ಪ್ರಧಾನಿ ಮೋದಿಗೆ ಯುವಕರಿಂದ ದೊಣ್ಣೆಯೇಟು ಎಂದ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಈ ದೇಶವನ್ನು ಶಾಹೀನ್ ಬಾಗ್ ಆಗಿ ಪರಿವರ್ತಿಸುವ ಉದ್ದೇಶವಿದೆ. ಶಾಹೀನ್ ಬಾಗ್ ಪ್ರತಿಭಟನಾಕಾರರನ್ನಿಟ್ಟುಕೊಂಡು ನಮ್ಮ ಮೇಲೆ ರಾಜಕೀಯ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ಧಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

 • News18
 • Last Updated :
 • Share this:
  ನವದೆಹಲಿ(ಫೆ. 06): ಇನ್ನು ಆರು ತಿಂಗಳಲ್ಲಿ ದೇಶದ ಯುವಕರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಪ್ರಧಾನಿ ಮೋದಿಗೆ ಹೊಡೆಯಲು ಪ್ರಾರಂಭಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವಾಗ ನಿರುದ್ಯೋಗ ಸಮಸ್ಯೆ ಉಲ್ಲೇಖಿಸಿ ರಾಹುಲ್ ಗಾಂಧಿ ಈ ಮಾತುಗಳನ್ನಾಡಿದ್ದಾರೆ. ರಾಹುಲ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಇಡೀ ದೇಶವನ್ನು ಶಾಹೀನ್ ಬಾಗ್ ಆಗಿ ಮಾಡಲು ರಾಹುಲ್ ಚಿತಾವಣೆ ನಡೆಸಿದ್ದಾರೆಂದು ಟೀಕಿಸಿದೆ.

  ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ ರಾಹುಲ್ ಗಾಂಧಿ, “ಪ್ರಧಾನಿಗಳು ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಯುವಕರು ದೊಣ್ಣೆಗಳನ್ನು ಹಿಡಿದು ಅವರನ್ನು ಹೊಡೆಯುತ್ತಾರೆ. ಯುವಕರಿಗೆ ಉದ್ಯೋಗ ಕೊಡದ ಹೊರತು ದೇಶ ಪ್ರಗತಿ ಹೊಂದುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ” ಎಂದು ಹೇಳಿದ್ಧಾರೆ.

  ದೇಶಾದ್ಯಂತ ಸಿಎಎ, ಎನ್​ಆರ್​ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ನೀಡುವುದರ ಜೊತೆಗೆ ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆಗಳನ್ನ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡು ಕೇಂದ್ರದ ವಿರುದ್ಧ ದಾಳಿ ಮಾಡುತ್ತಿವೆ.

  ಇದನ್ನೂ ಓದಿ: ಸಿಎಎ ಮುಸ್ಲಿಮರಿಗಷ್ಟೇ ಅಲ್ಲ ದಲಿತರಿಗೂ ಮಾರಕ; ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಕಿಡಿ!

  “ಭಾರತದಲ್ಲಿ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿದೆ. ಕೇಂದ್ರದ ಬಜೆಟ್​ನಲ್ಲಿ ಇದರ ಬಗ್ಗೆ ಏನೂ ಪ್ರಸ್ತಾಪವಾಗಿಲ್ಲ. ದೇಶದ ಪ್ರತಿಯೊಬ್ಬ ಯುವಕನೂ ಉದ್ಯೋಗದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ವಾಸ್ತವ” ಎಂದು ರಾಹುಲ್ ಗಾಂಧಿ ನಿನ್ನೆ ಹೇಳಿದ್ದನ್ನು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

  ಇನ್ನು, ಆರು ತಿಂಗಳಲ್ಲಿ ಯುವಕರು ದೊಣ್ಣೆ ಹಿಡಿದು ಮೋದಿಗೆ ಹೊಡೆಯುತ್ತಾರೆ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ಧಾರೆ. ಈ ದೇಶವನ್ನು ಶಾಹೀನ್ ಬಾಗ್ ಆಗಿ ಪರಿವರ್ತಿಸುವ ಉದ್ದೇಶ ಇದೆ ಎಂದು ಪ್ರತ್ಯಾರೊಪ ಮಾಡಿದ್ದಾರೆ.

  “ಈ ದೇಶವನ್ನು ಶಾಹೀನ್ ಬಾಗ್ ಆಗಿ ಪರಿವರ್ತಿಸುವ ಉದ್ದೇಶವಿದೆ. ಶಾಹೀನ್ ಬಾಗ್ ಪ್ರತಿಭಟನಾಕಾರರನ್ನಿಟ್ಟುಕೊಂಡು ನಮ್ಮ ಮೇಲೆ ರಾಜಕೀಯ ದಾಳಿ ನಡೆಸುತ್ತಿದ್ದಾರೆ” ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ಧಾರೆ.

  ಇದನ್ನೂ ಓದಿ: ಶಾಹೀನ್ ಬಾಗ್ ಪ್ರತಿಭಟನೆಗಳನ್ನು ಖಿಲಾಫತ್ ಆಂದೋಲನಕ್ಕೆ ಹೋಲಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

  ಶಾಹೀನ್ ಬಾಗ್​ನಲ್ಲಿನ ತೀವ್ರತರದ ಪ್ರತಿಭಟನೆಗಳ ಮಧ್ಯೆ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಕಾವು ತಾರಕದಲ್ಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ತನ್ನ ಐದು ವರ್ಷಗಳ ಸಾಧನೆಯನ್ನ ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದೆ. ಬಿಜೆಪಿಯು ಕೇಜ್ರಿವಾಲ್ ಆಡಳಿತವನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಭದ್ರತೆಯ ವಿಚಾರವನ್ನಿಟ್ಟುಕೊಂಡು ಚುನಾವಣೆಯ ಪ್ರಚಾರ ಮಾಡುತ್ತಿದೆ. ಶಾಹೀನ್ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಎಲ್ಲರಿಗೂ ವಿವಿಧ ರೀತಿಯಲ್ಲಿ ರಾಜಕೀಯ ಅಸ್ತ್ರವಾಗಿವೆ.

  ದೆಹಲಿಯಲ್ಲಿ ನಡೆದಿರುವ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಆಮ್ ಆದ್ಮಿ ಪಕ್ಷ ನಿಚ್ಚಳವಾಗಿ ಬಹುಮತ ಸಾಧಿಸಬಹುದೆನ್ನಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹೀನಾಯ ಸೋಲನುಭವಿಸಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣೆಯತ್ತ ಹೆಚ್ಚಿನ ಗಮನ ಕೊಡದೇ ಇರುವುದು ಆಮ್ ಆದ್ಮಿ ಜೊತೆ ಅದು ಪರೋಕ್ಷ ಮೈತ್ರಿ ಮಾಡಿಕೊಂಡಿರಬಹುದಾದ ಸಾಧ್ಯತೆಯನ್ನು ಸೂಚಿಸುತ್ತದೆ. ಆರಂಭದ ಹಂತದಲ್ಲಿ ಹೆಚ್ಚು ಉತ್ಸಾಹ ತೋರದ ಬಿಜೆಪಿ ಈಗ ಶಾಹೀನ್ ಬಾಗ್ ಪ್ರತಿಭಟನೆ ಮುಂದುವರಿಯುತ್ತಿರುವಂತೆಯೇ ಗೆಲುವಿನ ವಾಸನೆ ಹಿಡಿದಂತೆ ಕಾರ್ಯಕರ್ತರ ದೊಡ್ಡ ಪಡೆಯನ್ನೇ ದೆಹಲಿ ಚುನಾವಣೆಗೆ ಕಳುಹಿಸಿದೆ.

  ಫೆ. 8ರಂದು ದೆಹಲಿಯ 70 ಕ್ಷೇತ್ರಗಳಿಗೆ ಚುನಾವಣೆಯ ನಡೆಯುತ್ತಿದೆ. ಫೆ. 11ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: