ನವದೆಹಲಿ(ಫೆ. 3): ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಕಡೆಗೂ ರೈತರೇ ಗೆಲ್ಲಲಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಈಗಲೇ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದು ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ರೈತರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರು ಈಗ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಯಾವತ್ತಿದ್ದರೂ ಕೇಂದ್ರ ಸರ್ಕಾರವೇ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು. ಆದುದರಿಂದ ಈಗಲೇ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ನಟಿ ಕಂಗನಾ ರಣಾವತ್ ರೈತರನ್ನು ಭಯೋತ್ಪಾದಕರು ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ದೇಶದಲ್ಲಿ ಶೇಕಡಾ 60ರಷ್ಟು ಜನ ಕೃಷಿಗೆ ಸಂಬಂಧಿಸಿದವರಾಗಿದ್ದಾರೆ. ಹಾಗಾದರೆ ದೇಶದ ಶೇಕಡಾ 60ರಷ್ಟು ಜನ ಭಯೋತ್ಪಾದಕರಾ? ಆರ್ ಎಸ್ ಎಸ್ ಗೆ ಸೇರಿದವರನ್ನು ಬಿಟ್ಟು ಉಳಿದವರೆಲ್ಲರೂ ಭಯೋತ್ಪಾದಕರಾ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಆದೇಶ ಅನುಸರಿಸುವಂತೆ ಟ್ವಿಟರ್ಗೆ ಕೇಂದ್ರದಿಂದ ನೋಟಿಸ್ ಜಾರಿ
ಇದಲ್ಲದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಅನುಕೂಲ ಆಗುವಂತಹ ಒಂದೇ ಒಂದು ಕಾರ್ಯಕ್ರಮ ಇಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ಬಗ್ಗೆ ಏಕಿಷ್ಟು ಸಿಟ್ಟು ಹೊಂದಿದ್ದಾರೆ? ರೈತರಿಲ್ಲದೆ ಈ ದೇಶವಿಲ್ಲ. ರೈತರನ್ನು ಹಾಳು ಮಾಡಿದರೆ ದೇಶವನ್ನು ಹಾಳು ಮಾಡಿದಂತೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮತ್ತು ಪೊಲೀಸರು ರೈತರಿಗೆ ಕಿರುಕುಳ ನೀಡುವ ಬಗ್ಗೆ ಮೊನ್ನೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ' ಎಂಬ ಮಾರ್ಮಿಕವಾದ ಮಾತನ್ನಾಡಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು 'ಪ್ರಧಾನ್ ಮಂತ್ರಿ ಜೀ, ಅಪನೆ ಕಿಸಾನೊ ಸೆ ಹೀ ಯುದ್ಧ್?’ (ಪ್ರಧಾನ ಮಂತ್ರಿಯವರೇ, ನಮ್ಮ ರೈತರೊಂದಿಗೇ ಯುದ್ಧವಾ?) ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ದೆಹಲಿ ಗಡಿಯಲ್ಲಿ ಪೊಲೀಸರು ನಿರ್ಮಿಸಿರುವ ಮುಳ್ಳು ತಂತಿಯುಳ್ಳ ಬೇಲಿ ಹಾಗೂ ಬ್ಯಾರಿಕೇಡ್ ಗೋಡೆಯ ವಿಡಿಯೋವನ್ನು ಹಂಚಿಕೊಂಡಿದ್ದರು.
ಸಂಸತ್ ಕಲಾಪದ ವೇಳೆ ಕೂಡ ದೆಹಲಿ ಗಡಿಗಳಲ್ಲಿ ಗೋಡೆ ನಿರ್ಮಿಸಿರುವ, ಮುಳ್ಳು ಬೇಲಿ ಹಾಕಿರುವ ಕೇಂದ್ರ ಸರ್ಕಾರದ ಅಮಾನುಷ ವರ್ತನೆ ಬಗ್ಗೆ ವಿರೋಧ ವ್ಯಕ್ತವಾಗಿತ್ತು.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಪದಾಧಿಕಾರಿಗಳ ಜೊತೆ 11 ಸುತ್ತು ಮಾತುಕತೆ ಆಗಿ ಅಷ್ಟೂ ಸುತ್ತಿನ ಮಾತುಕತೆ ವಿಫಲವಾಗಿದೆ. ರೈತರು ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ತಾವು ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ರೈತರ ಹೋರಾಟ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ರೈತರ ಜೊತೆ ಔಪಚಾರಿಕ ಚರ್ಚೆ ನಡೆಸುವ ಪ್ರಯತ್ನ ಮಾಡುತ್ತಿದೆ. ಆದರೆ ರೈತ ಸಂಘಟನೆಗಳನ್ನು ಮುನ್ನಡೆಸುತ್ತಿರುವ ಸಂಯುಕ್ತ್ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರ ಮತ್ತು'ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ' ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ