• Home
 • »
 • News
 • »
 • national-international
 • »
 • ರಾಜಸ್ಥಾನ ಬಿಕ್ಕಟ್ಟು: ಕಾಂಗ್ರೆಸ್​ನಿಂದ ಸೋಮವಾರ ದೇಶವ್ಯಾಪಿ ಪ್ರತಿಭಟನೆ; ಇವತ್ತು ಆನ್​ಲೈನ್ ಅಭಿಯಾನ

ರಾಜಸ್ಥಾನ ಬಿಕ್ಕಟ್ಟು: ಕಾಂಗ್ರೆಸ್​ನಿಂದ ಸೋಮವಾರ ದೇಶವ್ಯಾಪಿ ಪ್ರತಿಭಟನೆ; ಇವತ್ತು ಆನ್​ಲೈನ್ ಅಭಿಯಾನ

ರಾಜಸ್ಥಾನದ ಕಾಂಗ್ರೆಸ್ ನಾಯಕತ್ವ

ರಾಜಸ್ಥಾನದ ಕಾಂಗ್ರೆಸ್ ನಾಯಕತ್ವ

ಇದು ಪ್ರಜಾಪ್ರಭುತ್ವ ಉಳಿಸಲು ನಡೆಯುತ್ತಿರುವ ಹೋರಾಟವಾಗಿದೆ. ಇದಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧವಿದ್ದೇವೆ. ರಾಷ್ಟ್ರಪತಿ ಭವನಕ್ಕೆ ಬೇಕಾದರೂ ಹೋಗುತ್ತೇವೆ. ಅಗತ್ಯ ಬಿದ್ದರೆ ಪ್ರಧಾನಿ ನಿವಾಸದ ಎದುರು ಪ್ರತಿಭಟನೆಯನ್ನೂ ಮಾಡುತ್ತೇವೆ ಎಂದಿದ್ದಾರೆ ಸಿಎಂ ಅಶೋಕ್ ಗೆಹ್ಲೋಟ್.

 • Share this:

  ಜೈಪುರ್(ಜುಲೈ 26): ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಅಸಂವಿಧಾನಿಕವಾಗಿ ಉರುಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೈಪಾಳಯ ಇಂದು ಆನ್​ಲೈನ್ ಅಭಿಯಾನ ನಡೆಸಿದೆ. ಪ್ರಜಾತಂತ್ರಕ್ಕೆ ಧ್ವನಿ ನೀಡಿ ಎಂಬ ಈ ಆನ್​ಲೈನ್ ಅಭಿಯಾನ ಬೆಳಗ್ಗೆ 10 ಗಂಟೆಗೆ ಚಾಲನೆಯಾಗಲಿದೆ. ಹಾಗೆಯೇ, ಸೋಮವಾರ ದೇಶವ್ಯಾಪಿ ಪ್ರತಿಭಟನೆ ನಡೆಸಲೂ ಕಾಂಗ್ರೆಸ್ ನಿರ್ಧರಿಸಿದೆ. ವಿವಿಧ ರಾಜ್ಯಗಳ ರಾಜಭವನಗಳೆದುರು ಕಾಂಗ್ರೆಸ್ ಪಕ್ಷ ಪ್ರತಿಭಟನೆಗಳನ್ನ ಆಯೋಜಿಸುತ್ತಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಧಾನಿ ನಿವಾಸದೆದುರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ಧಾರೆ. ಅಷ್ಟೇ ಅಲ್ಲ, ಅಗತ್ಯ ಬಿದ್ದರೆ ತಾವು ರಾಷ್ಟ್ರಪತಿಗಳ ಬಳಿ ದೂರು ನೀಡಬೇಕಾಗಬಹುದು ಎಂದೂ ಎಚ್ಚರಿಕೆ ನೀಡಿದ್ದಾರೆ.


  ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಿನ್ನಮತದ ಬಿಸಿ ಎದುರಿಸುತ್ತಿದೆ. ಸಚಿನ್ ಪೈಲಟ್ ನೇತೃತ್ವದಲ್ಲಿ 19 ಶಾಸಕರು ಬಂಡಾಯ ಎದ್ದಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿ ಇತ್ಯರ್ಥ ಆಗುವವರೆಗೂ ಶಾಸಕರನ್ನ ಅನರ್ಹಗೊಳಿಸಲು ಅಸಾಧ್ಯವಾಗಿದೆ. ವಿಶ್ವಾಸಮತ ಯಾಚನೆಗೆ ಅಧಿವೇಶನ ಕರೆಯಲು ರಾಜ್ಯಪಾಲರು ಒಪ್ಪಿಗೆ ಕೊಟ್ಟಿಲ್ಲ. ಇದು ಸಿಎಂ ಅಶೋಕ್ ಗೆಹ್ಲೋಟ್ ಅವರನ್ನ ಹತಾಶಗೊಳಿಸಿದೆ.


  ಇದೇ ವಿಚಾರವಾಗಿ ಶನಿವಾರ ರಾಜಸ್ಥಾನದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದ್ದರು. ಬಿಜೆಪಿ ಪಕ್ಷದಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯ ಕೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


  ಇದನ್ನೂ ಓದಿ: ಕೋವಿಡ್ ವಕ್ಕರಿಸಿದ ಆರಂಭದಲ್ಲಿ ಭಾರತ ಮಾಡಿದ ತಪ್ಪೇನು? ಜ್ವರಲಕ್ಷಣದ ಹಿಂದೆ ಬಿದ್ದದ್ದು ಯಡವಟ್ಟಾಯಿತಾ?


  “ಕುದುರೆ ವ್ಯಾಪಾರ ಮಾಡಿ ಸರ್ಕಾರಗಳನ್ನ ಬೀಳಿಸುತ್ತಿದೆ. ಕೋವಿಡ್-19 ಬಿಕ್ಕಟ್ಟು, ಪ್ರವಾಹ, ಹಣಕಾಸು ಬಿಕ್ಕಟ್ಟಿನ ಸ್ಥಿತಿಯಲ್ಲೂ ಬಿಜೆಪಿ ಈ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿತನ…. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲೇ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಬೀಳಿಸಿದೆ. ಈಗ ರಾಜಸ್ಥಾನದಲ್ಲಿ ಆ ಪ್ರಯತ್ನ ನಡೆಯುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯುವ ಕಾರ್ಯದಲ್ಲಿ ಜಾಗತಿಕವಾಗಿ ಪ್ರಶಂಸೆಗೊಳಪಟ್ಟ ರಾಜಸ್ಥಾನ ಸರ್ಕಾರವನ್ನು ಬೀಳಿಸಲು ಬಿಜೆಪಿ ಕೆಟ್ಟ ರಾಜಕಾರಣ ಮಾಡುತ್ತಿದೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.


  ಇವತ್ತು ಬೆಳಗ್ಗೆ “ಪ್ರಜಾಪ್ರಭುತ್ವಕ್ಕೆ ಧ್ವನಿಯಾಗಿ” (ಸ್ಪೀಕ್ ಅಪ್ ಫಾರ್ ಡೆಮಾಕ್ರಸಿ) ಆನ್​ಲೈನ್ ಅಭಿಯಾನ ಪ್ರಾರಂಭವಾಗುತ್ತದೆ. ಇದರಲ್ಲಿ ವಿವಿಧ ರಾಜ್ಯಗಳ ಕಾಂಗ್ರೆಸ್ ನಾಯಕರು, ಸಂಸದರು, ಶಾಸಕರು ಮೊದಲಾದವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಇತ್ಯಾದಿ ಪೋಸ್ಟ್ ಮಾಡಲು ನಿರ್ಧರಿಸಲಾಗಿದೆ.


  ಇನ್ನು, ಅಗತ್ಯಬಿದ್ದರೆ ಕಾಂಗ್ರೆಸ್ ಕಾರ್ಯಕರ್ತರ ಜೊತೆ ರಾಷ್ಟ್ರಪತಿ ಭವನಕ್ಕೆ ಹೋಗಿ ರಾಷ್ಟ್ರಪತಿಗಳನ್ನ ಭೇಟಿಯಾಗಿ ಮಾತನಾಡುತ್ತೇವೆ. ಪ್ರಧಾನಿ ನಿವಾಸದೆದುರೂ ಪ್ರತಿಭಟನೆ ನಡೆಸಲು ಸಿದ್ಧವಿದ್ದೇವೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.


  ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ತಗುಲಿದ ಕೊರೋನಾ ಸೋಂಕು


  ಇದು ಪ್ರಜಾಪ್ರಭುತ್ವ ಉಳಿಸಲು ನಡೆಯುತ್ತಿರುವ ಹೋರಾಟವಾಗಿದೆ. ಇದಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧವಿದ್ದೇವೆ. ರಾಷ್ಟ್ರಪತಿ ಭವನಕ್ಕೆ ಬೇಕಾದರೂ ಹೋಗುತ್ತೇವೆ. ಅಗತ್ಯ ಬಿದ್ದರೆ ಪ್ರಧಾನಿ ನಿವಾಸದ ಎದುರು ಪ್ರತಿಭಟನೆಯನ್ನೂ ಮಾಡುತ್ತೇವೆ ಎಂದಿದ್ದಾರೆ.


  ನಾಳೆ ಸೋಮವಾರ ವಿಶ್ವಾಸಮತ ಯಾಚನೆಗೆ ಅಧಿವೇಶನ ಪ್ರಾರಂಭಿಸಲು ಗೆಹ್ಲೋಟ್ ನಿರ್ಧರಿಸಿದ್ದರು. ಆದರೆ, ರಾಜ್ಯಪಾಲರು ಈ ಪ್ರಸ್ತಾವವನ್ನು ತಿರಿಸ್ಕರಿಸಿದ್ದರು. ಈಗ ಮತ್ತೊಮ್ಮೆ ಸಂಪುಟ ಸಭೆ ಕರೆದ ಗೆಹ್ಲೋಟ್, ಜುಲೈ 31ಕ್ಕೆ ಅಧಿವೇಶನ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ರಾಜ್ಯಪಾಲರಿಗೆ ಈ ಹೊಸ ಪ್ರಸ್ತಾವ ಮುಂದಿಡಲಿದ್ದಾರೆ.

  Published by:Vijayasarthy SN
  First published: