಸಭೆಗೆ ಹಾಜರಾಗದೆ ಇರುವವರಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿ ತೆರಳಿದ್ದ ಪೈಲಟ್:
ಈ ಮೊದಲಿನಿಂದಲೂ ಸಚಿನ್ ಪೈಲಟ್ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ ನಂತರ ಅಶೋಕ್ಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಸಚಿನ್ ಹಾಗೂ ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಸಿಎಂ ಸ್ಥಾನ ಕೇಳಲು ಅವರು ಭಾನುವಾರ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ