ಗುಂಪು ಹತ್ಯೆ ಪ್ರಕರಣ: ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪೆಹ್ಲು ಖಾನ್ ಸೇರಿದಂತೆ ಪುತ್ರರ ವಿರುದ್ಧದ ಕೇಸ್​ ರದ್ದು

ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಲಾರಿ ಚಾಲಕ ಖಾನ್ ಮೊಹಮ್ಮದ್ ಹಾಗೂ ಪೆಹ್ಲು ಖಾನ್ ಅವರ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ರಾಜಸ್ಥಾನ ಹೈಕೋರ್ಟ್​, ಇಂದು ರದ್ದುಗೊಳಿಸಿ ಆದೇಶಿಸಿದೆ.

news18-kannada
Updated:October 30, 2019, 8:45 PM IST
ಗುಂಪು ಹತ್ಯೆ ಪ್ರಕರಣ: ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪೆಹ್ಲು ಖಾನ್ ಸೇರಿದಂತೆ ಪುತ್ರರ ವಿರುದ್ಧದ ಕೇಸ್​ ರದ್ದು
ಪೆಹ್ಲು ಖಾನ್
  • Share this:
ನವದೆಹಲಿ(ಅ.30): ಎರಡು ವರ್ಷಗಳ ಹಿಂದೆ ರಾಜಸ್ಥಾನದ ಆಲ್ವಾರ್​ನಲ್ಲಿ ಸಂಭವಿಸಿದ ಗುಂಪು ಹಲ್ಲೆಯಲ್ಲಿ ಪೆಹ್ಲೂ ಖಾನ್(55) ಹತ್ಯೆಯಾಗಿದ್ದರು. ಗೋ ಕಳ್ಳಸಾಗಾಣಿಕೆ ಮಾಡುತ್ತಿದ್ದನೆಂದು ಆರೋಪಿಸಿ ಗೋರಕ್ಷರು ಈತನ ಹತ್ಯೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಮೃತ ಪೆಹ್ಲೂ ಖಾನ್, ಮತ್ತವರ ಇಬ್ಬರು ಪುತ್ರರು ಹಾಗೂ ಲಾರಿ ಚಾಲಕನೋರ್ವನ ವಿರುದ್ಧವೇ ರಾಜಸ್ಥಾನ ಪೊಲೀಸರು ಗೋಕಳ್ಳಸಾಗಣೆ ಆರೋಪದಡಿ ಕೇಸ್​ ದಾಖಲಾಗಿದ್ದರು. ಈ ಕೇಸ್​ಗೆ​​ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ ರಾಜಸ್ಥಾನ ಹೈಕೋರ್ಟ್ ಬುಧವಾರ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಇಂದು ಮೃತ ಪೆಹ್ಲೂ ಖಾನ್ ಹಾಗೂ ಪುತ್ರರ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ಪಂಕಜ್ ಭಂಡಾರಿ ನೇತೃತ್ವದ ಏಕ ಸದಸ್ಯ ಪೀಠ, ಈ ಕೇಸ್​​ ರದ್ದುಗೊಳಿಸಿದೆ. ಪ್ರಕರಣಕ್ಕೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ನಾಲ್ವರ ವಿರುದ್ಧದ ಚಾರ್ಜ್​​ಶೀಟ್​ ಕೂಡ ರದ್ದುಗೊಳಿಸಿದೆ.

2017ರ ಏಪ್ರಿಲ್ 1ರಂದು ರೈತ ಪೆಹ್ಲು ಖಾನ್​ ರಾಜಸ್ಥಾನದಿಂದ ಹರಿಯಾಣಕ್ಕೆ ಪಿಕಪ್ ಟ್ರಕ್​ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದಾಗ ಗೋರಕ್ಷಕರ ಗುಂಪೊಂದು ವಾಹನವನ್ನು ಅಡ್ಡಗಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲು ಖಾನ್​ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆದರೆ, ಸಾಯುವ ಮುನ್ನ ಪೊಲೀಸರ ಎದುರು ಮರಣ ಹೇಳಿಕೆ ನೀಡಿದ್ದ ಪೆಹ್ಲು ಖಾನ್ ತಮ್ಮ ಮೇಲೆ ದಾಳಿ ನಡೆಸಿದ 6 ಜನರ ಹೆಸರನ್ನೂ ಉಲ್ಲೇಖಿಸಿದ್ದರು.

ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವ ಸಲುವಾಗಿ ಕಳೆದ ವರ್ಷ ಗೋವುಗಳ ಸಾಗಾಣಿಕೆಗೆ ಬಳಸಿದ್ದ ಪಿಕಪ್ ಟ್ರಕ್ ಮಾಲೀಕನ ವಿರುದ್ದ ರಾಜಸ್ಥಾನ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದರು. ರಾಜಸ್ಥಾನ ಬೋವಿನ್ ಅನಿಮಲ್ ಕಾಯ್ದೆ 1995ರ ಸೆಕ್ಷನ್​ 5,8 ಮತ್ತು 9ರ ಅಡಿಯಲ್ಲಿ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ಅಲ್ಲದೆ, ಪೆಹ್ಲು ಖಾನ್​ ಅವರ ಇಬ್ಬರು ಮಕ್ಕಳಾದ ಇರ್ಷಾದ್ ಮತ್ತು ಆರಿಫ್​ ವಿರುದ್ಧವೂ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ಆದರೆ, ಇದೀಗ ಇದೇ ಸೆಕ್ಷನ್​ ಅಡಿಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲು ಖಾನ್​ ವಿರುದ್ಧವೇ ಚಾರ್ಜ್​ಶೀಟ್​ ಸಲ್ಲಿಕೆಯಾಗಿರುವುದು ಅವರ ಕುಟುಂಬಕ್ಕೆ ಆಘಾತ ಉಂಟುಮಾಡಿತ್ತು.

ಇದನ್ನೂ ಓದಿ: ನಾಳೆ ಸರ್ದಾರ್ ಪಟೇಲ್‌ 144ನೇ ಜನ್ಮದಿನ: ‘ಏಕತಾ ದಿವಸ್‘​​ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಭಾಗಿ

ಕಳೆದ ವರ್ಷ ರಾಜಸ್ಥಾನದಲ್ಲಿ ಜಾರಿಯಲ್ಲಿದ್ದ ಬಿಜೆಪಿ ಸರ್ಕಾರ ಗೋ ರಕ್ಷಕರ ರಕ್ಷಣೆಗಾಗಿ ಸಾಕ್ಷ್ಯಾಧಾರದ ಕೊರತೆಯ ನೆಪವೊಡ್ಡಿ 6 ಜನ ಆರೊಪಿಗಳ ಹೆಸರನ್ನು ಬಿ ರಿಪೋರ್ಟ್​ ನಿಂದ ತೆಗೆದುಹಾಕಿತ್ತು. ಆದರೆ, ಇದೀಗ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದರೂ ಚಾರ್ಚ್​ಶೀಟ್​ನಲ್ಲಿ ಕೊಲೆಘಾತುಕರ ಹೆಸರನ್ನು ನಮೂದಿಸಿದೆ. ಆ ಕುರಿತು ತನಿಖೆ ನಡೆಸದೆ, ಪ್ರಕರಣದ ಇತ್ಯರ್ಥಕ್ಕೆ ನಮ್ಮ ಮೇಲೆ ಚಾರ್ಜ್​ಶೀಟ್​ ಸಲ್ಲಿಸಿ ಅನ್ಯಾಯ ಎಸಗಲಾಗುತ್ತಿದೆ. ಇದರಿಂದ ಕುಟುಂಬಸ್ಥರಿಗೆ ಅತೀವ ನೋವಾಗಿದೆ ಎಂದು ಪೆಹ್ಲು ಖಾನ್​ ಅವರ ಮಗ ಇರ್ಷಾದ್​ ಹೇಳಿಕೆ ನೀಡಿದ್ದರು.

ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಲಾರಿ ಚಾಲಕ ಖಾನ್ ಮೊಹಮ್ಮದ್ ಹಾಗೂ ಪೆಹ್ಲು ಖಾನ್ ಅವರ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ರಾಜಸ್ಥಾನ ಹೈಕೋರ್ಟ್​, ಇಂದು ರದ್ದುಗೊಳಿಸಿ ಆದೇಶಿಸಿದೆ.--------
First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ