ಬೆಂಗಳೂರು(ಫೆ.21): ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ರಾಹುಲ್ ಗಾಂಧಿಯವರನ್ನೇ ಆಯ್ಕೆ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಿಲ್ಲದ ಕಾರಣ ರಾಹುಲ್ ಗಾಂಧಿಯವರನ್ನೇ ಆಯ್ಕೆ ಮಾಡಬೇಕೆಂಬ ಒತ್ತಾಯವೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದಲೇ ಕೇಳಿ ಬಂದಿದೆ. ಹಾಗಾಗಿ ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆಗ ಮತ್ತೊಮ್ಮೆ ರಾಹುಲ್ ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿಸುವ ಸಾಧ್ಯತೆಗಳಿವೆ.
ಇತ್ತೀಚೆಗೆ
ಎಐಸಿಸಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಒತ್ತಾಯಿಸಿದ್ದರು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದ್ದರಿಂದ ಇತ್ತ ರಾಹುಲ್ ಗಾಂಧಿಯವರನ್ನೇ ಮರು ಆಯ್ಕೆ ಮಾಡಬಹುದು ಎಂದು ಕೆಲವರು ಪಟ್ಟು ಹಿಡಿದರೆ, ಅತ್ತ ಕಾಂಗ್ರೆಸ್ ಪಕ್ಷ ಮುನ್ನೆಡೆಸುವ ಸಾಮರ್ಥ್ಯ ಇದ್ದವರಿಗೆ ಅಧ್ಯಕ್ಷ ಗಾದಿ ನೀಡಿ ಎಂದು ಮತ್ತಲವರು ಒತ್ತಾಯಿಸಿದ್ದಾರೆ.
ಇನ್ನು, ಈ ಮಧ್ಯೆ ಇದೇ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ್, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಂದಿದೆ. ಸಮಿತಿ ಸದಸ್ಯರ ತೀರ್ಮಾನದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಮುನ್ನವೇ ಯಾವುದೇ ನಾಯಕರು ಈ ಬಗ್ಗೆ ಹೇಳಿಕೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸೋತು ಸೊರಗಿರುವ ಕಾಂಗ್ರೆಸ್ಗೆ ಚೈತನ್ಯ ತುಂಬಲು ಪಕ್ಷದ ನಾಯಕತ್ವ ಸ್ಥಾನಕ್ಕೆ ಚುನಾವಣೆ ನಡೆಸಿ; ಸಂಸದ ಶಶಿ ತರೂರ್ ಮನವಿ
ಈ ಹಿಂದೆಯೇ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮತ್ತೊಮ್ಮೆ ಸೋನಿಯಾ ಗಾಂಧಿಯವರನ್ನೇ ನೇಮಕಾತಿ ಮಾಡಲಾಯ್ತು. ಈ ಮೂಲಕ ಸುಮಾರು ದಿನಗಳಿಂದ ಬಾಕಿ ಉಳಿದಿದ್ದ ಅಧ್ಯಕ್ಷರ ಆಯ್ಕೆ ಗೊಂದಲಕ್ಕೆ ತೆರೆ ಎಳೆಯಲಾಗಿತ್ತು.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಈ ಹುದ್ದೆಗೆ ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸಾಲು ಸಾಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ನಂತರ ನಡೆದ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಕೊನೆಗೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯಲು ರಾಹುಲ್ ಗಾಂಧಿ ಒಪ್ಪದ ಕಾರಣ, ಮತ್ತೊಮ್ಮೆ ಸೋನಿಯಾ ಗಾಂಧಿ ಹೆಗಲಿಗೆ ಎಐಸಿಸಿ ಅಧ್ಯಕ್ಷೆ ಹುದ್ದೆ ವಹಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ