ನವದೆಹಲಿ(ಅ. 05): ಗಣಕ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯ ಸ್ಥಾನಕ್ಕೇರುತ್ತಿದೆ. ನಮ್ಮ ದೇಶವನ್ನು ಡಿಜಿಟಲ್ ಸಮಾಜವನ್ನಾಗಿ ಮಾಡಲು ಬೇಕಾದ ಪ್ರಮುಖ ಅಂಶಗಳನ್ನೆಲ್ಲಾ ಸೇರಿಸಲಾಗುತ್ತಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟರು. ಇಂದು ಉದ್ಘಾಟನೆಗೊಂಡ ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಯುತ ಕೃತಕ ಬುದ್ಧಿಮತ್ತೆ 2020 (RAISE 2020) ಶೃಂಗ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಎಐ ತಂತ್ರಜ್ಞಾನದಲ್ಲಿ ಭಾರತ ವಿಶ್ವನಾಯಕನಾಗಲು ಬೇಕಾದ ಪರಿಕರಗಳು ಸಿದ್ಧವಿದೆ. ಸಮಯ ಕೂಡ ಪ್ರಶಸ್ತವಾಗಿದೆ ಎಂದು ಅವರು ಎಐ ಕ್ರಾಂತಿಗೆ ಕರೆ ನೀಡಿದರು.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮಹತ್ವವನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಆಧುನಿಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ನಾವು ನಮ್ಮ ಗ್ರಹದಲ್ಲಿ ಆದ ಬುದ್ಧಿವಂತ ಜೀವಿಗಳ ಉಗಮಕ್ಕೆ ಹೋಲಿಕೆ ಮಾಡಬಹುದು. ಮುಂಬರುವ ದಶಕಗಳಲ್ಲಿ ಇಡೀ ಮಾನವ ಸಮೂಹದ ಬುದ್ಧಿವಂತಿಕೆಯನ್ನು ಮೀರಿಸಿ ಜೈವಿಕೇತರ ಬುದ್ಧಿವಂತಿಕೆ ಬೆಳೆಯುತ್ತದೆ. ಆದರೆ, ಮಾನವನ ಬುದ್ಧಿಶಕ್ತಿಯನ್ನು ಎಐ ತುಂಬುತ್ತದೆಂದು ಭಾವಿಸಬಾರದು. ಅದು ಯಾವತ್ತೂ ಸಾಧ್ಯವಿಲ್ಲ. ಆದರೆ, ಮನುಷ್ಯರ ಮುಂದಿರುವ ಅತಿ ಸಂಕೀರ್ಣ ಮತ್ತು ತುರ್ತು ಸಮಸ್ಯೆಗಳನ್ನ ಪರಿಹರಿಸಲು ನಮಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಕಾರಿಯಾಗಬಲ್ಲುದು ಎಂದು ಮುಕೇಶ್ ಅಂಬಾನಿ ತಿಳಿಸಿದರು.
ನಮ್ಮ ಪ್ರಧಾನಿಯವರು ಐದು ಮಹತ್ವಾಕಾಂಕ್ಷಿ ಗುರಿಗಳನ್ನ ಮುಂದಿಟ್ಟಿದ್ದಾರೆ. ಮೊದಲನೆಯದು, ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಮಾಡುವುದು. ಎರಡನೆಯದು ಸ್ವಾವಂಲಂಬಿ ಭಾರತದ ನಿರ್ಮಾಣ. ಮೂರನೇಯದು, ಕೃಷಿಯ ಆಧುನೀಕರಣಗೊಳಿಸುವುದು. ನಾಲ್ಕನೆಯದು, ಉತ್ಕೃಷ್ಟ ಗುಣಮಟ್ಟದ ಹಾಗೂ ಎಲ್ಲರಿಗೂ ಕೈಗೆಟುಕುವ ಆರೋಗ್ಯ ವ್ಯವಸ್ಥೆ ನಿರ್ಮಿಸುವುದು. ಹಾಗೂ ಐದನೆಯದಾಗಿ ವಿಶ್ವದರ್ಜೆ ಶಿಕ್ಷಣ ವ್ಯವಸ್ಥೆ ರೂಪಿಸುವುದು. ಈ ಐದು ಗುರಿಗಳನ್ನ ತಲುಪಲು ಭಾರತಕ್ಕೆ ಎಐ ತಂತ್ರಜ್ಞಾನ ನೆರವಾಗುತ್ತದೆ ಎಂದು ಆರ್ಐಎಲ್ ಛೇರ್ಮನ್ ಆದ ಅವರು ಹೇಳಿದರು.
ಇದನ್ನೂ ಓದಿ: RAISE 2020: ಜಾಗತಿಕ AI ಶೃಂಗ ಸಭೆಗೆ ಚಾಲನೆ ನೀಡಿದ ಮೋದಿ, ಅಂಬಾನಿ
RAISE ಶೃಂಗ ಸಭೆಯ ಹೆಸರಿನಲ್ಲಿರುವಂತೆ ಇದು ನಮ್ಮ ಆಶಯ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಕೊರೋನಾ ಸಾಂಕ್ರಾಮಿಕದಿಂದ ಎದುರಾದ ಸಂಕಷ್ಟಗಳು ತಾತ್ಕಾಲಿಕವಾಗಿದೆ. ಇದರಿಂದ ಬೇಗ ಹೊರಬಂದು ಹೆಚ್ಚು ವೇಗದಲ್ಲಿ ಪ್ರಗತಿ ಸಾಧಿಸುವ ಛಾತಿ ಭಾರತಕ್ಕಿದೆ. ಈ ಶೃಂಗ ಸಭೆಯು ಉದ್ದೇಶವೇ ಭಾರತವನ್ನು ಭವಿಷ್ಯಕ್ಕೆ ಅಣಿಗೊಳಿಸುವುದಾಗಿದೆ. ಇದಕ್ಕೆ ಭಾರತದ ಉದ್ಯಮ ಸಿದ್ಧವಿದೆ. ಯುವಜನತೆಯೂ ತಯಾರಾಗಿದ್ದಾರೆ. ಬಲಿಷ್ಠ ನವ ಭಾರತ ನಿರ್ಮಾಣಕ್ಕೆ ಎಐ ತಂತ್ರಜ್ಞಾನ ಬೆಳೆಸುವ ಯೋಜನೆಗೆ ಇಡೀ ದೇಶವೇ ಸಿದ್ಧವಾಗಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು.
ಇದೇ ವೇಳೆ, ತಂತ್ರಜ್ಞಾನ ಸೌಕರ್ಯಗಳನ್ನ ಒದಗಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಆರು ವರ್ಷಗಳ ಹಿಂದೆ ನೀವು ಡಿಜಿಟಲ್ ಇಂಡಿಯಾ ಯೋಜನೆ ಪ್ರಾರಂಭಿಸಿ ಅದಕ್ಕೆ ಪ್ರಮುಖ ಆದ್ಯತೆ ಕೊಟ್ಟಿರಿ… ನಮ್ಮ ದೇಶದ ಶೇ. 99 ಜನರಿಗೆ 4ಜಿ ಬ್ರಾಡ್ಬ್ಯಾಂಡ್ ಸೇವೆ ಕಲ್ಪಿಸಲಾಗಿದೆ. ಡಾಟಾ ಬಳಕೆಯಲ್ಲಿ ವಿಶ್ವದಲ್ಲಿ 155ನೇ ಸ್ಥಾನದಲ್ಲಿದ್ದ ನಾವು ಈಗ ನಂ. 1 ಆಗಿದ್ದೇವೆ. ಈಗ 5ಜಿ ಬರುತ್ತಿದ್ದು, ಅದರಲ್ಲೂ ಭಾರತ ಮುಂಚೂಣಿಯಲ್ಲಿರಲಿದೆ” ಎಂದರು.
ಎಲ್ಲಾ ನಗರ, ಪಟ್ಟಣ, ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಅಳವಡಿಕೆಯ ಭಾರತ್ನೆಟ್ ಯೋಜನೆ; ಎಲ್ಲಾ ಅಗತ್ಯ ಡಿಜಿಟಲ್ ಸಾಧನ, ಸೆನ್ಸಾರ್ಗಳನ್ನ ದೇಶೀಯವಾಗಿ ತಯಾರಿಸಲು ಅನುವು ಮಾಡಿಕೊಡುವ ಮೇಕ್ ಇನ್ ಇಂಡಿಯಾ ಯೋಜನೆ; ವಿಶ್ವದರ್ಜೆ ಡಾಟಾ ಸೆಂಟರ್ಗಳಿರುವ ಭಾರತವನ್ನು ಪ್ರಬಲ ಕಂಪ್ಯೂಟರ್ ಶಕ್ತ ದೇಶವನ್ನಾಗಿ ಮಾಡಲಾಗುತ್ತಿದೆ. ಭಾರತವನ್ನು ಡಿಜಿಟಲ್ ಸಮಾಜವನ್ನಾಗಿ ಮಾಡಬಲ್ಲ ಪ್ರಮುಖ ಅಂಶಗಳು ಇವಾಗಿವೆ ಎಂದು ಅಂಬಾನಿ ವಿವರ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ