HOME » NEWS » National-international » RAJASTHAN BJP SET TO MOVE NO CONFIDENCE MOTION AGAINST CONG GOVT ON FRIDAY SNVS

ರಾಜಸ್ಥಾನ ಸರ್ಕಾರದ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ನಿರ್ಧಾರ

ರಾಜಸ್ಥಾನ ಸರ್ಕಾರ ಕೋಮಾ ಸ್ಥಿತಿಗೆ ಜಾರಿದೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಕುಂದುತ್ತಿದೆ. ಈ ಹೊತ್ತಿನಲ್ಲಿ ವಿರೋಧ ಪಕ್ಷವಾಗಿ ನಾವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೇವೆ ಎಂದು ಬಿಜೆಪಿ ಹೇಳಿದೆ.


Updated:August 13, 2020, 5:30 PM IST
ರಾಜಸ್ಥಾನ ಸರ್ಕಾರದ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ನಿರ್ಧಾರ
ಅಶೋಕ್ ಗೆಹ್ಲೋಟ್
  • Share this:
ಜೈಪುರ(ಆ. 13): ಪಕ್ಷದೊಳಗಿನ ಸಚಿನ್ ಪೈಲಟ್ ಬಂಡಾಯದ ಬಿಕ್ಕಟ್ಟು ಶಮನಗೊಂಡು ಎಲ್ಲವೂ ಸರಿಯಾಯಿತು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನಿಟ್ಟುಸಿರು ಬಿಡುತ್ತಿರುವಂತೆಯೇ ಬಿಜೆಪಿ ಹೊಸ ಬಾಣ ಹೂಡುತ್ತಿದೆ. ನಾಳೆ, ಶುಕ್ರವಾರದಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಲು ಬಿಜೆಪಿ ನಿರ್ಧರಿಸಿದೆ. ಇವತ್ತು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ನಂತರ ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರು ಈ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದರು. ನಾಳೆ ಪ್ರಾರಂಭಗೊಳ್ಳುವು ವಿಧಾನಸಭಾ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದಾಗಿ ಬಿಜೆಪಿ ನಾಯಕ ಹೇಳಿದರು.

“ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವ್ಯವಸ್ಥೆ ಕುಸಿಯುತ್ತಿದೆ. ಇದಕ್ಕೆ ಬಿಜೆಪಿಯನ್ನ ದೂಷಿಸಲು ವಿಫಲ ಪ್ರಯತ್ನ ಮಾಡಲಾಯಿತು. ನಮ್ಮ ಅವಿಶ್ವಾಸ ನಿರ್ಣಯದ ಪ್ರಸ್ತಾವದಲ್ಲಿ ಇವೆಲ್ಲಾ ವಿಚಾರಗಳನ್ನ ಪ್ರಸ್ತಾಪಿಸುತ್ತೇವೆ” ಎಂದರು.

ಬಿಜೆಪಿಯ ರಾಜಸ್ಥಾನ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಅವರೂ ನಾಳೆ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದನ್ನು ಖಚಿತಪಡಿಸಿದರು.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಖಾಡಕ್ಕೆ ಕಮಲಾ ಹ್ಯಾರಿಸ್; ಡೆಮಾಕ್ರಾಟ್​ಗೆ ಹರಿದುಬಂತು ದೊಡ್ಡ ದೇಣಿಗೆ

ಅಶೋಕ್ ಗೆಹ್ಲೋಟ್ ಸರ್ಕಾರ ದ್ವಂದ್ವಗಳ ಸರ್ಕಾರವಾಗಿದೆ ಎಂದು ಟೀಕಿಸಿದ ಪೂನಿಯಾ, ರಾಜಸ್ಥಾನದ ಕಾಂಗ್ರೆಸ್​ನೊಳಗಿನ ರಾಜಕೀಯ ಬಿಕ್ಕಟ್ಟು ಶಮನಗೊಂಡಂತೆ ತೋರುತ್ತಿದೆಯಾದರೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬಂತಿಲ್ಲ. ಹಗ್ಗ-ಜಗ್ಗಾಟ ನಡೆದಿದೆ. ಒಬ್ಬರು ಅತ್ತ ಎಳೆಯುತ್ತಿದ್ದರೆ, ಇನ್ನೊಬ್ಬರು ಇತ್ತ ಎಳೆಯುತ್ತಿದ್ದಾರೆ. ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದರು.

ಇನ್ನು, ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ಮಾತನಾಡಿ, ರಾಜಸ್ಥಾನ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಹೀಗಾಗಿ, ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಅಸ್ಥಿರವಾಗಿದ್ದು ಜನರ ಕೆಲಸಗಳು ಆಗುತ್ತಿಲ್ಲ. ಅವಿಶ್ವಾಸ ನಿರ್ಣಯಕ್ಕೆ ನಾವು ಸಿದ್ಧತೆ ಮಾಡಿಕೊಂಡಿದ್ದೆವು. ಇವತ್ತು ಸಭೆಯಲ್ಲಿ ಎಲ್ಲಾ ಶಾಸಕರ ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರಕ್ಕೆ ಬರಲಾಯಿತು ಎಂದು ದಿಲಾವರ್ ತಿಳಿಸಿದರು.ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧ್ಯ, ರಾಜಸ್ಥಾನದ ಬಿಜೆಪಿ ಉಸ್ತುವಾರಿ ಅವಿನಾಶ್ ಖನ್ನ ಮತ್ತಿತರ ಹಿರಿಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: Indian Independence Day: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ ಮತ್ತು ಮಹತ್ವ

ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರದೊಳಗೆ ಕಳೆದ ತಿಂಗಳು ಬಂಡಾಯದ ಬಾವುಟ ಹಾರಿತ್ತು. ಸಚಿನ್ ಪೈಲಟ್ ಸೇರಿದಂತೆ 18 ಶಾಸಕರು ಬಂಡಾಯ ಎದ್ದಿದ್ದರು. ಸಚಿನ್ ಪೈಲಟ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಸಲಾಯಿತು. ಇವರೆಲ್ಲರೂ ಬಿಜೆಪಿ ಸೇರಲು ಹೊರಟಿದ್ದಾರೆಂದು ಆರೋಪಿಸಿ ಪಕ್ಷಾಂತರ ಕಾಯ್ದೆ ಅಡಿ ಶಾಸಕ ಸ್ಥಾನವನ್ನು ವಜಾಗೊಳಿಸುವ ಪ್ರಯತ್ನ ನಡೆದಿತ್ತು. ಕೊನೆಗೆ ಈ ಭಿನ್ನಮತೀಯರು ರಾಜಿಯಾಗಿ ಬಂಡಾಯದ ಬಾವುಟ ಕೆಳಗಿಳಿಸಿದ್ದಾರೆ. ಎಲ್ಲಾ ಕಾಂಗ್ರೆಸ್ ಶಾಸಕರು ಸರ್ಕಾರವನ್ನು ಬಲಪಡಿಸಲು ಕೆಲಸ ಮಾಡುತ್ತಾರೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಇತ್ತಿಚೆಗಷ್ಟೇ ತಿಳಿಸಿದ್ದರು.

Youtube Video


ಇದಾದ ನಂತರ ಈಗ ಬಿಜೆಪಿಯವರು ಅವಿಶ್ವಾಸ ನಿರ್ಣಯದ ಅಸ್ತ್ರ ಪ್ರಯೋಗಿಸಿದ್ದಾರೆ. ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ 124 ಸದಸ್ಯರ ಬೆಂಬಲ ಇದೆ. ಕಾಂಗ್ರೆಸ್​ನ 107 ಹಾಗೂ ಇತರ ಪಕ್ಷಗಳು ಮತ್ತು 12 ಪಕ್ಷೇತರ ಸೇರಿ 17 ಶಾಸಕರ ಬೆಂಬಲ ಇದೆ. ಇನ್ನೊಂದೆಡೆ, ಬಿಜೆಪಿ 72 ಮತ್ತು ಅದರ ಮಿತ್ರಪಕ್ಷ ಆರ್​ಎಲ್​ಪಿ 3 ಸ್ಥಾನಗಳನ್ನ ಮಾತ್ರ ಹೊಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಗೆಲುವು ದಕ್ಕೀತಾ ಎಂಬ ಪ್ರಶ್ನೆ ಇದೆ.
Published by: Vijayasarthy SN
First published: August 13, 2020, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories