ಆಪರೇಷನ್ ಕಮಲದ ಮೂಲಕ ಮಧ್ಯಪ್ರದೇಶದ ಕಮಲನಾಥ್ ಸಿಂಗ್ ಸರ್ಕಾರವನ್ನು ಬೀಳಿಸಿದ್ದ ಬಿಜೆಪಿ, ರಾಜಸ್ಥಾನದಲ್ಲಿನ ತಮ್ಮ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರತಿ ಶಾಸಕರಿಗೂ ತಲಾ 15 ಕೋಟಿ ರೂ.ಗಳ ಆಮಿಷವೊಡ್ಡಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿರೋಧ ಪಕ್ಷವಾದ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಅಶೋಕ್ ಗೆಹ್ಲೋಟ್, "COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಜನರಿಗಾಗಿ ಕೆಲಸ ಮಾಡುತ್ತಿದೆ. ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಆದರೆ, ಇಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ಬಿಜೆಪಿ ನಾಯಕರು ಸರ್ಕಾರ ಉರುಳಿಸುವ ಕುತಂತ್ರವನ್ನು ಹೆಣೆದಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಳೆದ ವರ್ಷ ಕರ್ನಾಟಕದಲ್ಲಿ ಮತ್ತು ಈ ವರ್ಷ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅನಧಿಕೃತವಾಗಿ, ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿದಿದೆ. ಇದೀಗ ಅಂತಹದ್ದೇ ದುರ್ವರ್ತನೆಯನ್ನು ರಾಜಸ್ಥಾನದಲ್ಲಿಯೂ ತೋರಿಸಲು ಮುಂದಾಗಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ತಲಾ 15 ಕೋಟಿ ರೂ. ನೀಡುವ ಆಮಿಷವೊಡ್ಡಿದ್ದಾರೆ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿವೆ.
ಒಟ್ಟಾರೆ ನಿರಂತರವಾಗಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಉರುಳಿಸಲು ಪ್ರಯತ್ನಿಸಿತ್ತಿದ್ದು, ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಲು ಮುಂದಾಗಿದ್ದಾರೆ" ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
"ಆಪರೇಷನ್ ಕಮಲವನ್ನು ಮೊದಲು ರಹಸ್ಯವಾಗಿ ಮಾಡಲಾಗುತ್ತಿತ್ತು. ಹಣದ ಹೊಳೆ ಹರಿಸುವ ಮೂಲಕ ಆಡಳಿತರೂಢ ಸರ್ಕಾರವನ್ನು ಉರುಳಿಸಲಾಗುತ್ತಿತ್ತು. ಆದರೆ,“2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದಲೂ ಇವರ ನಿಜ ಸ್ವರೂಪ ಬಟಾ ಬಯಲಾಗುತ್ತಿದೆ. ಮೊದಲು ರಹಸ್ಯವಾಗಿ ಮಾಡಿದ್ದನ್ನು ಈಗ ಬಹಿರಂಗವಾಗಿಯೇ ಮಾಡುತ್ತಿದ್ದಾರೆ. ಗೋವಾ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಏನೇನಾಗಿದೆ ಎಂಬುದನ್ನು ಈಗಾಗಲೇ ಭಾರತೀಯರು ನೋಡಿದ್ದಾರೆ.
ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಏಕೈಕ ಕಾರಣಕ್ಕೆ ನಾಚಿಕೆಯಿಲ್ಲದ ಬಿಜೆಪಿ ನಾಯಕರು ಗುಜರಾತ್‌ನಲ್ಲಿ ಏಳು ಶಾಸಕರನ್ನು ಖರೀದಿಸಲು ಮುಂದಾದದ್ದನ್ನು ಭಾರತೀಯರು ಇನ್ನೂ ಮರೆತಿಲ್ಲ. ಇವರು ರಾಜಸ್ಥಾನದಲ್ಲೂ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಅದನ್ನು ತಡೆದು ಅವರಿಗೆ ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾಠ ಕಲಿಸಲಿದ್ದೇವೆ" ಎಂದು ತಿಳಿಸಿದ್ದಾರೆ.
"ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಏನೆಲ್ಲಾ ಮಾಡುತ್ತಿದೆ. ಯಾವ ಯಾವ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಉರುಳಿಸಲಾಗುತ್ತಿದೆ ಎಂಬುದನ್ನು ಜನ ನೋಡುತ್ತಿದ್ದಾರೆ. ಇದೆಲ್ಲದಕ್ಕೂ ಒಟ್ಟಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಈ ದುರಹಂಕಾರಕ್ಕೆ ಜನರೇ ಕೊನೆ ಹಾಡಲಿದ್ದಾರೆ, ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಅಶೋಕ್ ಗೆಹ್ಲೋಟ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಬಿಜೆಪಿ ನಾಯಕರು "ರಾಜ್ಯದಲ್ಲಿ ನಾವು ಆಪರೇಷನ್ ಕಮಲ ಮಾಡಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ 20ಕ್ಕೂ ಹೆಚ್ಚು ಶಾಸಕರು ಸ್ವತಃ ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ" ಎಂದು ಹೇಳುವ ಮೂಲಕ ರಾಜಸ್ಥಾನದಲ್ಲಿ ಸರ್ಕಾರವನ್ನು ಉರುಳಿಸುವ ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ