ನವದೆಹಲಿ, ಮೇ 15: ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ (Congress Nava Sankalpa Shibir) ಇಂದು ಮಹತ್ವದ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Former Congress President Rahul Gandhi) ಅವರು ದೇಶಾದ್ಯಂತ ಪಾದಯಾತ್ರೆ (Padayatra) ಅಥವಾ ಬಸ್ ಹಾಗೂ ರೈಲ್ವೆ ಪ್ರಯಾಣ ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸಿಡಬ್ಲ್ಯೂಸಿಯಲ್ಲಿ ಅಂತಿಮ ನಿರ್ಧಾರ
ಮೂರು ದಿನಗಳಿಂದ ನಡೆಯುತ್ತಿರುವ ಕಾಂಗ್ರೆಸ್ ನವ ಸಂಕಲ್ಪ ಶಿಬಿರಕ್ಕೆ ಇಂದು ಕೊನೆಯ ದಿನ. ಆರು ವಿವಿಧ ಸಮಿತಿಗಳು ಮೂರು ದಿನಗಳಿಂದ ಚರ್ಚಿಸಿ ನೀಡಿದ ಸಲಹೆಗಳ ಬಗ್ಗೆ ಇಂದು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ರಾಹುಲ್ ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿಗೆ ಪ್ರಯಾಣ ಮಾಡಬೇಕು. ಸಾಧ್ಯವಾದರೆ ಪಾದಯಾತ್ರೆ ಮೂಲಕವೇ ಜನರನ್ನು ತಲುಪಬೇಕು. ಅಥವಾ ಬಸ್ ಮತ್ತು ರೈಲ್ವೆ ಮೂಲಕ ಪ್ರಯಾಣ ಮಾಡಿ ಅಲ್ಲಲ್ಲಿ ಜನರೊಂದಿಗೆ ಸಂವಾದ ಮಾಡಬೇಕು. 2024ರ ಲೋಕಸಭಾ ಚುನಾವಣೆ ವೇಳೆಗೆ ದೇಶಾದ್ಯಂತ ಒಂದು ಸುತ್ತಿನ ಪ್ರಯಾಣ ಮಾಡಬೇಕು ಎಂಬ ಸಲಹೆ ಕೇಳಿಬಂದಿದೆ. ಸ್ವತಃ ರಾಹುಲ್ ಗಾಂಧಿ ಅವರು ಕೂಡ ಜನರ ಬಳಿ ತೆರಳಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಇಂದು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Tripura ನೂತನ ಸಿಎಂ ಆಗಿ ಮಾಣಿಕ್ ಸಹಾ ನೇಮಕ
ಎಲ್ಲದಕ್ಕೂ ಪಾದಯಾತ್ರೆಯೇ ಪರಿಹಾರ
ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಎಲ್ಲವೂ 2024ರ ಲೋಕಸಭಾ ಚುನಾವಣೆ ಮತ್ತು ಅದಕ್ಕೂ ಮೊದಲು ಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ತ್ರಿಪುರ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ ಯಾವ ರೀತಿಯ ಪಕ್ಷ ಸಂಘಟನೆ ಆಗಬೇಕು? ವಿಧಾನಸಭಾ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಲೋಕಸಭಾ ಚುನಾವಣೆಗೆ ಪಕ್ಷದ ಪರ ವಾತಾವರಣ ನಿರ್ಮಿಸಬೇಕು ಎಂಬುದಾಗಿಯೇ ಇತ್ತು. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಕಟ್ಟಬೇಕು ಎಂಬ ಸಮಾಲೋಚನೆಯೂ ಆಗಿದೆ. ಇವೆಲ್ಲವುಗಳಿಗೂ ರಾಹುಲ್ ಗಾಂಧಿ ಪಾದಯಾತ್ರೆ ಅಥವಾ ಪ್ರಯಾಣ ಸಹಕಾರಿಯಾಗಲಿದೆ ಎಂಬ ಸಲಹೆಗಳು ಕೇಳಿಬಂದಿವೆ.
ಹಲವು ಆಯಾಮಗಳಲ್ಲಿ ನಡೆದ ಚರ್ಚೆ
ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಆರ್ಥಿಕ ಸ್ಥಿತಿಗತಿ, ಸಾಮಾಜಿಕವಾಗಿ ನಡೆಯುತ್ತಿರುವ ವಿದ್ಯಾಮಾನಗಳು, ಮಹಿಳೆಯರು, ಯುವಕರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುತ್ತಾರಾ ಪ್ರಿಯಾಂಕಾ ಗಾಂಧಿ? ಕಾಂಗ್ರೆಸ್ ನಾಯಕಿಗೆ ಡಿಕೆಶಿ ಆಹ್ವಾನ
ಈ ಎಲ್ಲಾ ವಿಷಯಗಳ ಮೇಲೆ ಪಕ್ಷದ ನೀತಿ, ನಿಲುವು ಹೇಗಿರಬೇಕು ಎಂಬ ಕಾರ್ಯಸೂಚಿ ರೂಪಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರು ಸಮಿತಿಗಳನ್ನು ರಚನೆ ಮಾಡಿದ್ದರು. ಆ ಸಮಿತಿಗಳು ನವ ಸಂಕಲ್ಪ ಶಿಬಿರದಲ್ಲಿ ಕೂಲಂಕಷವಾಗಿ ಚರ್ಚೆ ಮಾಡಿ ನೀಡುವ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ