• Home
  • »
  • News
  • »
  • national-international
  • »
  • Rajasthan: ಸಾಲ ತೀರಿಸಲು ಹಣವಿಲ್ಲ, ಸ್ಟಾಂಪ್ ಪೇಪರ್ ಮೇಲೆ ಹೆಣ್ಮಕ್ಕಳ ಹರಾಜು, ತಾಯಂದಿರ ಮೇಲೆ ಅತ್ಯಾಚಾರ

Rajasthan: ಸಾಲ ತೀರಿಸಲು ಹಣವಿಲ್ಲ, ಸ್ಟಾಂಪ್ ಪೇಪರ್ ಮೇಲೆ ಹೆಣ್ಮಕ್ಕಳ ಹರಾಜು, ತಾಯಂದಿರ ಮೇಲೆ ಅತ್ಯಾಚಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಿಲ್ವಾರಾ ಜಿಲ್ಲೆಯ ಪಾಂಡರ್ ಗ್ರಾಮದ ಹಲವು ಬಡಾವಣೆಗಳಲ್ಲಿ ಬಡ ಕುಟುಂಬದ ಹೆಣ್ಣುಮಕ್ಕಳನ್ನು ಜನರು ಸ್ಟಾಂಪ್ ಪೇಪರ್ ಮೇಲೆ ಖರೀದಿಸಿ ನಂತರ ಮಾರಾಟ ಮಾಡುತ್ತಾರೆ. ವಿದೇಶಗಳಲ್ಲದೆ ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಮುಂಬೈಗೆ ಕಳುಹಿಸಲಾಗಿದೆ.

  • Share this:

ಜೈಪುರ(ಅ.28): ರಾಜಸ್ಥಾನದಲ್ಲಿ (Rajasthan) ಸ್ಟಾಂಪ್ ಪೇಪರ್ ಮೂಲಕ ಹೆಣ್ಣು ಮಕ್ಕಳನ್ನು ಹರಾಜು ಹಾಕಿರುವ ಪ್ರಕರಣ ಬೆಳಕಿಗೆ ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ (Ashok GHehlot Govt) ನೋಟಿಸ್ ಜಾರಿ ಮಾಡಿದೆ. ಅಂತಹ ಅಪರಾಧಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಮತ್ತು ಅವುಗಳನ್ನು ತಡೆಯಲು ಯಾವ ಕಾರ್ಯವಿಧಾನವಿದೆ ಎಂದು NHRC ಸರ್ಕಾರವನ್ನು ಕೇಳಿದೆ. ರಾಜಸ್ಥಾನದ ಗ್ರಾಮ ಪಂಚಾಯತ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡುವಂತೆ ಆಯೋಗವು ಸರ್ಕಾರವನ್ನು ಕೇಳಿದೆ.


ಹೆಣ್ಣು ಮಕ್ಕಳನ್ನು ಕಾಗದವಿಟ್ಟು ಹರಾಜು, ತಾಯಂದಿರ ಮೇಲೆ ಅತ್ಯಾಚಾರ


ಇತ್ತೀಚಿನ ದೈನಿಕ್ ಭಾಸ್ಕರ್ ವರದಿಯಲ್ಲಿ, ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳನ್ನು ಹರಾಜು ಹಾಕಲು "ಜಾತಿ" ಪಂಚಾಯತ್‌ಗಳನ್ನು ಹೇಗೆ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಪತ್ರಿಕೆಯ ಪ್ರಕಾರ, ಬಡ ಕುಟುಂಬಗಳಿಗೆ ಸಾಲ ನೀಡುವಾಗ, ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಅವರ ಹೆಣ್ಣುಮಕ್ಕಳನ್ನು "ಸೆಟಲ್ಮೆಂಟ್" ಎಂದು ಹರಾಜು ಹಾಕಲಾಗುತ್ತದೆ ಎಂದು ಸ್ಟಾಂಪ್ ಪೇಪರ್ನಲ್ಲಿ ಬರೆಯಲಾಗುತ್ತದೆ. ಇದರ ಅಡಿಯಲ್ಲಿ, ಎಂಟರಿಂದ 18 ವರ್ಷದೊಳಗಿನ ಹುಡುಗಿಯರ ಹರಾಜು ನಿರ್ಧರಿಸಲಾಗುತ್ತದೆ.


ವರದಿಯು ಭಿಲ್ವಾರಾ ಜಿಲ್ಲೆಯ ಪಾಂಡರ್ ಗ್ರಾಮದ ಉದಾಹರಣೆಯನ್ನು ನೀಡುತ್ತದೆ. ಇಲ್ಲಿನ ಹಲವು ಬಡಾವಣೆಗಳಲ್ಲಿ ಬಡ ಕುಟುಂಬದ ಹೆಣ್ಣುಮಕ್ಕಳನ್ನು ಜನರು ಸ್ಟಾಂಪ್ ಪೇಪರ್ ಮೇಲೆ ಖರೀದಿಸಿ ನಂತರ ಮಾರಾಟ ಮಾಡುತ್ತಾರೆ. ವಿದೇಶಗಳಲ್ಲದೆ ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಮುಂಬೈಗೆ ಕಳುಹಿಸಲಾಗಿದೆ.


ಹರಾಜಿನಲ್ಲಿ ಹೆಣ್ಮಕ್ಕಳ ಖರೀದಿ


ಇಂದಿಗೂ ಭಿಲ್ವಾರಾದಲ್ಲಿ ಜನರು ಎರಡು ಪಕ್ಷಗಳ ನಡುವಿನ ವಿವಾದ ಅಥವಾ ಜಗಳವನ್ನು ಪರಿಹರಿಸಲು ಪೊಲೀಸರ ಮೊರೆ ಹೋಗುವುದಿಲ್ಲ ಎಂದು ಪತ್ರಿಕೆ ಹೇಳಿದೆ. ಈ ವಿವಾದಗಳು ಸಾಮಾನ್ಯವಾಗಿ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿವೆ. ಬಡ ಕುಟುಂಬಗಳಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ ಮಧ್ಯವರ್ತಿಗಳು ಪಂಚಾಯಿತಿಗಳ ಮೊರೆ ಹೋಗುತ್ತಾರೆ. ಹರಾಜಿನ ಮೂಲಕ ಹೆಣ್ಣು ಮಕ್ಕಳನ್ನು ಗುಲಾಮರನ್ನಾಗಿಸುವ ಕೆಲಸ ಶುರುವಾಗುವುದೇ ಇಲ್ಲಿಂದ. ಮಧ್ಯವರ್ತಿಗಳು ಸ್ಟಾಂಪ್ ಪೇಪರ್ ತೋರಿಸಿ ಬಾಕಿ ಸಾಲದ ವಿರುದ್ಧ ಹುಡುಗಿಯರನ್ನು ಹರಾಜು ಹಾಕುತ್ತಾರೆ. ಪಂಚಾಯಿತಿಗಳು ಸಾಲವನ್ನು ಪಾವತಿಸಲು ಕುಟುಂಬಕ್ಕೆ ಆದೇಶಿಸುತ್ತವೆ, ಇಲ್ಲದಿದ್ದರೆ ಮಗಳನ್ನು ಹರಾಜು ಹಾಕಲಾಗುತ್ತದೆ ಅಥವಾ ಆಕೆಯ ತಾಯಿಯ ಮೇಲೆ ಅತ್ಯಾಚಾರವೆಸಗಲಾಗುವುದು.


ಮೂರ್ಛೆ ಹೋಗುವವರೆಗೆ ಸಾಮೂಹಿಕ ಅತ್ಯಾಚಾರ


ವರದಿಯ ಪ್ರಕಾರ, ಇಂತಹ ಕ್ರೌರ್ಯಕ್ಕೆ ನಲುಗಿದ ಹುಡುಗಿಯೊಬ್ಬಳು ತನ್ನ ಕಷ್ಟವನ್ನು ವಿವರಿಸುತ್ತಾ ನನ್ನನ್ನು 21 ನೇ ವಯಸ್ಸಿನಲ್ಲಿ ಒತ್ತೆಯಾಳಾಗಿ ಮಾಡಲಾಯಿತು. ಓಡಿಹೋಗಲು ಯತ್ನಿಸಿದರೂ ಸಿಕ್ಕಿಬಿದ್ದಿದ್ದೇನೆ. ಒಮ್ಮೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಿಕ್ಕಿಬಿದ್ದಾಗ, ನಾನು ಮೂರ್ಛೆಹೋಗುವವರೆಗೂ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಪ್ರತಿದಿನವೂ ಸಾವಿಗಿಂತ ಕೆಟ್ಟ ದೃಶ್ಯ ಕಾಣುತ್ತಿದ್ದೆ. ಈ ಎಲ್ಲಾ ನಿರ್ಧಾರಗಳನ್ನು ಪಂಚಾಯತ್ ಒತ್ತಡದಲ್ಲಿ ತೆಗೆದುಕೊಳ್ಳಲಾಗಿದೆ ಎಂದಿದ್ದಾಳೆ.


ಇದನ್ನೂ ಓದಿ: 7 ವರ್ಷ ಹಗ್ಗಜಗ್ಗಾಟದ ನಿರ್ಭಯಾ ಅತ್ಯಾಚಾರ ಪ್ರಕರಣ ನೇಣು ಶಿಕ್ಷೆಯೊಂದಿಗೆ ಸಮಾಪ್ತಿ; ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ ಅಪರಾಧಿಗಳು


ಐವರು ಸಹೋದರಿಯರ ಮಾರಾಟ, ಅಪ್ಪನ ಸಾಲ ಇನ್ನೂ ತೀರಿಲ್ಲ


ಜಾತಿ ಪಂಚಾಯತಿಯಿಂದ ತಂದೆ ಲಕ್ಷಗಟ್ಟಲೆ ಸಾಲ ಮಾಡಿಕೊಂಡಿದ್ದಾರೆ ಎಂದು ಮತ್ತೊಬ್ಬ ಬಾಲಕಿ ಹೇಳಿದ್ದಾಳೆ. ಸಾಲದ ಹೊರೆ ಇಳಿಸಲು ತಂದೆ ತನ್ನ ತಂಗಿಯನ್ನು ಮಾರಿದ್ದಾನೆಂದು ವಿವರಿಸಿದ ಬಾಲಕಿ ಆ ನಂತರ ನನ್ನ ಮೂವರು ಅಕ್ಕಂದಿರನ್ನು ಮಾರಲಾಯಿತು. ಅಷ್ಟಾದರೂ ಸಾಲ ಮರುಪಾವತಿಯಾಗದ ಕಾರಣ ನನ್ನನ್ನು ಮಾರಾಟ ಮಾಡಿದ್ದಾರೆ. ಆಗ ನನಗೆ 12 ವರ್ಷ. ನನ್ನನ್ನು 15 ವರ್ಷಗಳ ಅವಧಿಗೆ 8 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ. ಖರೀದಿದಾರರು ನನ್ನನ್ನು ಮಧ್ಯಪ್ರದೇಶಕ್ಕೆ ಕರೆದೊಯ್ದರು. ಬದುಕು ನರಕವಾಗಿ ಪರಿಣಮಿಸಿತ್ತು. ನಾವು ಐವರೂ ಸಹೋದರಿಯರು ಗುಲಾಮರಾದೆವು. ಆದರೆ ಇಂದಿಗೂ ತಂದೆಯ ಋಣ ತೀರಿಲ್ಲ ಎಂದಿದ್ದಾಳೆ.


ಇದನ್ನೂ ಓದಿ:  ನಿರ್ಭಯಾ ತಾಯಿ ಪಾತ್ರವನ್ನು ನನಗೆ ಕೊಡಿ ಎಂದ ಸ್ಯಾಂಡಲ್​ವುಡ್​ ನಟಿ!


ತನ್ನ ತಂದೆಯ ಸಾಲದ ಕಾರಣದಿಂದ ತನ್ನನ್ನೂ ಮಾರಾಟ ಮಾಡಲಾಗಿದೆ ಎಂದು ಇನ್ನೊಬ್ಬ ಸಂತ್ರಸ್ತೆ ತಿಳಿಸಿದ್ದಾಳೆ. ಖರೀದಿದಾರರು ಆಗ್ರಾ, ಜೈಪುರ ಮುಂತಾದ ಸ್ಥಳಗಳಿಗೆ ಕರೆದೊಯ್ದರು. ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಯಿತು. ಇದರಿಂದಾಗಿ ಆಕೆ ಹಲವಾರು ಬಾರಿ ಗರ್ಭಿಣಿಯಾದಳು.


ಸಕ್ರಿಯಗೊಂಡ NHRC


ವರದಿ ಹೊರಬಂದ ನಂತರ, ಎನ್‌ಎಚ್‌ಆರ್‌ಸಿ ರಾಜಸ್ಥಾನ ಸರ್ಕಾರಕ್ಕೆ ಸ್ವಯಂ ಪ್ರೇರಿತವಾಗಿ ನೋಟಿಸ್ ಜಾರಿ ಮಾಡಿದೆ. ಈ ಕುರಿತು ವಿಸ್ತೃತ ವರದಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಎನ್‌ಎಚ್‌ಆರ್‌ಸಿ ವರದಿಯಲ್ಲಿ, ಈ ಅಪರಾಧದ ವಿರುದ್ಧ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ, ಮಾಡದಿದ್ದರೆ, ಅದನ್ನು ತಡೆಯಲು ಯಾವ ಕ್ರಿಯಾ ಯೋಜನೆ ಹೊಂದಿದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದೆ. ರಾಜಸ್ಥಾನದಲ್ಲಿ ಗ್ರಾಮ ಪಂಚಾಯಿತಿಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ರಾಜ್ಯ ಸರ್ಕಾರವೂ ಹೇಳಬೇಕಾಗಿದೆ.


ವರದಿ ಮಾಡಲು ರಾಜಸ್ಥಾನಕ್ಕೆ


ಇದಲ್ಲದೇ ಹೆಣ್ಣು ಮಕ್ಕಳ ಹರಾಜಿನಲ್ಲಿ ಭಾಗಿಯಾದವರು ಹಾಗೂ ಅವರ ಸಹಚರರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಏನು ಮತ್ತು ಎಷ್ಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಯಾವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ, ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ ಮತ್ತು ಈ ಅಪರಾಧ ವ್ಯವಸ್ಥೆಯಲ್ಲಿ ಭಾಗಿಯಾಗಿರುವ ಜನರನ್ನು ಬಂಧಿಸಲು ಅನುಸರಿಸಿದ ಕಾರ್ಯವಿಧಾನವನ್ನು ಪೊಲೀಸರು ವರದಿಯಲ್ಲಿ ತಿಳಿಸಬೇಕಾಗಿದೆ. ಇದಲ್ಲದೆ, ಅಂತಹ ಅಪರಾಧಗಳನ್ನು ನಿರ್ಲಕ್ಷಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಅಥವಾ ತೆಗೆದುಕೊಳ್ಳಲು ಪ್ರಸ್ತಾಪಿಸಲಾಗಿದೆ ಎಂಬುದನ್ನು ಸಹ ತಿಳಿಸಬೇಕಾಗುತ್ತದೆ. ಎನ್‌ಎಚ್‌ಆರ್‌ಸಿ ಖುದ್ದು ರಾಜಸ್ಥಾನಕ್ಕೆ ಹೋಗಿ ಈ ಅಪರಾಧಗಳನ್ನು ವರದಿ ಮಾಡುವುದಾಗಿ ಹೇಳಿದ್ದಾರೆ.

Published by:Precilla Olivia Dias
First published: