Indian Railways: ಇನ್ಮೇಲೆ  ಲೋಕಲ್ ಪ್ಯಾಸೆಂಜರ್ ರೈಲು ಪ್ರಯಾಣ ಕೂಡ ದುಬಾರಿ: ಅನಗತ್ಯ ಪ್ರಯಾಣ ತಡೆಗೆ ಈ ಕ್ರಮ ಎಂದ ರೈಲ್ವೆ ಇಲಾಖೆ

ಕಡಿಮೆ ದೂರದ ಅನಗತ್ಯ ರೈಲು ಪ್ರಯಾಣವನ್ನು ತಪ್ಪಿಸಲು ಪ್ರಯಾಣದ ದರವನ್ನು ಏರಿಕೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ಸಮಜಾಯಿಷಿ ನೀಡಿದೆ.

ಭಾರತೀಯ ರೈಲ್ವೆ.

ಭಾರತೀಯ ರೈಲ್ವೆ.

  • Share this:
    ಪ್ಯಾಸೆಂಜರ್ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಚಿವಾಲಯ ಶಾಕ್ ನೀಡಲು ಮುಂದಾಗಿದೆ. ಕೊರೋನಾದಿಂದ ಭಾರತೀಯ ರೈಲ್ವೆ ನಷ್ಟಕ್ಕೊಳಗಾಗಿದೆ. ಮತ್ತೊಂದು ಕಡೆ ಕೋವಿಡ್ ತಡೆಗಟ್ಟುವ ಕ್ರಮಗಳನ್ನೂ ಪಾಲಿಸಬೇಕಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಟಿಕೆಟ್ ದರ ಏರಿಕೆಗೆ ಮುಂದಾಗಿದೆ. ಕಡಿಮೆ ದೂರದ ಪ್ರದೇಶಗಳಿಗೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಈ ಬೆಲೆ ಏರಿಕೆ ಬಿಸಿ ತಟ್ಟಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಮಾರ್ಚ್​ನಲ್ಲಿಯೇ ಎಲ್ಲ ಪ್ಯಾಸೆಂಜರ್ ರೈಲುಗಳನ್ನು ಬಂದ್ ಮಾಡಲಾಗಿತ್ತು. ಬಹುತೇಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕೇವಲ ವಿಶೇಷ ರೈಲುಗಳನ್ನು ಮಾತ್ರವೇ ದೂರದ ಪ್ರಯಾಣದ ಸಂಚಾರಕ್ಕೆ ಅನುಮತಿಸಲಾಗಿತ್ತು. ಆದರೆ, ಇದೀಗ ಕಡಿಮೆ ದೂರದ ಪ್ರಯಾಣಿಕರ ರೈಲುಗಳನ್ನು ಸಹ ವಿಶೇಷ ರೈಲುಗಳಾಗಿ ಓಡಿಸಲು ನಿರ್ಣಯ ಕೈಗೊಳ್ಳಲಾಗಿದೆ.

    ಕೋವಿಡ್ -19 ಸಾಂಕ್ರಾಮಿಕ ರೋಗದ ವಿಶೇಷ ನಿಬಂಧನೆಯಂತೆ, ಈ ಪ್ಯಾಸೆಂಜರ್ ರೈಲುಗಳ ದರ ಹೆಚ್ಚಾಗಿದೆ. ಅಂದರೆ ಅದೇ ದೂರಕ್ಕೆ ಎಕ್ಸ್ಪ್ರೆಸ್ ರೈಲುಗಳ ಕಾಯ್ದಿರಿಸದ ಟಿಕೆಟ್​ಗಳ ಬೆಲೆಗೆ ಸಮನಾಗಿ ಈ ಪ್ಯಾಸೆಂಜರ್ ರೈಲುಗಳ ದರವನ್ನು ನಿಗದಿಪಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

    ಉದಾಹರಣೆಗೆ ಅಮೃತಸರದಿಂದ ಪಠಾಣ್​​ಕೋಟ್​​ ಟಿಕೆಟ್ ದರ ಈಗ 55 ರೂ. ಇದಕ್ಕೂ ಮೊದಲು ಇದರ ಬೆಲೆ 25 ರೂ. ಇತ್ತು. ಅದೇ ರೀತಿ, ಜಲಂಧರ್ ಸಿಟಿ ರೈಲ್ವೆ ನಿಲ್ದಾಣ ಮತ್ತು ಫಿರೋಜ್​ಪುರ್​ ನಡುವಿನ ಪ್ರಯಾಣಿಕರ ಟಿಕೆಟ್ ದರ ಈಗ 60 ರೂ., ಆದರೆ ಮೊದಲು 30 ರೂ. ಇತ್ತು, ಹೀಗೆ ಬಹುತೇಕ ಪ್ಯಾಸೆಂಜರ್ ರೈಲಿಗೆ ಮೊದಲಿರುವ ದರದ ದುಪ್ಪಟ್ಟು ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

    ಕಡಿಮೆ ದೂರದ ಅನಗತ್ಯ ರೈಲು ಪ್ರಯಾಣವನ್ನು ತಪ್ಪಿಸಲು ಪ್ರಯಾಣದ ದರವನ್ನು ಏರಿಕೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ಸಮಜಾಯಿಷಿ ನೀಡಿದೆ. ಹಾಗಾಗಿ ಕಡಿಮೆ ದೂರದ ಪ್ರಯಾಣಕ್ಕಾಗಿ ಪ್ರಯಾಣಿಕರು ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದಂತಾಗಿದೆ. ಇದರಿಂದ ರೈಲ್ವೆಯಲ್ಲಿ ಜನಸಂದಣಿ ಸಹ ಕಡಿಮೆಯಾಗುತ್ತದೆ ಎಂದು ಸಚಿವಾಲಯ ಹೇಳಿದೆ.

    ಇದನ್ನು ಓದಿ: ಕೆಎಸ್​ಆರ್​ಟಿಸಿಯಿಂದ ಕಾರ್ಗೋ ಯೋಜನೆ; ಬಿಎಂಟಿಸಿ ಟಿಕೆಟ್ ದರ ಏರಿಕೆ ಸುಳಿವು ನೀಡಿದ ಸಚಿವ ಲಕ್ಷಣ ಸವದಿ

    ಕಳೆದ ಕೆಲವು ದಿನಗಳಿಂದ ಹಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತಿದೆ. ಹೀಗಾಗಿ ಪ್ರಯಾಣಿಕರನ್ನು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೇ ರೈಲಿನಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಈ ದರ ಏರಿಕೆ ಸಹಾಯ ಆಗಲಿದೆ ಎಂದು ಸಚಿವಾಲಯ ತಿಳಿಸಿದೆ.

    ಲಾಕ್ಡೌನ್ ಸಂದರ್ಭಕ್ಕೆ ಹೋಲಿಸಿದರೆ ಈಗ ರೈಲು ಸಂಚಾರ ಕೊಂಚ ಹೆಚ್ಚಾಗಿದೆ ಎನ್ನಬಹುದು. ಸದ್ಯ ಪ್ರತಿದಿನ 1 ,250 ಮೇಲ್/ಎಕ್ಸಪ್ರೆಸ್ ಸಂಚರಿಸುತ್ತವೆ. ಅಲ್ಲದೇ 5,350 ಉಪನಗರಗಳಿಗೆ ಸಂಪರ್ಕಿಸುವ ರೈಲುಗಳು ಕೂಡ ಸಂಚಾರ ಮಾಡುತ್ತಿವೆ. 326ಕ್ಕೂ ಅಧಿಕ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ ಎಂಬ ಮಾಹಿತಿ ಹೊರ ಬಿದ್ದಿದೆ.

    ಇನ್ನು ಪ್ಯಾಸೆಂಜರ್ ರೈಲುಗಳೇ ವಿಶೇಷ ರೈಲುಗಳಾಗಿ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಸಂಚರಿಸುತ್ತಿವೆ. ಈ ರೈಲುಗಳಲ್ಲಿ ಕೊರೋನಾ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುತ್ತಿದೆ. ಈ ರೈಲುಗಳಲ್ಲಿ ಮುಂಗಡವಾಗಿ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರವೇ ಪ್ರಯಾಣ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

    ಈ ಹಿಂದೆ ಪ್ರಯಾಣಿಕರನ್ನು ಗಮನದಲ್ಲಿಟ್ಟಿಕೊಂಡು ರೈಲ್ವೆ ಇಲಾಖೆ ಕಡಿಮೆ ದರದಲ್ಲಿ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿತ್ತು. ಆದರೆ ಇದೀಗ ಅನಿವಾರ್ಯವಾಗಿ ದರ ಏರಿಕೆಗೆ ಮುಂದಾಗಿದೆ.
    Published by:Seema R
    First published: