ನವದೆಹಲಿ(ಡಿ.17): ಅರುಣಾಚಲ ಪ್ರದೇಶದ (Arunachal Pradesh) ತವಾಂಗ್‌ನಲ್ಲಿ (Tawang) ಭಾರತ ಮತ್ತು ಚೀನಾ ಸೈನಿಕರ (China Army)ನಡುವಿನ ಘರ್ಷಣೆ ಬಳಿಕ ದೇಶದಲ್ಲಿ ಕೋಲಾಹಲ ಎದ್ದಿದೆ. ಮೊನ್ನೆಯಷ್ಟೇ ಸಂಸತ್ತಿನಲ್ಲಿ ಈ ವಿಷಯವನ್ನು ಏರುದನಿಯಲ್ಲಿ ಪ್ರಸ್ತಾಪಿಸಿದ್ದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುತ್ತಿಗೆ ಹಾಕಿದ್ದವು. ಇದೀಗ ಶುಕ್ರವಾರ (ಡಿಸೆಂಬರ್ 16) ಈ ವಿಚಾರವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆ ಬಳಿಕ ಗದ್ದಲ ಎದ್ದಿದೆ. ಚೀನಾದೊಂದಿಗಿನ ಯುದ್ಧದ ಬೆದರಿಕೆಯನ್ನು ಭಾರತ ನಿರ್ಲಕ್ಷಿಸುತ್ತಿದೆ ಎಂದು ರಾಹುಲ್ ಗಾಂಧಿ (Rahul gandhi) ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಅವರು ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದ್ದಾರೆ ಎಂದು ಆರೋಪಿಸಿದ್ದು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹೆಸರನ್ನೂ ಪ್ರಸ್ತಾಪಿಸಿದೆ. ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳು ಹೀಗಿವೆ.
1. ಭಾರತದ ಗಡಿಯಲ್ಲಿ ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಮತ್ತು ಭಾರತ ಸರ್ಕಾರ ನಿದ್ರಿಸುತ್ತಿದೆ. ಅಪಾಯವನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ. ಚೀನಾ 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ, 20 ಭಾರತೀಯ ಸೈನಿಕರನ್ನು ಕೊಂದಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ನಮ್ಮ ಯೋಧರನ್ನು ಥಳಿಸುತ್ತಿದೆ ಎಂದೂ ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.
2. ಭಾರತ್ ಜೋಡೋ ಯಾತ್ರೆ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಜೈಪುರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚೀನಾದ ಬೆದರಿಕೆ ನನಗೆ ಸ್ಪಷ್ಟವಾಗಿದೆ. ಎರಡು-ಮೂರು ವರ್ಷಗಳಿಂದ ಇದನ್ನೇ ಹೇಳುತ್ತಿದ್ದೇನೆ, ಇದು ಸ್ಪಷ್ಟವಾಗಿದೆ ಮತ್ತು ಕೇಂದ್ರ ಸರ್ಕಾರ ಅದನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರ ಅದನ್ನು ನಿರ್ಲಕ್ಷಿಸುತ್ತಿದೆ, ಆದರೆ ಆ ಅಪಾಯವನ್ನು ಮರೆಮಾಡಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ.
Indian Army: ರಫೇಲ್, ಸುಖೋಯ್ ಚಿನೂಕ್: ಚೀನಾ ಗಡಿಯಲ್ಲಿ IAF ಯುದ್ಧ ವಿಮಾನಗಳ ಗುಡುಗು!
3. ಭಾರತದ ಗಡಿಯಲ್ಲಿ ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅವರ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಸಂಪೂರ್ಣ ಆಕ್ರಮಣಕಾರಿ ಸಿದ್ಧತೆ ಲಡಾಖ್ ಕಡೆಗೆ ಮತ್ತು ಅರುಣಾಚಲದ ಕಡೆಗೆ ನಡೆಯುತ್ತಿದೆ. ಭಾರತ ಸರ್ಕಾರ ನಿದ್ರಿಸುತ್ತಿದೆ. ಸರ್ಕಾರವು ಚೀನಾ ಸಂಬಂಧಿತ ವಿಷಯಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ, ಆದರೆ ಅದನ್ನು ಮರೆಮಾಡಲು ಸಾಧ್ಯವಿಲ್ಲ. ನಮ್ಮ ವಿದೇಶಾಂಗ ಸಚಿವರು ತಮ್ಮ ತಿಳುವಳಿಕೆಯನ್ನು ಆಳಗೊಳಿಸಬೇಕು.
4. ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಅವರ ಅಜ್ಜ ಮಲಗಿದ್ದರು. ಅವರು ನಿದ್ದೆ ಮಾಡುವಾಗ ಭಾರತದ 37 ಸಾವಿರ ಚದರ ಕಿ.ಮೀ. ಹಳ್ಳಿಯನ್ನೇ ನೀಡಿದ್ದರು. ಆ ನಂತರ ರಾಹುಲ್ ಗಾಂಧಿ ಚೀನಾದೊಂದಿಗೆ ಸ್ನೇಹ ಬೆಳೆಸಬೇಕು ಎಂದು ಭಾವಿಸಿದ್ದರು, ಈಗ ಸ್ನೇಹವು ಅದೆಷ್ಟು ಆಳವಾಗಿದೆ ಎಂದರೆ, ಚೀನಾ ಏನು ಮಾಡಲಿದೆ ಎಂಬುದು ಅವರಿಗೆ ತಿಳಿದಿದೆ. ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ 1.35 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಆದರೆ ಈಗ ಮೊದಲಿನಂತಿಲ್ಲ, ನೆಹರೂ ಭಾರತ ಅಲ್ಲ ಮೋದಿ ಭಾರತ ದೇಶವನ್ನು ರಕ್ಷಿಸಲು ಸೇನೆಗೆ ಮುಕ್ತ ಹಸ್ತವಿದೆ. ನಮ್ಮ ಸೈನ್ಯವು ಆಕ್ರಮಣ ನಡೆಸಿ ಕೊಲ್ಲುತ್ತದೆ ಎಂದಿದ್ದಾರೆ.
5. ರಾಹುಲ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಪ್ರತಿಕ್ರಿಯಿಸಿದ್ದಾರೆ. ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣ ತೆಗೆದುಕೊಂಡಿದ್ದು ಭ್ರಷ್ಟಾಚಾರವಾಗಿದೆ ಎಂದರು. ನೆಹರು ಹಾಗೂ ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಭೂಮಿ ಹೇಗೆ ಚೀನಾ ಪಾಲಾಯಿತು ಎಂಬುದು ಎಲ್ಲರಿಗೂ ಗೊತ್ತು. ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಬಾರದು ಎಂದೂ ತಿಳಿಸಿದ್ದಾರೆ.
6. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೂಡ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು. ರಾಹುಲ್ ಗಾಂಧಿ ಚೀನಾದ ಮೇಲಿನ ಪ್ರೀತಿಯಲ್ಲಿ ಎಲ್ಲ ಮಿತಿಗಳನ್ನು ದಾಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ವೀಡಿಯೋ ಸಾಕ್ಷ್ಯಗಳ ಹೊರತಾಗಿಯೂ, ಭಾರತೀಯ ಸೈನಿಕರನ್ನು ಚೀನಾದವರು ಹೊಡೆದಿದ್ದಾರೆ ಎಂದು ಅವರು ಹೇಳುತ್ತಾರೆ. ಯಾರಾದರೂ ಭಾರತ ಮತ್ತು ಭಾರತೀಯ ಸೇನೆಯನ್ನು ಇಷ್ಟು ದ್ವೇಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
7. ಹಿಮಂತ ಬಿಸ್ವಾ ಶರ್ಮಾ ಅವರ ಈ ಹೇಳಿಕೆಗೆ ಕಾಂಗ್ರೆಸ್ ಕೂಡ ಪ್ರತಿದಾಳಿ ನಡೆಸಿದೆ. ಇವರೆಲ್ಲರೂ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಸೇನೆಯ ವಿರೋಧಿಯನ್ನಾಗಿ ಬಿಂಬಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಹನಿ ರಕ್ತವನ್ನೂ ಹರಿಸದವನು ಇಂದು ದೇಶಭಕ್ತನಾಗಿದ್ದಾನೆ. ಆದರೆ ಆ ಕುಟುಂಬ ದೇಶವನ್ನು ರಕ್ಷಿಸಲು 2 ಪ್ರಧಾನಿಗಳನ್ನೇ ಅರ್ಪಿಸಿತು ಎಂದಿದ್ದಾರೆ.
8. ಪ್ರತಿಪಕ್ಷಗಳು ಯಾವುದಾದರೂ ವಿಷಯದ ಬಗ್ಗೆ ಸರ್ಕಾರವನ್ನು ಎಚ್ಚರಿಸಿದರೆ ಅದು ಅಪರಾಧವೇ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ. ಭಾರತ ಮತ್ತು ಚೀನಾ ನಡುವೆ ಎಲ್ಲವೂ ಸರಿಯಾಗಿದ್ದರೆ, ಯಥಾಸ್ಥಿತಿಯನ್ನು ಪುನಃಸ್ಥಾಪಿಸುವ ಅಗತ್ಯವೇನು? ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಲ್ಲಿ ನಮ್ಮ ಸೈನ್ಯ ಭಯವಿಲ್ಲದೇ ಗಸ್ತು ತಿರುಗುತ್ತಿತ್ತು. ಆದರೀಗ ಅವರಿಗೆ ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
9. ಚೀನಾವನ್ನು ಶಿಕ್ಷಿಸುವ ಬದಲು ಚೀನಾದ ವ್ಯವಹಾರಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದೂ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ. 3,560 ಭಾರತೀಯ ಕಂಪನಿಗಳು ಚೀನಾದ ನಿರ್ದೇಶಕರನ್ನು ಹೊಂದಿವೆ. ಇದನ್ನು ನಾನು ಪ್ರಶ್ನಿಸುತ್ತೇನೆ, ಈ ಬಗ್ಗೆ ಪರಿಶೀಲನೆ ನಡೆಸಿ. ಈ ವಿಷಯಗಳನ್ನು ಸಂಸತ್ತಿನಲ್ಲಿ ಮುಕ್ತವಾಗಿ ಚರ್ಚಿಸಿ. ರಾಹುಲ್ ಗಾಂಧಿ ಈ ವಿಷಯಗಳನ್ನು ಸರ್ಕಾರಕ್ಕೆ ತಿಳಿಸಿದ್ದು ಸರ್ಕಾರಕ್ಕೆ ಇಷ್ಟವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
10. ಇನ್ನು ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ತ್ಸೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಚಕಮಕಿಯಲ್ಲಿ ಉಭಯ ದೇಶಗಳ ಯೋಧರು ಗಾಯಗೊಂಡಿದ್ದಾರೆ. ಚೀನಾ ಹೆಚ್ಚು ಹಾನಿ ಅನುಭವಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ