ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಾರ್ಚ್ 20ಕ್ಕೆ ಕರ್ನಾಟಕದಲ್ಲಿ ರೈತ ಮಹಾಪಂಚಾಯತ್

ರೈತ ನಾಯಕ ರಾಕೇಶ್ ಟಿಕಾಯತ್ ಅವರು 'ಮಹಾತ್ಮ ಗಾಂಧೀಜಿಯವರ ಜನ್ಮ ದಿನವಾದ ಅಕ್ಟೋಬರ್ 2ರವರೆಗೆ ಕಾಲಾವಕಾಶ ನೀಡಲಿದ್ದೇವೆ. ಅಷ್ಟರಲ್ಲಿ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ದೇಶಾದ್ಯಂತ 40 ಲಕ್ಷ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದೇವೆ. ದೆಹಲಿಯ ಒಳಗಡೆಗೆ ಬಂದು ಇಂಡಿಯಾ ಗೇಟ್ ಬಳಿ ಉಳುಮೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಸಿದ್ದಾರೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ.

  • Share this:
ನವದೆಹಲಿ (ಫೆ. 27): ಕೇಂದ್ರ ಸರ್ಕಾರ ತಂದಿರುವ ರೈತರ ಪಾಲಿಗೆ ಮರಣ ಶಾಸನದಂತಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯ ಮುಂದುವರೆದ ಭಾಗವಾಗಿ ಉತ್ತರ ಭಾರತದ ಕೆಲವೆಡೆ 'ರೈತ ಮಹಾಪಂಚಾಯತ್' ಹಮ್ಮಿಕೊಳ್ಳಲಾಗಿದೆ. ಈಗ ದಕ್ಷಿಣ ಭಾರತಕ್ಕೂ ರೈತ ಮಹಾಪಂಚಾಯತ್ ಅನ್ನು ವಿಸ್ತರಿಸಲಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಮೊದಲ ರೈತ ಮಹಾಪಂಚಾಯತ್ ಕರ್ನಾಟಕದಲ್ಲಿ ನಡೆಯಲಿದೆ‌.

ಮಾರ್ಚ್ 20ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ಅನ್ನು ಹಮ್ಮಿಕೊಳ್ಳಲಾಗಿದೆ. 20 ಸಾವಿರ ರೈತರನ್ನು ಸೇರಿಸಿ ನಡೆಸುತ್ತಿರುವ ಮಹಾಪಂಚಾಯತ್ ನಲ್ಲಿ ಭಾಗವಹಿಸುವಂತೆ ಕರ್ನಾಟಕದ ರೈತರು ಶನಿವಾರ (ಫೆಬ್ರವರಿ 27) ದೆಹಲಿ ಹೋರಾಟದ ಮುಂಚೂಣಿ ನಾಯಕರಾದ ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್ ಮತ್ತಿತರರಿಗೆ ಆಹ್ವಾನ ನೀಡಿದ್ದಾರೆ. ಕರ್ನಾಟಕದಲ್ಲೂ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಯಶಸ್ವಿಯಾಗಿರುವಂತೆ ಮಹಾಪಂಚಾಯತ್ ಅನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ‌.

ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಪದಾಧಿಕಾರಿಗಳ ಜೊತೆ 11 ಸುತ್ತು ಮಾತುಕತೆ ಆಗಿ ಅಷ್ಟೂ ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಭಾರೀ ಪ್ರಭಾವಿ ಎಂದೇ ಹೇಳಲಾಗುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರೈತ ಮುಖಂಡರೊಂದಿಗೆ ಒಮ್ಮೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ. ಆದರೆ ಅವರು ಕೂಡ ರೈತರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಆದುದರಿಂದ ಇನ್ನೊಂದು ಸಭೆ ಯಾವಾಗ ನಡೆಯಬಹುದು ಎಂಬುದು ಮಹತ್ವದ ವಿಷಯವಾಗಿದೆ.

ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ಕಳೆದ 91 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಮುನ್ನಡೆಸುತ್ತಿದೆ. 'ರೈತ ವಿರೋಧಿಯಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದನ್ನು ಬಿಟ್ಟು ರೈತರು ಕೇಂದ್ರ ಸರ್ಕಾರದಿಂದ ಮತ್ತೇ ಇನ್ನೇನನ್ನೂ ನಿರೀಕ್ಷೆ ಮಾಡುವುದಿಲ್ಲ' ಎಂಬುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ. ಆದರೆ ಕೇಂದ್ರ ಸರ್ಕಾರ 'ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲ' ಎಂದು ಹೇಳಿದೆ. ಹಾಗಾಗಿ ಸಮಸ್ಯೆ ಜಟಿಲಗೊಂಡಿದೆ.

ಇದನ್ನು ಓದಿ: India Toy Fair – ಭಾರತದ ಮೊದಲ ಆಟಿಕೆ ಮೇಳ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ರೈತ ನಾಯಕ ರಾಕೇಶ್ ಟಿಕಾಯತ್ ಅವರು 'ಮಹಾತ್ಮ ಗಾಂಧೀಜಿಯವರ ಜನ್ಮ ದಿನವಾದ ಅಕ್ಟೋಬರ್ 2ರವರೆಗೆ ಕಾಲಾವಕಾಶ ನೀಡಲಿದ್ದೇವೆ. ಅಷ್ಟರಲ್ಲಿ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ದೇಶಾದ್ಯಂತ 40 ಲಕ್ಷ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದೇವೆ. ದೆಹಲಿಯ ಒಳಗಡೆಗೆ ಬಂದು ಇಂಡಿಯಾ ಗೇಟ್ ಬಳಿ ಉಳುಮೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ನವೆಂಬರ್ 26ರಂದು ದೆಹಲಿಗೆ ಬಂದಿದ್ದರು. ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿದ್ದರು. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೆಹಲಿ ಪೊಲೀಸರು ರೈತರನ್ನು ದೆಹಲಿಯ ಗಡಿಗಳಲ್ಲೇ ತಡೆದರು. ಅಂದಿನಿಂದ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈಗ ಬೇಸಿಗೆ ಶುರುವಾಗುತ್ತಿದೆ‌. ರೈತ ನಾಯಕರು 'ಬೇಸಿಗೆಗೆ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತೇವೆ, ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ' ಎಂದು ಹೇಳಿದ್ದಾರೆ.
Published by:HR Ramesh
First published: