Punjab Elections: ಶೀಘ್ರವೇ ಕಾರ್ಯಕರ್ತರಿಂದ ಸಿಎಂ ಅಭ್ಯರ್ಥಿ ಯಾರೆಂಬುದು ನಿರ್ಧಾರ: ರಾಹುಲ್ ಗಾಂಧಿ

ಇಬ್ಬರು ವ್ಯಕ್ತಿಗಳನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಲು ಸಾಧ್ಯವಿಲ್ಲ. ಆದುದರಿಂದ ಸಿಎಂ ಯಾರಾಗಬೇಕೆಂದು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಇಬ್ಬರು ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ, (ಜ. 27): ಪಂಜಾಬ್ ವಿಧಾನಸಭಾ ಚುನಾವಣೆಯನ್ನು (Punjab Assembly Elections) ಗೆದ್ದೇ ಗೆಲ್ಲುವುದಾಗಿ ಕಾಂಗ್ರೆಸ್ (Congress) ವಿಶ್ವಾಸ ಇಟ್ಟುಕೊಂಡಿದೆ. ಆದರೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Chief Minister Charanjith Sing Chenni) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Punjab Congress President Navajoth Sing Sidhu) ನಡುವೆ ಉನ್ನತ ಹುದ್ದೆಯ ಮೇಲೆ ಕಣ್ಣಿದ್ದು ಮುಖ್ಯಮಂತ್ರಿ ಅಭ್ಯರ್ಥಿಯನ್ನು (Cheif Ministerial Candidate) ಘೋಷಣೆ ಮಾಡಬೇಕೆಂಬ ಭಾರೀ ಒತ್ತಡ ಉಂಟಾಗಿದೆ. ಈ‌ ಹಿನ್ನಲೆಯಲ್ಲಿ ಎಐಸಿಸಿಯ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ (AICC Former President and Member of Parliment Rahul Gandhi) ಅವರು 'ಯಾರು ಮುಖ್ಯಮಂತ್ರಿ ಆಗಬೇಕೆಂಬುದನ್ನು ಕಾರ್ಯಕರ್ತರು ಶೀಘ್ರವೇ ನಿರ್ಧರಿಸಲಿದ್ದಾರೆ' ಎಂದು ಹೇಳಿದ್ದಾರೆ.

ಜಲಂಧರ್ ರ್‍ಯಾಲಿಯಲ್ಲಿ ಸುಳಿವು ನೀಡಿದ ರಾಹುಲ್ ಗಾಂಧಿ
ಕೊರೋನಾ ಮತ್ತು ಓಮೈಕ್ರಾನ್ ಹಿನ್ನಲೆಯಲ್ಲಿ ಜನವರಿ 31ರವರೆಗೆ ಬಹಿರಂಗ ಸಭೆ, ಸಮಾರಂಭ, ಸಮಾವೇಶಗಳನ್ನು‌ ಆಯೋಜನೆ ಮಾಡುವಂತಿಲ್ಲ ಕೇಂದ್ರ ಚುನಾವಣಾ ಆಯೋಗ  ನಿರ್ಬಂಧ ವಿಧಿಸಿರುವುದರಿಂದ ರಾಜಕೀಯ ಪಕ್ಷಗಳು ಈಗ ಜನರನ್ನು ತಲುಪಲು ವಿಭಿನ್ನ ಮಾರ್ಗಗಳನ್ನು ಹುಡುಕಬೇಕಾಗಿದೆ. ಇದೇ ರೀತಿ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಎಲ್ಲಾ 117 ಅಭ್ಯರ್ಥಿಗಳು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಒಟ್ಟಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ‌ ಪೂಜೆ ಸಲ್ಲಿಸಿದರು. ಬಳಿಕ ರಾಹುಲ್ ಗಾಂಧಿ ಅವರು ಜಲಂಧರ್‌ನ ಮಿಥಾಪುರದಲ್ಲಿ "ನವಿ ಸೋಚ್ ನಯಾ ಪಂಜಾಬ್' ಎಂಬ ಹೆಸರಿನ ವರ್ಚುವಲ್ ರ್‍ಯಾಲಿ ಉದ್ದೇಶಿಸಿ ಭಾಷಣ ಮಾಡುತ್ತಾ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯ ವಿಷಯವನ್ನು ಉಲ್ಲೇಖಿಸಿದರು.

ಚರಣಜಿತ್ ಸಿಂಗ್ ಚನ್ನಿ ಅಥವಾ ನವಜೋತ್ ಸಿಂಗ್ ಸಿಧು
ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ನಾವು ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುತ್ತೇವೆ. ಕಾರ್ಯಕರ್ತರ ನಿರ್ಧಾರವನ್ನು ಚರಣಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ಒಪ್ಪಿಕೊಳ್ಳಬೇಕು. ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. ಇಬ್ಬರು ವ್ಯಕ್ತಿಗಳನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಸಾಧ್ಯವಿಲ್ಲ, ಒಬ್ಬರು ಮಾತ್ರ ಆಗಬಹುದು. ಈ‌‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಇಬ್ಬರು ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ. ಒಬ್ಬರು ಮುನ್ನಡೆಸಿದರೆ, ಮತ್ತೊಬ್ಬರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರ ಹೃದಯದಲ್ಲೂ ಕಾಂಗ್ರೆಸ್‌ ಚಿಂತನೆ ಇದೆ’ ಎಂದು ತಿಳಿಸಿದರು.‌ ನಂತರ ಟ್ವಿಟ್ ಮಾಡಿ 'ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಘೋಷಿಸಲಾಗುವುದು' ಎಂದು‌ ಕೂಡ ತಿಳಿಸಿದ್ದಾರೆ.

ಇದನ್ನು ಓದಿ: ಬಿಜೆಪಿಯ ಚುನಾವಣೋತ್ತರ ಮೈತ್ರಿ ಆಹ್ವಾನ ತಿರಸ್ಕರಿಸಿದ ರಾಷ್ಟ್ರೀಯ ಲೋಕದಳ

 ಓಟಿಗಾಗಿ ಒಟ್ಟಿಗೆ ಪೂಜೆ, ಒಟ್ಟಿಗೆ ಊಟ
ಇದಕ್ಕೂ ಮೊದಲು ಗುರುವಾರ ದೆಹಲಿಯಿಂದ ಅಮೃತಸರಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ನಲ್ಲಿ ಪಂಜಾಬ್ ಕಾಂಗ್ರೆಸಿನ ಎಲ್ಲಾ 117 ಅಭ್ಯರ್ಥಿಗಳು ಒಟ್ಟಾಗಿ ಪೂಜೆ ಸಲ್ಲಿಸಿದರು. ಬಳಿಕ ರಾಹುಲ್ ಗಾಂಧಿ ಅವರ ಜೊತೆ ಎಲ್ಲಾ 117 ಅಭ್ಯರ್ಥಿಗಳು 'ಲಾಂಗರ್' (ಉಪಹಾರ) ನಲ್ಲಿ ಪಾಲ್ಗೊಂಡಿದ್ದರು. ಇದಾದ ಮೇಲೆ ದುರ್ಗಿಯಾನ ದೇವಸ್ಥಾನಕ್ಕೆ ತೆರಳಿ ಅಲ್ಲಿ ಕೂಡ ಎಲ್ಲಾ ಅಭ್ಯರ್ಥಿಗಳು ಒಟ್ಟಾಗಿ ಪೂಜೆ ಸಲ್ಲಿಸಿದರು.‌ ನಂತರ ಭಗವಾನ್ ವಾಲ್ಮೀಕಿ ತೀರ್ಥಸ್ಥಳಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ತಂಡ ಅಲ್ಲೂ ಪೂಜೆ ಸಲ್ಲಿಸಿತು.‌ ಇದೊಂಥರಾ 'ಓಟಿಗಾಗಿ ಒಟ್ಟಿಗೆ ಪೂಜೆ, ಒಟ್ಟಿಗೆ ಊಟ' ಎನ್ನುವಂತಿತ್ತು. ರಾಹುಲ್ ಗಾಂಧಿ ಅವರ ಪಂಜಾಬ್ ಭೇಟಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಇದನ್ನು ಓದಿ: ಕೋವಿಡ್ ಲಸಿಕೆಗೆ ದರ ನಿಗದಿ; ಒಂದು ಡೋಸ್​​ಗೆ ಎಷ್ಟು ಗೊತ್ತಾ?

ಪಂಜಾಬ್ ಚುನಾವಣೆ ಮುಂದೂಡಿಕೆ
ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 14ರ ಬದಲು ಫೆಬ್ರವರಿ 20ರಂದು ಪಂಜಾಬ್​​​ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ನಿರ್ಧರಿಸಿದೆ. ಪಂಜಾಬಿನಲ್ಲಿ ಗುರು ರವಿದಾಸ್​ ಜಯಂತಿ ಅತ್ಯಂತ ದೊಡ್ಡ ಆಚರಣೆ. ಗುರು ರವಿದಾಸ್​ ಜಯಂತಿ ಆಚರಣೆಗಾಗಿ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ಫೆಬ್ರವರಿ 10 ರಿಂದ 16ರವರೆಗೆ ವಾರಣಾಸಿಗೆ ತೆರಳಲಿದ್ದಾರೆ. ಹೀಗೆ ಪ್ರವಾಸ ಕೈಗೊಳ್ಳುವ ಪರಿಶಿಷ್ಟ ಜಾತಿ ಸಮುದಾಯ ಮತದಾರರ ಸಂಖ್ಯೆ ಸುಮಾರು 20 ಪಕ್ಷ. ಪಂಜಾಬಿನಲ್ಲಿ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಮತದಾರರಿದ್ದು ಆ ಪೈಕಿ 20 ಲಕ್ಷದಷ್ಟು ಜನ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.

ಮತದಾನ ಮಾಡುವುದು ಅವರ ಸಾಂವಿಧಾನಿಕ ಹಕ್ಕು ಆದುದರಿಂದ ಮತದಾನದ ದಿನಾಂಕವನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ಪತ್ರದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆ ಮನವಿಗೆ ಸ್ಪಂದಿಸಿರುವ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 14ರಿಂದ 20ಕ್ಕೆ ಅಂದರೆ 6 ದಿನ ಮುಂದೂಡಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
Published by:Seema R
First published: